ಮಡಿಕೇರಿ ಆ.7 : ರಾಜ್ಯದ ಕ್ರೀಡಾ ತವರೂರು ಕೊಡಗು ಕ್ರೀಡೆಯಲ್ಲಿ ಸದಾ ಸುದ್ದಿಯಲ್ಲಿರುವ ಜಿಲ್ಲೆ.ಅಪ್ರತಿಮ ಕ್ರೀಡಾಪಟುಗಳನ್ನು ಪುಟ್ಟ ಜಿಲ್ಲೆ ಕೊಡಗು ಅಂತರರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದೆ.
ಬಾಲ್ಯದಿಂದಲೇ ಕ್ರೀಡೆಯಲ್ಲಿ ಸೂಕ್ತ ತರಬೇತಿ,ಶಾಲಾ ಮಟ್ಟದಿಂದಲೇ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಅವಕಾಶ ದೊರೆತರೆ ಮಾತ್ರ ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಲು ಸಾಧ್ಯ.
ವಿದ್ಯಾರ್ಥಿಗಳು ಪ್ರಾಥಮಿಕ ಶಾಲೆಯಿಂದಲೇ ಕ್ರೀಡೆಯ ಬಗ್ಗೆ ಆಸಕ್ತಿವಹಿಸಿಕೊಂಡರೆ ಮಾತ್ರ ಉತ್ತಮ ಕ್ರೀಡಾಪಟುಗಳಾಗಿ ರೂಪುಗೊಳ್ಳಲು ಸಾಧ್ಯ.
ಆದರೆ ಮಕ್ಕಳಿಗೆ ಆಟದ ಪಾಠ ಹೇಳಿಕೊಡಲು ದೈಹಿಕ ಶಿಕ್ಷಕರೇ ಇಲ್ಲದಂತಾಗಿದೆ. ಹೌದು ಕ್ರೀಡಾ ತವರಿನಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಮಕ್ಕಳಿಗೆ ಕ್ರೀಡೆಯ ಬಗ್ಗೆ ತರಬೇತಿ ನೀಡಲು ದೈಹಿಕ ಶಿಕ್ಷಕರಿಲ್ಲದೆ ಕ್ರೀಡೆಯಿಂದ ವಿದ್ಯಾರ್ಥಿಗಳು ವಂಚಿತರಾಗುತ್ತಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಪ್ರಾಥಮಿಕ, ಪ್ರೌಢಶಾಲೆ ಸರ್ಕಾರಿ ಹಾಗೂ ಅನುದಾನಿತ ಶಾಲೆಯಲ್ಲಿ 80 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ ಒಟ್ಟು 58 ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಹುದ್ದೆ ಖಾಲಿ ಇದೆ.
ಪ್ರಸಕ್ತ ಶೈಕ್ಷಣಿಕ ವರ್ಷ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೊಡಗಿನ 10 ದೈಹಿಕ ಶಿಕ್ಷಕರು ಬೇರೆ ಜಿಲ್ಲೆಗಳಿಗೆ ವರ್ಗಾವಣೆಯಾಗಿದ್ದಾರೆ. ಬಹುತೇಕ ಶಾಲೆಗಳಲ್ಲಿ ದೈಹಿಕ ಶಿಕ್ಷಕರಿಲ್ಲದೆ,ಸಹಶಿಕ್ಷಕರೇ ಒತ್ತಡದಲ್ಲಿ ದೈಹಿಕ ಶಿಕ್ಷಕರ ಕೆಲಸ ನಿರ್ವಹಿಸುತ್ತಿದ್ದಾರೆ.ಕ್ರೀಡಾ ಜಿಲ್ಲೆ ಕೊಡಗಿನಲ್ಲಿ ಕ್ರೀಡೆಯ ಬಗ್ಗೆ ಪಾಠ ಹೇಳಲು ದೈಹಿಕ ಶಿಕ್ಷಕರಿಲ್ಲದೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬಾಲ್ಯದಿಂದಲೇ ಕ್ರೀಡೆಯಿಂದ ವಂಚಿತರಾಗುತ್ತಿದ್ದಾರೆ.
