ನಾಪೋಕ್ಲು ಜು.19 : ಮರಂದೋಡ ಗ್ರಾಮದಲ್ಲಿ ಮರವೊಂದು ಮುರಿದು ವಿದ್ಯುತ್ ಕಂಬದ ಮೇಲೆ ಬಿದ್ದ ಪರಿಣಾಮ ವಿದ್ಯುತ್ ತಂತಿಗಳು ತುಂಡಾಗಿ ರಸ್ತೆಯ ಮೇಲೆ ಬಿದ್ದು ಜನರು ಸಂಕಷ್ಟಕ್ಕೆ ಸಿಲುಕುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮರಂದೋಡ ಗ್ರಾಮದ ಕೆರೆತಟ್ ರಸ್ತೆಯ ಸಮೀಪ ನಾಪೋಕ್ಲು – ವಿರಾಜಪೇಟೆ ಮುಖ್ಯರಸ್ತೆಯ ಮೇಲೆ ಮರ ಮುರಿದುಬಿದ್ದಿದ್ದು, ಸ್ಥಳೀಯರಾದ ಗ್ರಾ.ಪಂ ಸದಸ್ಯ ಹರೀಶ್ ಮೊಣ್ಣಪ್ಪ ಮರ ತೆರವುಗೊಳಿಸುವುದರ ಮೂಲಕ ಬಸ್ಸು ಸಂಚಾರಕ್ಕೆ ಅನುವು ಮಾಡಿಕೊಟ್ಟರು.
11 ಕೆ.ವಿ.ವಿದ್ಯುತ್ ತಂತಿಯ ಮೇಲೆ ಮರ ಬಿದ್ದಿದ್ದು ತಂತಿಗಳು ತುಂಡಾಗಿ ಸಮಸ್ಯೆಗೆ ಕಾರಣವಾಗಿತ್ತು. ಬೆಂಗಳೂರಿನಿಂದ ಮಡಿಕೇರಿಗೆ ಬಸ್ಸು ಬರುವ ಸಂದರ್ಭ ತೊಂದರೆ ಆಗುತ್ತಿದ್ದುದನ್ನು ಮನಗಂಡು ಹರೀಶ್ ಮೊಣ್ಣಪ್ಪ ಸಕಾಲದಲ್ಲಿ ಸ್ಥಳಕ್ಕೆ ತೆರಳಿ ಕಟ್ಟಿಂಗ್ ಮಿಷನ್ ನಿಂದ ಮರ ತೆರವುಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಹರೀಶ್ ಮೊಣ್ಣಪ್ಪ ಅವರ ಕಾರ್ಯಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು.
ವರದಿ : ದುಗ್ಗಳ ಸದಾನಂದ