ಸೋಮವಾರಪೇಟೆ, ಜು.6 : ಉತ್ತರ ಕೊಡಗಿನ ಮಾದಾಪುರ ಬಳಿಯ ಗರಗಂದೂರು ಮೊರಾರ್ಜಿ ದೇಸಾಯಿ ವಿಜ್ಞಾನ ಪದವಿ ಪೂರ್ವ ಕಾಲೇಜಿನಲ್ಲಿ ಕೊಡಗು ಅರಣ್ಯ ವೃತ್ತದ ಸೋಮವಾರಪೇಟೆ ಅರಣ್ಯ ವಲಯ ಅರಣ್ಯಾಧಿಕಾರಿ ಕಚೇರಿ, ಜಿಲ್ಲಾ ರಾಷ್ಟ್ರೀಯ ಹಸಿರು ಪಡೆ ಇಕೋ ಕ್ಲಬ್, ಸೋಮವಾರಪೇಟೆ ಲಯನ್ಸ್ ಕ್ಲಬ್
ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಸಮಿತಿಯ ವತಿಯಿಂದ ‘ನನ್ನ ಗಿಡ ನನ್ನ ಹೆಮ್ಮೆ’ ಯೋಜನೆಯಡಿ ವನ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ
ಸಸಿ ನೆಡುವ ಸಪ್ತಾಹದಲ್ಲಿ 50 ಗಿಡಗಳನ್ನು ನೆಡುವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
“ಅರಣ್ಯ ಸಂರಕ್ಷಣೆ ಮತ್ತು ವನ ಮಹೋತ್ಸವ”ದ ಮಹತ್ವ ಕುರಿತು ಮಾಹಿತಿ ನೀಡಿ ಪರಿಸರ ರಕ್ಷಣೆ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃರಾದ ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ, ಪರಿಸರ ಪ್ರೇಮಿ, ರಾಷ್ಟ್ರೀಯ ಹಸಿರು ಪಡೆಯ ಜಿಲ್ಲಾ ನೋಡಲ್ ಅಧಿಕಾರಿ ಟಿ.ಜಿ.ಪ್ರೇಮಕುಮಾರ್ , ಪರಿಸರ ಸಂರಕ್ಷಣೆ ಇಂದು ತೀರಾ ಅಗತ್ಯವಾಗಿದ್ದು, ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ ಎಂದರು.
ಪರಿಸರದಲ್ಲಿ ಹಸಿರು ಹೊದಿಕೆಯ ಕ್ರಾಂತಿಗಾಗಿ ವಿದ್ಯಾರ್ಥಿಗಳು ಪರಿಸರ ಉಳಿಸಿ, ಬೆಳೆಸಿ ಸಂರಕ್ಷಿಸಲು ಸಂಕಲ್ಪ ಮಾಡಬೇಕು. ಆರೋಗ್ಯಪೂರ್ಣ ಬದುಕಿಗೆ ಗಿಡ- ಮರಗಳೇ ಆಧಾರವಾಗಿದ್ದು, ನಮಗೆ ಗಾಳಿ , ನೀರು, ನೆರಳು, ಹಣ್ಣು- ಹಂಪಲು ನೀಡುವ ವೃಕ್ಷಗಳನ್ನು ಬೆಳೆಸಿ ಸಂರಕ್ಷಿಸುವ ಹೊಣೆ ನಮ್ಮ ಮೇಲಿದೆ ಎಂದರು.
ಪರಿಸರದ ಬಗ್ಗೆ ಎಲ್ಲರಲ್ಲಿ ಕಾಳಜಿ ಮೂಡಬೇಕು, ಪ್ರತಿಯೊಬ್ಬರು ತಮ್ಮ ಹುಟ್ಟುಹಬ್ಬದಂದು ಒಂದು ಸಸಿ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಹಸಿರು ಪರಿಸರ ನಿರ್ಮಾಣಕ್ಕೆ ಪಣ ತೊಡಬೇಕು ಎಂದರು.
ಪ್ರತಿಯೊಬ್ಬರು ಗಿಡ ನೆಟ್ಟು ಬೆಳೆಸಿ ಪರಿಸರ ಕಾಪಾಡುವ ಮೂಲಕ ಮುಂದಿನ ಪೀಳಿಗೆಯ ಉತ್ತಮ ಜೀವನ ನಿರ್ವಹಣೆಗೆ ನಾಂದಿ ಹಾಡಬೇಕು ಎಂದು ಪ್ರೇಮಕುಮಾರ್ ಹೇಳಿದರು.