ಕ್ರೀಡಾಕೂಟದಲ್ಲಿ ಭಾಗವಹಿಸಲು ಸಿಗುತ್ತಿಲ್ಲ ತರಬೇತಿ! : ಪ್ರಾಥಮಿಕ ಶಾಲಾ ಮಟ್ಟದಿಂದಲೇ ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ಕ್ರೀಡಾ ಆಸಕ್ತಿ, ಪ್ರತಿಭೆಯನ್ನು ಗುರುತಿಸಿ ಸೂಕ್ತ ತರಬೇತಿ ನೀಡಿದರೆ ಮಾತ್ರ ವಿದ್ಯಾರ್ಥಿಗಳಿಗೆ ಭವಿಷ್ಯದಲ್ಲಿ ಉತ್ತಮ ಕ್ರೀಡಾಪಟುಗಳಾಗಿ ರೂಪುಗೊಳ್ಳಲು ಸಾಧ್ಯ. ಪ್ರತೀ ಗ್ರಾಮದಲ್ಲಿ ಒಬ್ಬ ಒಲಂಪಿಯನ್ ಇರುತ್ತಾನೆ ಎಂಬ ಮಾತಿದೆ.
ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರಿಲ್ಲದೆ ಕೊಡಗಿನ ಗ್ರಾಮೀಣ ಭಾಗದ ಎಲೆಮರೆ ಕಾಯಿಯಂತಿರುವ ವಿದ್ಯಾರ್ಥಿ ಕ್ರೀಡಾಪಟುಗಳು ಕ್ರೀಡೆಯಲ್ಲಿ ಭಾಗವಹಿಸಲು ಸೂಕ್ತ ತರಬೇತಿ ಸಿಗದೆ,ಕ್ರೀಡಾಕೂಟಗಳಿಂದ ದೂರ ಉಳಿದಿದ್ದಾರೆ.ಸಾಮಾನ್ಯವಾಗಿ ಆಗಸ್ಟ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳ ಅಂತ್ಯದವರೆ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ವಲಯ ಮಟ್ಟದಿಂದ ರಾಜ್ಯಮಟ್ಟದವರೆಗಿನ ಕ್ರೀಡಾಕೂಟಗಳು ನಡೆಯುತ್ತಿರುತ್ತವೆ. ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಒಂದು ತಿಂಗಳ ಮುಂಚಿತವಾಗಿ ಸಜ್ಜುಗೊಳಿಸುತ್ತಾರೆ.
ಆದರೆ ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳದೆ ದೂರ ಉಳಿದಿದ್ದಾರೆ. ದೈಹಿಕ ಶಿಕ್ಷಕರಿಲ್ಲದ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡದೆ ನಾಮಕಾವಸ್ಥೆಗೆ ಕ್ರೀಡಾಕೂಟಗಳಲ್ಲಿ ಸಹಶಿಕ್ಷಕರು ವಿದ್ಯಾರ್ಥಿಗಳನ್ನು ಭಾಗವಹಿಸುತ್ತಿದ್ದಾರೆ.
ದೈಹಿಕ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳಿಗೆ ಸೂಕ್ತ ತರಬೇತಿ ಸಿಗದೆ ಶಾಲಾ ಮಟ್ಟದ ಕ್ರೀಡಾಕೂಟಗಳಲ್ಲಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲು ಸಾಧ್ಯವಾಗದೆ,ಬಾಲ್ಯದಿಂದಲೇ ಬಹುಮುಖ ಪ್ರತಿಭೆಗಳು ಕ್ರೀಡೆಯಿಂದ ದೂರ ಉಳಿಯುತ್ತಿದ್ದಾರೆ. ಭವಿಷ್ಯದಲ್ಲಿ ಒಲಂಪಿಯನ್ ಗಳಾಗಬೇಕಾದ ಗ್ರಾಮೀಣ ಭಾಗದ ಪ್ರತಿಭೆಗಳು,ಪಾಳುಬಿದ್ದ ಗದ್ದೆಗಳು ಹಾಗೂ ಮೈದಾನಕ್ಕೆ ತಮ್ಮ ಕ್ರೀಡಾ ಪ್ರತಿಭೆಯನ್ನು ಸೀಮಿತಗೊಳಿಸುತ್ತಿದ್ದಾರೆ.
ಆಟದ ಬಗ್ಗೆ ಜ್ಞಾನವಿಲ್ಲದ ಸಹಶಿಕ್ಷಕರೇ,ಶಾಲೆಯಲ್ಲಿ ದೈಹಿಕ ಶಿಕ್ಷಕರು! : ಕೊಡಗು ಜಿಲ್ಲೆಯ ಸರ್ಕಾರಿ ಪ್ರಾಥಮಿಕ,ಪ್ರೌಢ ಹಾಗೂ ಅನುದಾನಿತ ಶಾಲೆಗಳಲ್ಲಿ ಖಾಲಿಯಿರುವ ದೈಹಿಕ ಶಿಕ್ಷಕರ ಕೆಲಸವನ್ನು ಶಾಲೆಯ ಸಹಶಿಕ್ಷಕರೇ ನಿಭಾಯಿಸುತ್ತಿದ್ದಾರೆ. 6 ರಿಂದ 8 ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ದೈಹಿಕ ಶಿಕ್ಷಣ ಪಠ್ಯ ಅಳವಡಿಸಲಾಗಿದೆ.
ಸರ್ಕಾರ ಸಹಶಿಕ್ಷಕರಿಗೆ ಎರಡು ವಾರಗಳ ಕಾಲ ದೈಹಿಕ ಶಿಕ್ಷಣದ ಬಗ್ಗೆ ತರಬೇತಿ ನೀಡಿ ನೀವೇ ದೈಹಿಕ ಶಿಕ್ಷಣದ ಪಾಠ ಮಾಡಿ ಎಂದು ಸಹಶಿಕ್ಷಕರಿಗೆ ದೈಹಿಕ ಶಿಕ್ಷಣದ ಕೆಲಸವನ್ನು ನೀಡಲಾಗುತ್ತಿದೆ.
ಬಹುತೇಕ ಶಾಲೆಗಳಲ್ಲಿ ಕ್ರೀಡೆಯ ನಿಯಮಗಳ ಬಗ್ಗೆ ಅರಿವೇ ಇಲ್ಲದ ಸಹಶಿಕ್ಷಕರು ವಿದ್ಯಾರ್ಥಿಗಳಿಗೆ ಕಾಟಾಚಾರಕ್ಕೆ ದೈಹಿಕ ಶಿಕ್ಷಣದ ಪಾಠವನ್ನು ಭೋದಿಸುತ್ತಿದ್ದಾರೆ.
ದೈಹಿಕ ಶಿಕ್ಷಣದಲ್ಲಿ ಮುಖ್ಯವಾಗಿ ಪಾಠಕ್ಕಿಂತ ಪ್ರಾಯೋಗಿಕ ತರಗತಿಗಳು ನೀಡಿದರೆ ಮಾತ್ರ ಚಿಕ್ಕ ಪ್ರಾಯದಿಂದಲೇ ವಿದ್ಯಾರ್ಥಿಗಳಿಗೆ ಕ್ರೀಡೆಯ ನಿಯಮಗಳು ತಿಳಿಯುವುದು.ದೈಹಿಕ ಶಿಕ್ಷಣ ಪಡೆಯದ ಸಹಶಿಕ್ಷಕರು ಪುಸ್ತಕದಲ್ಲಿರುವ ಪಾಠವನ್ನು ಹೇಳಿಕೊಟ್ಟು ಕೈತೊಳೆದುಕೊಳ್ಳುತ್ತಿದ್ದಾರೆ.
