ನಾಪೋಕ್ಲು ಜು.20 : ನಾಪೋಕ್ಲುವಿನಲ್ಲಿ ಸಮುದಾಯ ಆರೋಗ್ಯ ಕೇಂದ್ರವಿದ್ದರೂ ಸೂಕ್ತ ಸೌಲಭ್ಯವಿಲ್ಲದೆ ಜನ ಸಾಮಾನ್ಯರಿಗೆ ಪ್ರಯೋಜನವಾಗುತ್ತಿಲ್ಲ. ಗ್ರಾಮೀಣ ಪ್ರದೇಶಗಳಿಂದ ಬರುವ ರೋಗಿಗಳಿಗೆ ಅಗತ್ಯ ಚಿಕಿತ್ಸೆ ಸಿಗದೇ ಪರದಾಡುವಂತಾಗಿದೆ. ಸಮುದಾಯ ಆರೋಗ್ಯ ಕೇಂದ್ರದ ಸಮಸ್ಯೆಗಳನ್ನು ಬಗೆಹರಿಸಿ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ನಾಪೋಕ್ಲು ಕೊಡವ ಸಮಾಜದಲ್ಲಿ ಜರುಗಿದ ಗ್ರಾಮ ಸಭೆಯಲ್ಲಿ ಆಗ್ರಹಿಸಿದ ಗ್ರಾಮಸ್ಥರು, ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎರಡು ಅಂತಸ್ತಿನ ಕಟ್ಟಡವಿದೆ. ಆದರೆ ಅಗತ್ಯಕ್ಕೆ ತಕ್ಕಷ್ಟು ಸೌಲಭ್ಯಗಳಿಲ್ಲ. 32 ಸಿಬ್ಬಂದಿಗಳಿದ್ದರೂ ವೈದ್ಯರ ಕೊರತೆಯು ಕಾಡುತ್ತಿದೆ. ನಾಪೋಕ್ಲು ಹೋಬಳಿಯ ಸುಮಾರು 27 ಗ್ರಾಮಗಳ ಮಂದಿ ಚಿಕಿತ್ಸೆಗಾಗಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುತ್ತಿದ್ದು, ಸೂಕ್ತ ಸೌಕರ್ಯವಿಲ್ಲದೆ ಸಮಸ್ಯೆ ಎದುರಿಸುವಂತಾಗಿದೆ. ಈ ಬಗ್ಗೆ ಸಂಬಂಧಪಟ್ಟವರು ಕೂಡಲೇ ಗಮನಹರಿಸಬೇಕು ಎಂದು ಒತ್ತಾಯಿಸಿದರು.
ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಸಾರ್ವಜನಿಕರ ಕೆಲಸ ಕಾರ್ಯಗಳು ವಿಳಂಬವಾಗುತ್ತಿದೆ ಎಂದು ಆರೋಪಿಸಿದರು.
ಕಸ ವಿಲೇವಾರಿಯ ಸಮಸ್ಯೆ ತಲೆದೋರಿದೆ ಸಮರ್ಪಕ ನಿರ್ವಹಣೆ ಆಗುತ್ತಿಲ್ಲ ಕೂಡಲೇ ಜಾಗ ಗುರುತಿಸಿ ಸಮಸ್ಯೆ ಪರಿಹರಿಸಬೇಕು. ಮಾದಕ ವಸ್ತುಗಳ ಅಕ್ರಮ ಮಾರಾಟವು ಅಲ್ಲಲ್ಲಿ ಕಂಡುಬರುತ್ತದೆ ಮಾದಕ ವ್ಯಾಸನಿಗಳ ಸಂಖ್ಯೆ ಹೆಚ್ಚಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ರಸ್ತೆ ಕಾಮಗಾರಿ ಅವೈಜ್ಞಾನಿಕವಾಗಿ ನಿರ್ಮಿಸಲಾಗಿದ್ದು, ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ಬಂದಾಗ ಸಮಸ್ಯೆ ಕಾಡುತ್ತದೆ. ಸಮೀಪದ ಕಾವೇರಿ ನದಿಯ ದಡದಲ್ಲಿರುವ ಚೆರಿಯಪರಂಬು ವಿನಲ್ಲಿ ಹಲವರು ಅನಧಿಕೃತವಾಗಿ ಮನೆಗಳನ್ನು ನಿರ್ಮಿಸಿಕೊಂಡಿದ್ದು ನಿಜವಾದ ಫಲಾನುಭವಿಗಳಿಗೆ ಸೌಲಭ್ಯ ಸಿಗುತ್ತಿಲ್ಲ ಎಂದು ದೂರಿದರು.
ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಇಲ್ಲಿನ ಸರ್ಕಾರಿ ಕಾಲೇಜಿನ ಜಾಗ ಒತ್ತುವರಿಯಾಗಿದ್ದು ಸಂಬಂಧಿಸಿದಂತೆ ಸರ್ವೆ ಕಾರ್ಯ ನಡೆದಿದೆ. ಆದರೂ ತೆರವು ಕಾರ್ಯ ಆಗಿಲ್ಲ ಈ ಬಗ್ಗೆ ಯಾಕೆ ಕ್ರಮ ಕೈಗೊಂಡಿಲ್ಲ. ಗ್ರಾ.ಪಂ ವತಿಯಿಂದ ಪಟ್ಟಣದಲ್ಲಿರುವ ವಾಣಿಜ್ಯ ಕಟ್ಟಡ ಹಾಗೂ ಮನೆಗಳಿಗೆ ವಿಧಿಸುತ್ತಿರುವ ತೆರಿಗೆ ಅಸಮರ್ಪಕವಾಗಿದೆ. ಸೂಕ್ತವಾದ ತೆರಿಗೆ ವಿಧಿಸಿದರೆ ಪಂಚಾಯಿತಿಗೂ ಅಗತ್ಯ ಆದಾಯ ಲಭಿಸಲಿದೆ. ಜಲಜೀವನ್ ಮಿಷನ್ಸಮರ್ಪಕ ಅನುಷ್ಠಾನ ಆಗಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಕೊಡವ ಸಮಾಜದ ರಸ್ತೆಯಲ್ಲಿ ಗುಂಡಿ ಇದ್ದು ಮಳೆ ನೀರು ತುಂಬಿ ಸವಾರರಿಗೆ ತೊಂದರೆಯಾಗುತ್ತಿದೆ. ಇದನ್ನು ಶೀಘ್ರವೇ ಸರಿಪಡಿಸಬೇಕು ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಸಾರ್ವಜನಿಕರು ಒತ್ತಾಯಿಸಿದರು.
ಗ್ರಾಮ ಸಭೆಯಲ್ಲಿ ಪಾಲ್ಗೊಂಡಿದ್ದ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿ ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.
ಗ್ರಾ.ಪಂ ಅಧ್ಯಕ್ಷರಾದ ಹೆಚ್.ಎಸ್.ಪಾರ್ವತಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನೋಡಲ್ ಅಧಿಕಾರಿಯಾಗಿ ಮಡಿಕೇರಿ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಹೇಮಂತ್ ಕುಮಾರ್ ಪಾಲ್ಗೊಂಡಿದ್ದರು.
ಈ ಸಂದರ್ಭ ಪಿಡಿಓ ಚೋದಕ್ಕಿ, ಗ್ರಾ.ಪಂ ಸದಸ್ಯ ಕುಲೇಟಿರ ಅರುಣ್ ಬೇಬ, ಇಸ್ಮೈಲ್, ಪ್ರತೀಪ, ಖುರೇಶಿ, ಸುಧಿ ತಿಮ್ಮಯ್ಯ ಗ್ರಾಮಸ್ಥರ ಪ್ರಶ್ನೆಗಳಿಗೆ ಸಮಜಾಯಿಕೆ ಉತ್ತರಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆಯನ್ನು ನೀಡಿದರು.
ಗ್ರಾಮಸ್ಥರಾದ ಕಾಂಡಂಡ ಜೋಯಪ್ಪ, ಕೊಂಡಿರ ನಾಣಯ್ಯ, ಕೆ.ಎ.ಹ್ಯಾರಿಸ್, ಕುಲ್ಲೇಟಿರ ಅಜಿತ್ ನಾಣಯ್ಯ, ಕಂಗಾಂಡ ಜಾಲಿ ಪೂವಪ್ಪ, ಕಾಂಡಂಡ ವಿಶುಪುವಯ್ಯ, ಅರೆಯಡ ನಾಣಯ್ಯ ,ಬಾಲೆಯಡ ವೇದಪ್ಪ ಸೇರಿದಂತೆ ಇನ್ನಿತರರು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಸಲಹೆ ಸೂಚನೆಗಳನ್ನು ನೀಡಿ ಸೂಕ್ತ ಕ್ರಮಕ್ಕೆ ಆಗ್ರಹಿಸಿದರು .
ಪಂಚಾಯಿತಿ ಸಿಬ್ಬಂದಿಗಳು ಹಾಗೂ ಅಂಗನವಾಡಿ, ಸ್ವಸಹಾಯ ಸಂಘದ ಪದಾಧಿಕಾರಿಗಳು, ಸದಸ್ಯರು ಸಾರ್ವಜನಿಕರು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ








