ಮಡಿಕೇರಿ ಜು.28 : ಸರ್ಕಾರಿ ದಾಖಲೆಗಳಲ್ಲಿ ಕೊಡವರನ್ನು “ಕೊಡವ” ಎಂದು ನಮೂದಿಸುವ ಕುರಿತು ಕ್ಯಾಬಿನೆಟ್ ಅನುಮೋದನೆ ನೀಡಿದೆ. ಸರ್ಕಾರದ ಈ ಕ್ರಮಕ್ಕೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಶ್ಲಾಘನೆ ವ್ಯಕ್ತಪಡಿಸಿದೆ.
ಕಳೆದ 15 ವರ್ಷಗಳ ಸಿಎನ್‌ಸಿಯ ಸತತ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ ಎಂದು ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.
ಕೊಡವರ ಕುಲ ಸಮಸ್ಯೆಗೆ ಸಂಬಂಧಿಸಿದ ಅತಿ ಪ್ರಧಾನ ಬೇಡಿಕೆಗಳಲ್ಲಿ ಒಂದಾದ “ಕೊಡವ” ಪದವನ್ನು ಕ್ಯಾಬಿನೆಟ್ ನಿರ್ಣಯದ ಮೂಲಕ ಅಧಿಕೃತಗೊಳಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನುಡಿದಂತೆ ನಡೆದಿದ್ದಾರೆ. “ಕೊಡವ” ಎನ್ನುವ ಉಜ್ವಲ ಶಾಸ್ತ್ರೀಯ ನಾಮಕ್ಕೆ ಶಾಸನಬದ್ಧ ಸ್ಥಿರೀಕರಣ ದೊರೆತ್ತಿದ್ದು, ಇದು ಸಿಎನ್‌ಸಿಯ ಮಹತ್ವದ ಮೈಲುಗಲ್ಲಾಗಿದೆ.
ಕೊಡವರನ್ನು “ಕೊಡವ” ಎಂದು ನಮೂದಿಸದೆ “ಕೊಡಗರು” ಎಂದು ನಮೂದಿಸುವ ಮೂಲಕ ಕೊಡವ ಬುಡಕಟ್ಟು ಆದಿಮ ಸಂಜಾತ ಮೂಲನಿವಾಸಿಗಳ ಅಸ್ತಿತ್ವದ ಬಗ್ಗೆ ಆತಂಕ ಮೂಡಿಸಲಾಗುತ್ತಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಸಿಎನ್‌ಸಿ ಸಂಘಟನೆ 2008 ರಿಂದಲೇ ಹೋರಾಟವನ್ನು ಆರಂಭಿಸಿತು. ಕೊಡವರ ಭಾವನೆಯನ್ನು ಅರ್ಥ ಮಾಡಿಕೊಂಡು ನಮ್ಮ ಬೇಡಿಕೆಯನ್ನು ಈಡೇರಿಸುವ ಮೂಲಕ ನ್ಯಾಯ ಒದಗಿಸುವ ಕೆಲಸವನ್ನು ಆಡಳಿತ ವ್ಯವಸ್ಥೆಗಳು ಇಲ್ಲಿಯವರೆಗೆ ಮಾಡಿರಲಿಲ್ಲ.