ನಾಳೆ ಶಾಲಾ ಮಟ್ಟದ ಕ್ರೀಡಾಕೂಟ ಇರುವಾಗ,ಒಂದ ದಿನ ಮೊದಲು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಹೆಸರಿಗೊಂದು ಭಾಗವಹಿಸುವಿಕೆ ಎಂಬಂತೆ ಜಿಲ್ಲೆಯಲ್ಲಿ ಕ್ರೀಡಾಕೂಟಗಳಲ್ಲಿ ಭಾಗವಹಿಸುವುದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿದೆ. ವರ್ಷದಿಂದ ವರ್ಷಕ್ಕೆ ವಿವಿಧ ಕ್ರೀಡೆಯಲ್ಲಿ ಹೊಸ ಹೊಸ ನಿಯಮಗಳನ್ನು ಅಳವಡಿಸಲಾಗುತ್ತಿದೆ.ಆದರೆ ದೈಹಿಕ ಶಿಕ್ಷಕರೇ ಇಲ್ಲದ ಶಾಲೆಗಳಲ್ಲಿ ಕ್ರೀಡಾ ನಿಯಮಗಳ ಬಗ್ಗೆ ಜ್ಞಾನವೇ ಇಲ್ಲದ ಸಹಶಿಕ್ಷಕರೇ ಪಾಠ ಹೇಳಿಕೊಡಲು ಸಾಧ್ಯವೇ ಎಂಬ ಪ್ರಶ್ನೆ ಉದ್ಭವಿಸುವುದು ಸಾಮಾನ್ಯ.
ದಶಕಗಳು ಕಳೆದಿದೆ ಹೊಸ ನೇಮಕಾತಿ ನಡೆದು! : ರಾಜ್ಯದಲ್ಲಿ ಹೊಸ ದೈಹಿಕ ಶಿಕ್ಷಕರ ಹೊಸ ನೇಮಕಾತಿ ನಡೆದು ದಶಕಗಳು ಕಳೆದಿದೆ.2007 ರಿಂದ ಇದುವರೆಗೆ ರಾಜ್ಯದಲ್ಲಿ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕರ ಹೊಸ ನೇಮಕಾತಿ ನಡೆದಿಲ್ಲ.ಅದೇ ರೀತಿಯಲ್ಲಿ 2015 ರಿಂದೀಚೆಗೆ ಪ್ರೌಢಶಾಲೆಗಳಲ್ಲಿ ಹೊಸ ದೈಹಿಕ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆಯದೇ,ದೈಹಿಕ ಶಿಕ್ಷಕ ಶಿಕ್ಷಣ ಹಾಗೂ ತರಬೇತಿ ಪಡೆದ ಶಿಕ್ಷಕರು ಅತಂತ್ರ ಸ್ಥಿತಿಯಲ್ಲಿ ಇದ್ದಾರೆ.2006ರಿಂದ ರಾಜ್ಯದಲ್ಲಿ ದೈಹಿಕ ಶಿಕ್ಷಣ ಪಠ್ಯವನ್ನು ಕಡ್ಡಾಯಗೊಳಿಸಲಾಗಿದೆ.
ಆದರೆ ದೈಹಿಕ ಶಿಕ್ಷಣವನ್ನು ಪಾಠ ಮಾಡಬೇಕಾದ ದೈಹಿಕ ಶಿಕ್ಷಕರನ್ನು ಸರ್ಕಾರ ನೇಮಿಸಲು ಇದುವರೆಗೆ ಮುಂದಾಗಿಲ್ಲ.ಬಿ.ಪೆಡ್ ಹಾಗೂ ಎಂ.ಪೆಡ್ ಮಾಡಿರುವ ದೈಹಿಕ ಶಿಕ್ಷಕರಾಗಲು ಆಸಕ್ತಿಯಿರುವ ಅಭ್ಯರ್ಥಿಗಳ ವಯಸ್ಸು ಕೂಡ ಮೀರುತ್ತಿವೆ.ಈ ಶಿಕ್ಷಣವನ್ನು ಪಡೆದಿರುವ ಅಭ್ಯರ್ಥಿಗಳು ಇತರೆ ವೃತ್ತಿಯತ್ತ ಹಾಗೂ ಕಡಿಮೆ ಸಂಬಳಕ್ಕೆ ಕ್ರೀಡಾಕೂಟಗಳ ಸಮಯದಲ್ಲಿ ಮಾತ್ರ ಖಾಸಗಿ ಶಾಲೆಗಳಲ್ಲಿ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯಮಟ್ಟದಲ್ಲಿ ಕಳೆದ ಐದು ವರ್ಷಗಳಲ್ಲಿ ಕೊಡಗು ಜಿಲ್ಲೆಯ ವಿದ್ಯಾರ್ಥಿಗಳ ಸಾಧನೆ ಕಳಪೆಯಾಗಿದೆ.ಯಾಕೆಂದರೆ ಕ್ರೀಡಾಪಟುಗಳಿಗೆ ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನ ನೀಡಲು ದೈಹಿಕ ಶಿಕ್ಷಕರಿಲ್ಲ.ಪ್ರಭಾವಿ ಖಾಸಗಿ ಶಾಲೆಗಳು ಹಾಗೂ ದಾನಿಗಳಿಂದ ಲಕ್ಷಾಂತರ ದೇಣಿಗೆ ಸಿಗುವ ಅನುದಾನ ರಹಿತ ಪ್ರೌಢ ಶಾಲೆಗಳ ಆಡಳಿತ ಮಂಡಳಿ ತರಬೇತಿದಾರರನ್ನು ನೇಮಕ ಮಾಡಿ ವಿದ್ಯಾರ್ಥಿಗಳಿಗೆ ಕ್ರೀಡಾಕೂಟಗಳಲ್ಲಿ ಭಾಗವಹಿಸಿ,ಪ್ರಶಸ್ತಿ ಗೆಲ್ಲಲು ಅವಕಾಶ ಮಾಡಿಕೊಡುತ್ತಿದೆ.
