ಸುಂಟಿಕೊಪ್ಪ,ಜು.20 : ಇಂದಿನ ದಿನಗಳಲ್ಲಿ ನಾವು ಎಷ್ಟೇ ಸಿರಿವಂತಿಕೆಯನ್ನು ಹೊಂದಿದ್ದರು ಶಿಕ್ಷಣ ಇಲ್ಲದಿದ್ದರೆ ಆತ ಬಡವನೆಂದು ಸಮಾಜದಲ್ಲಿ ಪರಿಗಣಿಸುತ್ತದೆ ಎಂದು ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ಹೇಳಿದರು.
ಸುಂಟಿಕೊಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿದ್ಯಾರ್ಥಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಉದ್ಘಾಟನೆ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳನ್ನು ಸ್ವಾಗತಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಶೈಕ್ಷಣಿಕ ಜೀವನದಲ್ಲಿ ಹೊಂದಿರಬೇಕು. ಅದರ ಸಕಾರಕ್ಕೆ ಶ್ರದ್ಧೆಯಿಂದ ಅಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರಲ್ಲದೆ, ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕಿವಿ ಮಾತು ಹೇಳಿದರು.
ವಿದ್ಯಾರ್ಥಿಯಾಗಿದ್ದಾಗ ಮಾಡಿದ ಸಾಧನೆಯನ್ನು ಉದಾಹರಣೆಯಾಗಿ ತೆಗೆದುಕೊಂಡು ವಿದ್ಯಾರ್ಥಿಗಳನ್ನು ಉತ್ತೇಜಿಸಿದರು. ಕಾನೂನು ಮಹತ್ವತೆಯ ಬಗ್ಗೆ ಮಾಹಿತಿ ನೀಡಿದರು.
ಸುಂಟಿಕೊಪ್ಪ ಪೊಲೀಸ್ ಠಾಣೆಯ ಎ ಎಸ್ ಐ ಶಿವಣ್ಣ ಮಾತನಾಡಿ, ಮಾದಕ ವ್ಯಸನದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು. ಮಾದಕ ವ್ಯಸಗಳಿಗೆ ದಾಸರಾದರೆ ವಿದ್ಯಾರ್ಥಿ ಜೀವನವು ನರಕ ಸದೃಶ್ಯವಾಗಿತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪಿ.ಎಸ್ .ಜಾನ್, ವಿದ್ಯಾರ್ಥಿಗಳು ತಮ್ಮಲ್ಲಿರುವ ಸೂಕ್ತ ಪ್ರತಿಭೆಯನ್ನು ಗುರುತಿಸಲು ಇಂತಹ ಕಾರ್ಯಕ್ರಮಗಳು ಸೂಕ್ತ ವೇದಿಕೆಯನ್ನು ಸೃಷ್ಟಿಸಿಕೊಡುತ್ತವೆ ಎಂದರು. ವಿದ್ಯಾರ್ಥಿ ದಿಸೆಯಲ್ಲಿಯೇ ನಾಯಕತ್ವ ಗುಣವನ್ನು ಮೈಗೂಡಿಸಿಕೊಂಡರೆ ಬದುಕಿನಲ್ಲಿ ಬರುವ ಎಂತಹ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಹುದು ಎಂದರು.
ಕಾಲೇಜಿನಲ್ಲಿ ರಚಿತವಾಗಿರುವ 2023-24ನೇ ಸಾಲಿನ ವಿದ್ಯಾರ್ಥಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಎಲ್ಲಾ ಪದಾಧಿಕಾರಿಗಳಿಗೆ ಶುಭಕೋರಿ ಅಭಿನಂದಿಸಿ ಅವರುಗಳು ಹೊಂದಿರುವ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿರುವ ಅಗತ್ಯತೆಯನ್ನು ತಿಳಿಹೇಳಿದರು.
ಇದೇ ಸಂದರ್ಭದಲ್ಲಿ ಎ.ಲೋಕೇಶ್ ಕುಮಾರ್ ಮತ್ತು ಶಿವಣ್ಣ ಅವರುಗಳಿಗೆ ಶಾಲು ಹೊದೆಸಿ ಫಲ ತಾಂಬೂಲ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭ ಉಪನ್ಯಾಸಕ ಈಶ ಅವರು ಸಂಘದ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಭೋಧಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರುಗಳಾದ ಕೆ.ಸಿ.ಕವಿತಾ, ಸುನೀತಾ, ಸರಳಾ, ಪದ್ಮಾವತಿ, ಕವಿತಾಭಕ್ತಾ, ಮಂಜುಳ, ಸುಚಿತ್ರಾ, ಅಭಿಪೇಕ, ಅನುಷ, ಕನಕಾ ಇದ್ದರು.
ಕಾಲೇಜು ನಾಯಕ ಹಸೈನ್ ಸ್ವಾಗತಿಸಿ, ವಿಜು ಪ್ರಾಸ್ತಾವಿಕ ನುಡಿಯಾಡಿದರೆ, ಶ್ವೇತ ನಿರೂಪಿಸಿ, ತಸ್ಮಿಯ ವಂದಿಸಿದರು.