ಆದರೆ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಯಂತೆ ಮುಖ್ಯಮಂತ್ರಿಗಳನ್ನು ಭೇಟಿಯಾದ ನಂತರ ನಡೆದ ಮೊದಲ ಕ್ಯಾಬಿನೆಟ್ ಸಭೆಯಲ್ಲಿ ಕೊಡವರನ್ನು “ಕೊಡವ” ಎಂದು ನಮೂದಿಸುವ ಕುರಿತು ಅನುಮೋದನೆ ನೀಡಿದೆ. ಇದು ನಮಗೆ ಸಿಕ್ಕ ದೊಡ್ಡ ಜಯವಾಗಿದ್ದು, ಇದಕ್ಕೆ ಕಾರಣಕರ್ತರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕ ಎ.ಎಸ್.ಪೊನ್ನಣ್ಣ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರುಗಳಾಗಿದ್ದ ಡಾ.ದ್ವಾರಕನಾಥ್, ಡಾ.ಜಯಪ್ರಕಾಶ್ ಹೆಗ್ಡೆ, ಹೈಕೋರ್ಟ್ನ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್, ನ್ಯಾಯವಾದಿ ಬಲ್ಲಚಂಡ ಬೆಳ್ಳಿಯಪ್ಪ ಹಾಗೂ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಕೊಡವ ಅವರ ಸುದೀರ್ಘ ಹೋರಾಟದಲ್ಲಿ ತಾಳ್ಮೆಯಿಂದ ನಿರಂತರವಾಗಿ ಕೈಜೋಡಿಸಿದ ಸಿಎನ್‌ಸಿ ಸ್ವಯಂ ಸೇವಕರು, ಅಭಿಮಾನಿಗಳು, ಪರೋಕ್ಷ ಮತ್ತು ನೇರವಾಗಿ ಬೆಂಬಲಿಸಿದವರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
::: ಹೋರಾಟದ ಹಾದಿ :::
2008 ರಲ್ಲಿ ಡಾ.ದ್ವಾರಕಾನಾಥ್ ನೇತೃತ್ವದ ಆಯೋಗಕ್ಕೆ ಮನವಿ ಸಲ್ಲಿಸಲಾಯಿತು. 2009 ರಲ್ಲಿ ಆಯೋಗವು ಕೊಡಗಿಗೆ ಭೇಟಿ ನೀಡಿತು. (ಇದನ್ನು ವಿಫಲಗೊಳಿಸಲು ಅವರು ತಂಗಿದ್ದ ಅತಿಥಿ ಗೃಹದಲ್ಲಿ ಅವರ ಮೇಲೆ ಹಲ್ಲೆ ಯತ್ನ ನಡೆಸಿ ಅವರನ್ನು ಅಪಮಾನಿಸಲಾಯಿತು. ಆದರೂ ಅವರು ಕೊಟ್ಟ ಭರವಸೆಯಂತೆ ನಡೆದುಕೊಂಡರು) ಆಯೋಗದ ಕರೆಯ ಮೇರೆಗೆ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಕೊಡವ ಅವರೊಂದಿಗಿನ ತಂಡ ಬೆಂಗಳೂರಿನಲ್ಲಿರುವ ಆಯೋಗದ ಕಚೇರಿಯಲ್ಲಿನ ನ್ಯಾಯಾಲಯದಲ್ಲಿ ಕೊಡವ ಪದ ಬಳಕೆಯ ಸಮಗ್ರ ಚಾರಿತ್ರಿಕ ಹಿನ್ನೆಲೆ ಮತ್ತು ದಾಖಲಾತಿಯೊಂದಿಗೆ ಜ್ಞಾಪನಾ ಪತ್ರ ಸಲ್ಲಿಸಿತು. 2010 ರಲ್ಲಿ ಡಾ.ದ್ವಾರಕಾನಾಥ್ ಆಯೋಗ ಎಲ್ಲಾ ಸರ್ಕಾರಿ ದಾಖಲೆಗಳಲ್ಲಿ ‘ಕೊಡಗರು’ ಬದಲಿಗೆ ನಮ್ಮ “ಕೊಡವ” ಪದ ಬಳಕೆಗೆ ಶಿಫಾರಸ್ಸು ಮಾಡಿತು. ಇದಕ್ಕೆ ಸ್ಪಂದನೆ ಸಿಗದೆ ಇದ್ದಾಗ 2014 ರಲ್ಲಿ ಸಿಎನ್‌ಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿತು. 2016 ರಲ್ಲಿ ಹೈಕೋರ್ಟ್ನಲ್ಲಿ ನ್ಯಾಯಾಂಗ ನಿಂದನೆಯನ್ನು ಸಲ್ಲಿಸಿತಾದರೂ ಯಾವುದೇ ಸ್ಪಂದನೆ ದೊರೆಯದೆ ಆದೇಶದ ಪ್ರತಿ ಕಸದ ಬುಟ್ಟಿ ಸೇರಿತು. 2018 ರಲ್ಲಿ ಮತ್ತೆ ಕೊಡವ ನ್ಯಾಷನಲ್ ಕೌನ್ಸಿಲ್ ಕೋರ್ಟ್ ಮೊರೆ ಹೋಯಿತು.