ಈ ಹಿಂದೆ ಬಿ.ಪೆಡ್ ಶಿಕ್ಷಣವನ್ನು ಪಡೆದು ದೈಹಿಕ ಶಿಕ್ಷಕರಾಗಲು ಬಯಸುವ ಅಭ್ಯರ್ಥಿಗಳಿಗೆ ತರಬೇತಿ ನೀಡಲು ರಾಜ್ಯದಲ್ಲಿ ಸಿ.ಪೆಡ್ ತರಬೇತಿ ಕೇಂದ್ರಗಳು ಇತ್ತು. ಆದರೆ ಇದೀಗ ರಾಜ್ಯದಲ್ಲಿ ಸಿ.ಪೆಡ್ ತರಬೇತಿ ಕೇಂದ್ರಗಳನ್ನೇ ಬಂದ್ ಮಾಡಲಾಗಿದೆ. ಚಿಕ್ಕ ಚಿಕ್ಕ ರಾಷ್ಟ್ರಗಳು ಒಲಿಂಪಿಕ್ಸ್‌ನಲ್ಲಿ ನೂರಾರು ಚಿನ್ನದ ಪದಕಗಳು ಗೆಲ್ಲಲು ಕಾರಣವೇನೆಂದರೆ ಚಿಕ್ಕ ವಯಸ್ಸಿನಿಂದಲೇ ಶಾಲಾ ಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಾರೆ.ಭಾರತ ದೇಶವು ಕ್ರೀಡೆಯಲ್ಲಿ ಹಿಂದುಳಿಯಲು ಕಾರಣ ಶಾಲಾಮಟ್ಟದಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಲು ದೈಹಿಕ ಶಿಕ್ಷಕರಿಲ್ಲದಿರುವುದು.ಕೇವಲ ಬಾಯಿ ಮಾತಿನಲ್ಲಿ ಸರ್ಕಾರಿ ಶಾಲೆಯನ್ನು ಉಳಿಸುತ್ತೇವೆ ಎಂದು ಹೇಳುವ ಅಧಿಕಾರಕ್ಕೇರುವ ಸರ್ಕಾರಗಳು,ಮೊದಲು ಸರ್ಕಾರಿ ಶಾಲೆಗಳಿಗೆ ಶಿಕ್ಷಕರನ್ನು ನೇಮಿಸುವ ಕೆಲಸ ಮಾಡಬೇಕಾಗಿದೆ.
