ನಾಪೋಕ್ಲು ಜು.12 : ಜೀವನದಲ್ಲಿ ಪ್ರತಿಯೊಂದು ಕ್ಷಣವು ಅತ್ಯಮೂಲ್ಯವಾದದ್ದು, ಸಮಯವನ್ನು ವ್ಯರ್ಥ ಮಾಡದೆ ಅನುಭವಿಸಿ ಸಂಭ್ರಮಿಸುವುದರ ಮೂಲಕ ಸಾಧನೆ ಮಾಡಿ ಉನ್ನತಿಯನ್ನು ಹೊಂದಬೇಕು ಎಂದು ಕರ್ನಾಟಕ ಜನಪದ ಪರಿಷತ್ ಕೊಡಗು ಜಿಲ್ಲಾಧ್ಯಕ್ಷ, ಶಕ್ತಿ ಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಹೇಳಿದರು.
ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕ್ರೀಡಾ ಸಾಂಸ್ಕೃತಿಕ ಮತ್ತು ಸಹಪಠ್ಯ ಚಟುವಟಿಕೆಗಳ ಸಮಾರೋಪ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಗಿಡಕ್ಕೆ ನೀರು ಹಾಕುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರಲ್ಲೂ ಅಪಾರವಾದ ಶಕ್ತಿ ಇದೆ. ಅಸಾಧ್ಯವಾದದನ್ನು ಸಾಧ್ಯ ಮಾಡಿಕೊಂಡು ಹೆಜ್ಜೆ ಗುರುತು ಮೂಡಿಸಿ ಮಾದರಿಯಾಗಬೇಕು ಎಂದ ಅವರು ಗುರುಹಿರಿಯರಿಗೆ ಹಾಗೂ ಸೈನಿಕರನ್ನು ಗೌರವಿಸುವುದರ ಮೂಲಕ ಸತ್ಪ್ರಜೆಯಾಗಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿ, ಹಾಡು ಹಾಡುವುದರ ಮೂಲಕ ಮನೋರಂಜನೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಕಾವೇರಿ ಪ್ರಕಾಶ್ ವಹಿಸಿದ್ದು, ವೇದಿಕೆಯಲ್ಲಿ ಅತಿಥಿಗಳಾಗಿ ಜನಪದ ಪರಿಷತ್ ಕಾರ್ಯದರ್ಶಿ ಅಂಬೆಕಲ್ ಕುಶಾಲಪ್ಪ, ಮಡಿಕೇರಿ ರೋಟರಿ ಕ್ಲಬ್, ಮಿಸ್ಟ್ ಹಿಲ್ಸ್ ಅಧ್ಯಕ್ಷ ರತ್ನಾಕರ ರೈ, ಕಾಲೇಜಿನ ಐ.ಕ್ಯೂ.ಎ.ಸಿ, ಸಂಚಾಲಕ ಎಚ್.ಎಸ್.ನಂದೀಶ್, ಸಂಸ್ಕೃತಿಕ ಸಮಿತಿ ಸಂಚಾಲಕ ಮನೋಜ್ ಕುಮಾರ್, ಕ್ರೀಡಾ ವಿಭಾಗದ ಸಂಚಾಲಕ ಮುದ್ದಪ್ಪ ಕೆ.ಎಂ ಉಪಸ್ಥಿತರಿದ್ದರು.
ಈ ಸಂದರ್ಭ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ವೇದಿಕೆಯಲ್ಲಿದ್ದ ಗಣ್ಯರು ಅರ್ಹತಾ ಪತ್ರ ಹಾಗೂ ನೆನಪಿನ ಕಾಣಿಕೆ ವಿತರಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕರ್ನಾಟಕ ಜನಪದ ಪರಿಷತ್ ಕೊಡಗು ಜಿಲ್ಲಾ ಅಧ್ಯಕ್ಷ ಬಿ.ಜಿ.ಅನಂತಶಯನ ಅವರನ್ನು ಕಾಲೇಜಿನ ಪರವಾಗಿ ಸಾಲು ಒದಿಸಿ ಫಲ ತಾಂಬೂಲ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು.
ಉಪನ್ಯಾಸಕಿ ಗೌರಮ್ಮ ಸ್ವಾಗತಿಸಿದರು. ಉಪನ್ಯಾಸಕಿ ಯಶೋಧ ನಿರೂಪಿಸಿದರು, ಮನೋಜ್ ಕುಮಾರ್ ಕಾಲೇಜಿನ ವಾರ್ಷಿಕ ವರದಿಯನ್ನು ವಾಚಿಸಿದರು, ಉಪನ್ಯಾಸ ತ್ಯಾಗರಾಜ್ ಮುಖ್ಯ ಅತಿಥಿಯನ್ನು ಪರಿಚಯಿಸಿದರು.
ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವರದಿ : ದುಗ್ಗಳ ಸದಾನಂದ