ವಲಯ ಅರಣ್ಯಾಧಿಕಾರಿ ಎಚ್.ಪಿ.ಚೇತನ್ ಮಾತನಾಡಿ, ರಾಜ್ಯದಲ್ಲಿ ಹಸಿರು ಪ್ರದೇಶವನ್ನು ವೃದ್ಧಿಸುವ ದಿಸೆಯಲ್ಲಿ ಹಮ್ಮಿಕೊಂಡಿರುವ ವೃಕ್ಷ ಕೋಟಿ ಅಭಿಯಾನದಡಿ ರಾಜ್ಯಾದ್ಯಂತ ಈ ವರ್ಷ 5 ಕೋಟಿ ಗಿಡಗಳನ್ನು ನೆಟ್ಟು ಬೆಳೆಸುವ ಸಂಕಲ್ಪ ಮಾಡಲಾಗಿದ್ದು, ಸೋಮವಾರಪೇಟೆ ಅರಣ್ಯ ವಲಯದಲ್ಲಿ 15 ಸಾವಿರ ಸಸಿಗಳನ್ನು ನೆಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದರು.
ನಾವು ಸ್ವಚ್ಛ ಪರಿಸರ ನಿರ್ಮಾಣಕ್ಕಾಗಿ ಜನರ ಸಹಭಾಗಿತ್ವದಲ್ಲಿ ಅರಣ್ಯ ಸಂರಕ್ಷಣೆ ಹಾಗೂ ಸಸಿ ಬೆಳಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಗಿಡ ನೆಡುವ ಸಪ್ತಾಹಕ್ಕೆ ಚಾಲನೆ ನೀಡಿದ ಸೋಮವಾರಪೇಟೆ ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಎಸ್.ಮಹೇಶ್
ಮಾತನಾಡಿ, ವಿದ್ಯಾರ್ಥಿಗಳು ಪರಿಸರ ಮಾತೆ ಸಾಲುಮರದ ತಿಮ್ಮಕ್ಕ ಅವರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ
ತಮ್ಮ ಪರಿಸರದಲ್ಲಿ ಗಿಡನೆಟ್ಟು ಬೆಳೆಸಲು ಪಣ ತೊಡಬೇಕು ಎಂದರು.
ಪರಿಸರ ರಕ್ಷಣೆ ನಮ್ಮ ಮನೆಯಿಂದ ಅಲ್ಲ ನಮ್ಮ ಮನಸ್ಸಿನಿಂದ ಆಗಬೇಕಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಎನ್.ಮಹೇಂದ್ರ ಮಾತನಾಡಿ, ನಾವು ಗಿಡನೆಟ್ಟು ಬೆಳೆಸುವ ಮೂಲಕ ಪರಿಸರ ಸಂರಕ್ಷಣೆಗೆ ಪಣ ತೊಡಬೇಕು ಎಂದರು.
ವೃಕ್ಷ ಆಂದೋಲನದ ಕುರಿತು ಲಯನ್ಸ್ ಕ್ಲಬ್ ನ ವಲಯಾಧ್ಯಕ್ಷ ಸಿ.ಕೆ.ರೋಹಿತ್ ಮಾತನಾಡಿದರು.
ಡಿ ಆರ್ ಎಫ್ ಓ ವೈ.ಕೆ.ಜಗದೀಶ್ ವನ ಮಹೋತ್ಸವದ ಕುರಿತು ತಿಳಿಸಿದರು.
ಗರಗಂದೂರು ಗ್ರಾ.ಪಂ.ಅಧ್ಯಕ್ಷ ಡಿ.ಡಿ.ಪದ್ಮನಾಭ, ಸದಸ್ಯ ರಮೇಶ್, ಪಿಡಿಓ ಪೂರ್ಣಿಮ,
ಡಿ ಆರ್ ಎಫ್ ಓ ವೈ.ಕೆ.ಜಗದೀಶ್, ಗಸ್ತು ವನ ಪಾಲಕರಾದ ಬಿ.ಎ.ಭರ್ಮಣ್ಣ, ಲೋಕೇಶ್ , ಸ್ಥಳೀಯರಾದ ಪಾಸುರ ಅಯ್ಯಪ್ಪ , ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.
ಉಪನ್ಯಾಸಕಿ ನೀಲಜಾ ಸ್ವಾಗತಿಸಿದರು. ಉಪನ್ಯಾಸಕ ಕೆ.ಪಿ. ಪಾಪಣ್ಣ ವಂದಿಸಿದರು.
ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಭಿತ್ತಿ ಫಲಕಗಳನ್ನು ಹಿಡಿದು ಹಸಿರೇ ಉಸಿರು, ಕಾಡೇ ರಾಷ್ಟ್ರದ ಸಂಪತ್ತು, ಅರಣ್ಯ ಸಂರಕ್ಷಣೆ ನಮ್ಮೆಲ್ಲರ ಹೊಣೆ, ಗಿಡನೆಟ್ಟು ಬೆಳೆಸೋಣ ಬನ್ನಿ ಎಂಬಿತ್ಯಾದಿ ಪರಿಸರ ಘೋಷಣೆಗಳನ್ನು ಪ್ರಚುರಪಡಿಸಿದರು.