ಮಡಿಕೇರಿ ಜು.12 : ಕೊಡಗಿನ ಪ್ರತಿ ಮನೆಯಲ್ಲಿ ಓರ್ವ ಸದಸ್ಯರನ್ನು ರಾಜ್ಯ ಮತ್ತು ಕೇಂದ್ರ ಸರಕಾರಿ ಉದ್ಯೋಗಿಯನ್ನಾಗಿ ಮಾಡುವ ಅಗತ್ಯತೆ ಹೆಚ್ಚಿದೆ. ಕೊಡಗಿನ ಯುವಕರು ಕ್ರೀಡೆಯ ಮೂಲಕವೇ ಪೊಲೀಸ್ ಇಲಾಖೆಯಲ್ಲಿ ಹೆಚ್ಚಿನ ಅವಕಾಶವನ್ನು ಪಡೆದುಕೊಳ್ಳಬಹುದು. ಆದರೆ ದುರಾದೃಷ್ಟವಶಾತ್ ಕೊಡಗಿನ ಯುವ ತಲೆಮಾರು ಸರಕಾರಿ ಉದ್ಯೋಗವನ್ನು ಪಡೆದುಕೊಳ್ಳುವ ಬಗ್ಗೆ ತಾತ್ಸಾರ ಮನೋಭಾವನ್ನು ಹೊಂದಿದ್ದಾರೆ. ಈ ಕುರಿತು ನಮ್ಮೊಳಗೆ ನಾವು ನಮ್ಮನ್ನು ಪರಾಮರ್ಶೆಗೆ ಒಳಪಡಿಸಿಕೊಳ್ಳಬೇಕು ಎಂದು ಕೊಡಗು ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ ಡಾ.ರೂಪಾ ಅಭಿಪ್ರಾಯಪಟ್ಟರು.
ಮಡಿಕೇರಿಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಐಕ್ಯೂಎಸಿ, ಪ್ಲೇಸ್ ಮೆಂಟ್ ಮತ್ತು ಸ್ಕಿಲ್ ಡೆವಲಪ್ಮೆಂಟ್ ಕೋಶ( ವಿಭಾಗದ)ಗಳ ವತಿಯಿಂದ ಜಿಲ್ಲಾ ಉದ್ಯೋಗ ವಿನಿಮಯ ಮಾಹಿತಿ ಕೇಂದ್ರದ ಸಹಯೋಗದಲ್ಲಿ ನಡೆಸಲಾದ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸರಕಾರಿ ಮತ್ತು ಖಾಸಗಿ ಔದ್ಯೋಗಿಕ ಅವಕಾಶಗಳ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದ ಐಕ್ಯೂಎಸಿ ಕೋಶದ ಸಂಯೋಜಕ ಡಾ. ಆರ್.ರಾಜೇಂದ್ರ ಮಾತನಾಡಿ, ವಿವಿಧ ಹುದ್ದೆಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಇದೊಂದು ಸಂಕ್ರಮಣ ಕಾಲ. ಮಾನವಸಂಪನ್ಮೂಲ ದೇಶ ಅಭಿವೃದ್ಧಿಗೆ ಪೂರಕವಾಗಿರಬೇಕು. ನಮ್ಮ ದೇಶದಲ್ಲಿ 7.43ರಷ್ಟು ನಿರುದ್ಯೋಗದ ಪ್ರಮಾಣ ಇದೆ. ಯುವ ಜನಾಂಗವನ್ನು ಸ್ವ ಉದ್ಯೋಗಿಗಳನ್ನಾಗಿ ಮಾಡಲು ಹಲವು ನೆಲೆಯಲ್ಲಿ ಶೈಕ್ಷಣಿಕ ಸಂಸ್ಥೆಗಳು ಶ್ರಮಿಸಬೇಕಾಗಿದೆ. ಶಿಕ್ಷಣದ ಜೊತೆಯಲ್ಲಿ ತರಬೇತಿ ಮತ್ತು ಕೌಶಲ್ಯದಿಂದ ಔದ್ಯೋಗಿಕ ಅವಕಾಶ ಕಲ್ಪಿಸಿಕೊಟ್ಟರೆ ಸುಭದ್ರವಾದ ಆರ್ಥಿಕತೆಯನ್ನು ಕಟ್ಟಲು ಸಾಧ್ಯ ಎಂದರು.
ವಿಶ್ವ ಬ್ಯಾಂಕ್ ನ ವರದಿಯ ಪ್ರಕಾರ ಜಿಡಿಪಿಯ ಪ್ರಮಾಣ ಹೆಚ್ಚಾಗಲು ಕೌಶಲ್ಯ ಆಧಾರಿತವಾದ ಔದ್ಯೋಗಿಕ ನೆಲೆಗಟ್ಟು ಅಗತ್ಯವಾಗಿದೆ. ಉದ್ಯೋಗವು ಮನುಷ್ಯರ ಲಕ್ಷಣ. ಸಾಮಾನ್ಯ ಜನತೆಯು ಔದ್ಯೋಗಿಕ ಬದುಕಿನ ಮೂಲಕ ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಪ್ರತಿ ವರ್ಷ ಶೈಕ್ಷಣಿಕ ಸಂಸ್ಥೆಯಿಂದ ಸಾವಿರಾರು ವಿದ್ಯಾರ್ಥಿಗಳು ಉತ್ಪಾದಿಸಲ್ಪಡುತ್ತಾರೆ. ಅವರೆಲ್ಲರೂ ಸಮಗ್ರ ಆರ್ಥಿಕ ಪ್ರಗತಿಗೆ ಸಹಕಾರಿಯಾಗಬೇಕಾದರೆ ಉದ್ಯೋಗಿಗಳಾಗಬೇಕು ಎಂದು ಕಾಲೇಜಿನ ಪ್ರಾಂಶುಪಾಲ ಮೇಜರ್ ಪ್ರೊ. ಬಿ. ರಾಘವ ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಪ್ರಾಧ್ಯಾಪಕ ರವಿಶಂಕರ್, ಪ್ರೊ. ಗಾಯತ್ರಿ ದೇವಿ, ಡಾ. ಪ್ರದೀಪ್ ಭಂಡಾರಿ, ಡಾ.ಶೈಲಶ್ರೀ, ಡಾ.ರೇಣುಶ್ರೀ ಹಾಗೂ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಅಧಿಕಾರಿಗಳು ಉಪಸ್ಥಿತರಿದ್ದರು.
ಅರ್ಥಶಾಸ್ತ್ರ ವಿಭಾಗದ ಅಧ್ಯಾಪಕ ಸಚಿನ್ ನಿರೂಪಿಸಿದರು. ಕಾರ್ಯಾಗಾರದ ಕೊನೆಯಲ್ಲಿ ವಿದ್ಯಾರ್ಥಿಗಳ ಜೊತೆಯಲ್ಲಿ ಪ್ರಶ್ನೋತ್ತರ ಸಂವಾದವನ್ನು ಏರ್ಪಡಿಸಲಾಯಿತು.







