ಕುಶಾಲನಗರ ಡಿ.17 NEWS DESK : ಭಾರತದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆ ಮತ್ತು ದೇಶಭಕ್ತಿಯ ಮನೋಭಾವವನ್ನು ಉತ್ತೇಜಿಸುವ ನಿಮಿತ್ತ ಕೊಡಗು ಸೈನಿಕ ಶಾಲೆಯಲ್ಲಿ 2025-26ನೇ ಸಾಲಿನ ಬ್ರಹ್ಮಗಿರಿ ಸಹೋದಯ ಕ್ಲಸ್ಟರ್ ಮಟ್ಟದ ಅಂತರ ಶಾಲಾ ಸಾಂಸ್ಕೃತಿಕ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಶಾಲೆಯ ಕುವೆಂಪು ವಿವಿದೊದ್ಧೇಶ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನು ಸೈನಿಕ ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜಿತ್‍ಸಿಂಗ್ ಅವರು ಉದ್ಘಾಟಿಸಿದರು. ಈ ಸಂದರ್ಭ ಶಾಲೆಯ ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪ್ರಕಾಶ್ ರಾವ್, ಉಪ ಪ್ರಾಂಶುಪಾಲ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ, ಹಿರಿಯ ಶಿಕ್ಷಕರಾದ ದಿವ್ಯಾಸಿಂಗ್ ಸೇರಿದಂತೆ ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಸ್ಪರ್ಧೆಯಲ್ಲಿ ಒಟ್ಟು 58 ವಿದ್ಯಾರ್ಥಿಗಳು ಭಾರತದ ವಿವಿಧ ಭಾಗಗಳ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿಬಿಂಬಿಸುವ ಮನಮೋಹಕ ಜನಪದ ನೃತ್ಯ ಹಾಗೂ ಸಮೂಹ ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಿದರು. ಕಾರ್ಯಕ್ರಮಕ್ಕೆ ಏಕತೆ ಮತ್ತು ರಾಷ್ಟ್ರಭಕ್ತಿಯ ಭಾವನೆಯನ್ನು ತುಂಬುವ ಉದ್ದೇಶದಿಂದ ಎಲ್ಲಾ ತಂಡಗಳು ಒಟ್ಟಾಗಿ ಒಂದು ಕನ್ನಡ ದೇಶಭಕ್ತಿ ಗೀತೆಯನ್ನು ಹಾಡಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಸ್ಪರ್ಧೆಯ ಅಂತ್ಯದಲ್ಲಿ ಸೈನಿಕ ಶಾಲೆ ಕೊಡಗು ತನ್ನ ಉತ್ಸಾಹ ಭರಿತ ಮತ್ತು ಶಿಸ್ತಿನ ಪ್ರದರ್ಶನದಲ್ಲಿ ಸಮೂಹ ಜಾನಪದ ನೃತ್ಯ ವಿಭಾಗದ ಪಟ್ಟದ ಕುಣಿತ ಪ್ರದರ್ಶನಕ್ಕಾಗಿ ಪ್ರಥಮ ಸ್ಥಾನ ಪಡೆದುಕೊಂಡಿತು. ಗುಂಪು ಗಾಯನ ಸ್ಪರ್ಧೆಯಲ್ಲಿ ಸುಳ್ಯದ ಕೆವಿಜಿ ಶಾಲೆ ಪ್ರಥಮ ಸ್ಥಾನವನ್ನುಗಳಿಸಿತು. ಒಟ್ಟಾರೆ ಎರಡೂ ವಿಭಾಗಗಳಲ್ಲಿ ಮನೋಜ್ಞವಾದ ಸಾಧನೆಗೈದ ಕೊಡಗು ಸೈನಿಕ ಶಾಲೆ ಚಾಂಪಿಯನ್ ತಂಡವಾಗಿ ಹೊರಹೊಮ್ಮಿತು.