2021 ಡಿ.8 ರಂದು ಹೈಕೋರ್ಟ್ನ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಪೀಠವು “ಕೊಡಗರು” ಬದಲಿಗೆ “ಕೊಡವ” ಪದ ಬಳಸುವಂತೆ ಮಹತ್ವದ ತೀರ್ಪು ನೀಡಿತು. 2022 ರಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅವರಿಗೆ ನ್ಯಾಯಾಲಯದ ಆದೇಶದೊಂದಿಗೆ ಜ್ಞಾಪನಾ ಪತ್ರವನ್ನು ಸಲ್ಲಿಸಲಾಯಿತು. ನಂತರ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರ ಮೂಲಕ ಅಂದಿನ ಸಿಎಂ ಬೊಮ್ಮಾಯಿ ಅವರಿಗೆ ಪತ್ರ ತಲುಪಿತು. ಆದರೂ ಆಗಿನ ಕೊಡವ ಸ್ನೇಹಿ ಎಂದು ಕರೆಸಿಕೊಳ್ಳುತ್ತಿದ್ದ ಸರ್ಕಾರ ಬದ್ಧತೆ ತೋರದೆ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಿತು. ಈ ಬೆಳವಣಿಗೆ ಕೊಡವರ ಭಾವನೆಗೆ ಧಕ್ಕೆಯನ್ನುಂಟು ಮಾಡಿತ್ತು ಎಂದು ನಾಚಪ್ಪ ಉಲ್ಲೇಖಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಾಸಕ ಎ.ಎಸ್.ಪೊನ್ನಣ್ಣ ಅವರುಗಳು ನುಡಿದಂತೆ ನಡೆದಿದ್ದಾರೆ. ಇವರುಗಳ ಸಕಾರಾತ್ಮಕ ನಡೆಯು ಉನ್ನತ ಅಧಿಕಾರದಲ್ಲಿ ಉತ್ತಮ ವ್ಯಕ್ತಿಗಳು ಆಡಳಿತ ನಡೆಸುತ್ತಿದ್ದರೆ ಎಲ್ಲಾ ಸಾಂವಿಧಾನಿಕ ಹೋರಾಟಗಳು ಫಲಕಾರಿಯಾಗಲಿವೆ ಎಂಬುವುದಕ್ಕೆ ಇದೊಂದು ಉದಾಹರಣೆ. ಕೆಲವರು ತಮ್ಮ ಮೋಡಿಯ ಮಾತಿನ ಮೂಲಕ ಇಲ್ಲಿಯವರೆಗೆ ಕೊಡವರ ಭಾವನೆಗಳೊಂದಿಗೆ ಚೆಲ್ಲಾಟವಾಡುತ್ತಾ ನಮ್ಮನ್ನು ವಂಚಿಸುವುದು ಬಿಟ್ಟರೆ ಬೇರೇನನ್ನೂ ಮಾಡಲಿಲ್ಲ.