120 ವಿದ್ಯಾರ್ಥಿಗಳು ಇದ್ದರೆ ಮಾತ್ರ ದೈಹಿಕ ಶಿಕ್ಷಕರು! :: ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 120 ವಿದ್ಯಾರ್ಥಿಗಳು ಇದ್ದಾರೆ ಮಾತ್ರ ದೈಹಿಕ ಶಿಕ್ಷಕರನ್ನು ನೇಮಿಸುತ್ತಾರೆ.ಇಲ್ಲದಿದ್ದಲ್ಲಿ ಶಾಲೆಯಲ್ಲಿ ಕಾರ್ಯನಿರ್ವಹಿಸುವ ಸಹಶಿಕ್ಷಕರೇ ದೈಹಿಕ ಶಿಕ್ಷಕರಾಗಿ ಕಾರ್ಯನಿರ್ವಹಿಸಬೇಕಾಗಿದೆ.ಹಾಗೂ ಕೆಲವೊಂದು ಶಾಲೆಗಳಲ್ಲಿ ದೈಹಿಕ ಶಿಕ್ಷಕರನ್ನು ಹೆಚ್ಚುವರಿಯಾಗಿ ನೇಮಕ ಮಾಡಲಾಗಿದೆ.ದೈಹಿಕ ಶಿಕ್ಷಣದೊಂದಿಗೆ ದೈಹಿಕ ಶಿಕ್ಷಕರು ಇತರೆ ವಿಷಯಗಳನ್ನು ಪಾಠ ಮಾಡಬೇಕಾಗಿದೆ.ಕೊಡಗು,ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಿಗೆ ಸರ್ಕಾರ ವಿಶೇಷ ವಿನಾಯಿತಿ ನೀಡಲಾಗಿದೆ.ಒಂದು ಶಾಲೆಯಲ್ಲಿ ಕನಿಷ್ಠ 80 ವಿದ್ಯಾರ್ಥಿಗಳಿದ್ದರೆ ಆ ಶಾಲೆಗೆ ಒಬ್ಬ ದೈಹಿಕ ಶಿಕ್ಷಕರನ್ನು ನೇಮಕ ಮಾಡುತ್ತಾರೆ.ವಿದ್ಯಾರ್ಥಿಗಳು ಕಡಿಮೆಯಾದರೆ ವಿದ್ಯಾರ್ಥಿಗಳು ಹೆಚ್ಚಿರುವ ಶಾಲೆಗೆ ವರ್ಗಾವಣೆ ಮಾಡುತ್ತಿದ್ದಾರೆ.ಜಿಲ್ಲೆಯಲ್ಲಿ ದೈಹಿಕ ಶಿಕ್ಷಕರು ಎಂದು ಪರಿಗಣನೆ ಮಾಡಿದರೆ ಕನಿಷ್ಠ ಒಂದು ಶಾಲೆಯಲ್ಲಿ 80 ವಿದ್ಯಾರ್ಥಿಗಳು ಕಡ್ಡಾಯವಾಗಿ ಇರಬೇಕು.ಇದೀಗ ದೈಹಿಕ ಶಿಕ್ಷಕರು ಸಹಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ದೈಹಿಕ ಶಿಕ್ಷಕರನ್ನು ಸಹಶಿಕ್ಷಕರೆಂದು ಪರಿಗಣಿಸಲಾಗುತ್ತಿದೆ.
ಕೊಡಗು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗುತ್ತಿದೆ.
ಜಿಲ್ಲೆಯಲ್ಲಿ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ 80 ಕ್ಕಿಂತ ಮೇಲೆ ವಿದ್ಯಾರ್ಥಿಗಳಿರುವ ಶಾಲೆಗಳು ಬೆರಳಣಿಕೆಯಷ್ಟು ಮಾತ್ರ ಇದೆ.ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಸರ್ಕಾರ ದೈಹಿಕ ಶಿಕ್ಷಕರ ಹೊಸ ನೇಮಕಾತಿ ಮಾಡುತ್ತಿಲ್ಲ.
