ಸಿದ್ದಾಪುರ ಜು.28 : ಸಿದ್ದಾಪುರ ಗ್ರಾ.ಪಂ ವ್ಯಾಪ್ತಿಯಲ್ಲಿ ರಾಶಿಗಟ್ಟಲೇ ತ್ಯಾಜ್ಯ ಶೇಖರಣೆಯಾಗಿ ಬಿದ್ದಿದ್ದರೂ ಗ್ರಾ.ಪಂ ಆಡಳಿತ ಮಂಡಳಿ ಕಸವಿಲೇವಾರಿ ಮಾಡದೆ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ನಾಗರಿಕ ಹೋರಾಟ ಸಮಿತಿ ತ್ಯಾಜ್ಯವಿಲೇವಾರಿಗೆ ಶಾಶ್ವತ ಪರಿಹಾರ ಕಲ್ಪಿಸದೇ ಇದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.
ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಹೆಚ್.ಬಿ.ರಮೇಶ್, ಅತೀ ಹೆಚ್ಚು ಆದಾಯಗಳಿಕೆಯ ಪಂಚಾಯಿತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು, ಕಸವಿಲೇವಾರಿ ಗೆ ಶಾಶ್ವತ ಪರಿಹಾರವಾಗಿ ಜಾಗ ಕಂಡುಕೊಳ್ಳಲು ಸಾಧ್ಯವಾಗಿಲ್ಲ ಎಂದು ಆರೋಪಿಸಿದರು.
ಈ ಸಂಬಂಧ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ತಾಲೂಕು ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾ.ಪಂ ಮಾಜಿ ಉಪಾಧ್ಯಕ್ಷ ಎಂ.ಹೆಚ್, ಮೂಸ ಮಾತನಾಡಿ, ಗ್ರಾ.ಪಂ ಯಲ್ಲಿ ಪೌರಕಾರ್ಮಿಕರ ಕೊರತೆ ಇದ್ದು, ಶುಚ್ಚಿತ್ವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ ಇದರಿಂದ ಚಂರಡಿಗಳಲ್ಲಿ ತ್ಯಾಜ್ಯಗಳು ತುಂಬಿ ದುರ್ನಾತ ಬೀರುತ್ತಿದೆ. ಸಾಂಕ್ರಾಮಿಕ ರೋಗ ಹರಡುವ ಭೀತಿ ಎದುರಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಡಳಿತ ಮಂಡಳಿ ಶುಚಿತ್ವ ವಿಷಯದಲ್ಲಿ ತ್ವರಿತವಾಗಿ ಸ್ಪಂದಿಸದಿದ್ದರೆ ಗ್ರಾಮಸ್ಥರ ಸಹಕಾರದೊಂದಿಗೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು .
ಸುದ್ದಿಗೊಷ್ಠಿಯಲ್ಲಿ ಸಮಿತಿ ಸದಸ್ಯರಾದ ಅನಿಲ್, ನವೀದ್ ಖಾನ್, ಬೈಜು, ಅಬ್ದುಲ್ ರಹಿಮಾನ್, ಹಂಸ, ಸಿದ್ದೀಕ್ , ಹಾಜರಿದ್ದರು.