ಚುನಾವಣೆ ಸಂದರ್ಭ ನೀಡಿದ ಭರವಸೆಯಂತೆ ಶಾಸಕ ಎ.ಎಸ್.ಪೊನ್ನಣ್ಣ ಅವರು ನಮ್ಮ ಬೇಡಿಕೆ ಈಡೇರುವಂತೆ ನೋಡಿಕೊಂಡಿದ್ದಾರೆ. ಇದೇ ಜು.15 ರಂದು ಸಿಎನ್‌ಸಿ ನಿಯೋಗಕ್ಕೆ ನೀಡಿದ ಭರವಸೆಯಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ನಡೆದುಕೊಂಡಿದ್ದು, ನಮ್ಮ ಭಾವನೆಗೆ ಗೌರವ ನೀಡಿ ಜು.27 ರಂದು ಕ್ಯಾಬಿನೆಟ್ ಅನುಮೋದನೆ ದೊರೆಯುವಂತೆ ಮಾಡಿದ್ದಾರೆ. ಸಂವಿಧಾನದ ಚೌಕಟ್ಟಿನಲ್ಲಿರುವ ಸಿಎನ್‌ಸಿಯ ನ್ಯಾಯ ಸಮ್ಮತವಾದ ಇತರ ಬೇಡಿಕೆಗಳನ್ನು ಕೂಡ ಮುಂದಿನ ದಿನಗಳಲ್ಲಿ ಸರ್ಕಾರ ಈಡೇರಿಸುತ್ತದೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.
Breaking News
- *ಜಯ ಹೇ ಕರ್ನಾಟಕ ಮಾತೆ ಗೀತೆಗೆ 100 ವರ್ಷ : ಕೊಡಗಿನಲ್ಲಿ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳು*
- *ಕೊಡವ ನ್ಯಾಷನಲ್ ಡೇ ಹಿನ್ನೆಲೆ : ದೇವಟ್ ಪರಂಬುವಿನಲ್ಲಿ ಸಿಎನ್‌ಸಿ ಪ್ರಾರ್ಥನೆ*
- *ವೀರ ಸೇನಾನಿಗಳಿಗೆ ಅಗೌರವ : ಮಡಿಕೇರಿ ತಾಲ್ಲೂಕು ಒಕ್ಕಲಿಗರ ಸಂಘ ಖಂಡನೆ*
- *ಕೊಡವ ಮಕ್ಕಡ ಕೂಟದಿಂದ ದಾಖಲೆಯ 100ನೇ ಪುಸ್ತಕ “100ನೇ ಮೊಟ್ಟ್” ಬಿಡುಗಡೆ : ಭಾಷೆ, ಜಾತಿಯನ್ನು ಮೀರಿದ ಜ್ಞಾನ ಭಂಡಾರವೇ ಸಾಹಿತ್ಯ : ಬಾಚರಣಿಯಂಡ ಅಪ್ಪಣ್ಣ*
- *ಸೋಮವಾರಪೇಟೆ : ಹಾಡಹಗಲೇ ಮಹಿಳೆಯ ಸರ, ಹಣ ಕದ್ದ ಚೋರರಿಗೆ ಗೂಸ*
- *ವೀರ ಸೇನಾನಿಗಳಿಗೆ ಅವಮಾನ : ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಖಂಡನೆ*
- *ಕಿಡಿಗೇಡಿಯ ಗಡಿಪಾರಿಗೆ ಮತ್ತು ಉನ್ನತ ಮಟ್ಟದ ತನಿಖೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಒತ್ತಾಯ*
- *ವಾರ ಭವಿಷ್ಯ: ನ.25 ರಿಂದ ಡಿ.1ರ ವರೆಗೆ ಯಾರ ಭವಿಷ್ಯ ಹೇಗಿದೆ…*
- *ವೀರ ಸೇನಾನಿಗಳನ್ನು ಅವಮಾನಿಸಿದವರನ್ನು ಗಡಿಪಾರು ಮಾಡದಿದ್ದರೆ ಕೊಡಗು ಬಂದ್ : ಜಬ್ಬೂಮಿ ಸಂಘಟನೆ ಎಚ್ಚರಿಕೆ*
- *ಹೊದ್ದೂರಿನ ಕಬಡಕೇರಿ ಗ್ರಾಮದಲ್ಲಿ ಸ್ವಚ್ಛತಾ ಶ್ರಮದಾನ*