“ಡಾ.ವೈದ್ಯನಾಥನ್ ವರದಿ ಜಾರಿಗೊಳಿಸಲಿ” :: ದೇಶದಲ್ಲಿ ಖೇಲೋ ಇಂಡಿಯಾ ಕ್ರೀಡಾಕೂಟ ಆರಂಭವಾದ ದಿನಗಳಿಂದ ಕ್ರೀಡೆ ವಿಶೇಷ ಪ್ರೋತ್ಸಾಹ ಸಿಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.ಶಾಲೆಗಳಲ್ಲಿ ಯೋಗವನ್ನು ಕೂಡ ಕಡ್ಡಾಯಗೊಳಿಸಲಾಗಿದೆ.ಆದರೆ ಯೋಗದ ಪಾಠವನ್ನು ಹೇಳಲು ದೈಹಿಕ ಶಿಕ್ಷಕರಿಲ್ಲ.ರಾಜ್ಯ ವಿಶ್ವವಿದ್ಯಾನಿಲಯಗಳಲ್ಲಿ ಕ್ರೀಡೆಯ ಕೋರ್ಸ್ ಗಳಾದ ಬಿ.ಪೆಡ್ ಹಾಗೂ ಎಂ.ಪೆಡ್ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿವೆ.ಸರ್ಕಾರ ದೈಹಿಕ ಶಿಕ್ಷಕರ ಹೊಸ ನೇಮಕಾತಿ ನಡೆಸದಿರುವುದರಿಂದ ವಿದ್ಯಾರ್ಥಿಗಳು ಕ್ರೀಡಾ ಶಿಕ್ಷಣದಿಂದ ದೂರ ಉಳಿಯುತ್ತಿದ್ದಾರೆ.ಬರೀ ಕ್ರೀಡೆ ಮಾತ್ರವಲ್ಲದೆ,ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ರೂಪಿಸಲು ದೈಹಿಕ ಶಿಕ್ಷಣ ಅನಿವಾರ್ಯವಾಗಿದೆ.
ಡಾ ವೈದ್ಯನಾಥನ್ ವರದಿ ಪ್ರಕಾರ ಒಂದು ಶಾಲೆಯಲ್ಲಿ ಒಬ್ಬ ದೈಹಿಕ ಶಿಕ್ಷಕ ಕಡ್ಡಾಯ ಎಂದು 2021 ರಲ್ಲಿ ಗೆಜೆಟ್ ಪಾಸ್ ಮಾಡಲಾಗಿತ್ತು.ಡಾ ವೈದ್ಯನಾಥನ್ ವರದಿ ಜಾರಿಗೆ ತರುವಂತೆ
2021ರಲ್ಲಿ ರಾಜ್ಯದ ದೈಹಿಕ ಶಿಕ್ಷಕರು ಸರ್ಕಾರಕ್ಕೆ ಮನವಿ ಸಲ್ಲಿಸಿದರು ಕೂಡ ಇದುವರೆಗೆ ಯಾವುದೇ ಹೊಸ ದೈಹಿಕ ಶಿಕ್ಷಕರ ನೇಮಕಾತಿ ನಡೆದಿಲ್ಲ.
ದೈಹಿಕ ಶಿಕ್ಷಕರ ಹುದ್ದೆಗೆ ವಿದ್ಯಾರ್ಥಿಗಳ ಮಿತಿ ನೋಡದೆ,ಡಾ ವೈದ್ಯನಾಥನ್ ವರದಿ ಜಾರಿಗೊಳಿಸಿ,ಸರ್ಕಾರ ರಾಜ್ಯದ ಶಾಲೆಗಳಲ್ಲಿ ದೈಹಿಕ ಶಿಕ್ಷಕರನ್ನು ನೇಮಕ ಮಾಡಬೇಕಾಗಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಸರ್ಕಾರಿ ಪ್ರೌಢ ಶಾಲೆಯಲ್ಲಿ 7, ಅನುದಾನಿತ ಪ್ರೌಢ ಶಾಲೆಯಲ್ಲಿ 3, ಅನುದಾನಿತ ಪ್ರಾಥಮಿಕ ಶಾಲೆಯಲ್ಲಿ 3,ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಒಟ್ಟು 13 ದೈಹಿಕ ಶಿಕ್ಷಕರ ಹುದ್ದೆ ಖಾಲಿ ಇದೆ.
ಮಡಿಕೇರಿ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 8, ಸರ್ಕಾರಿ ಪ್ರೌಢ ಶಾಲೆಯಲ್ಲಿ 6 ಹಾಗೂ ಅನುದಾನಿತ ಪ್ರೌಢ ಶಾಲೆಯಲ್ಲಿ ಒಟ್ಟು 4 ದೈಹಿಕ ಶಿಕ್ಷಕರ ಹುದ್ದೆ ಖಾಲಿ ಇದೆ.
ವಿರಾಜಪೇಟೆ ತಾಲ್ಲೂಕಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 18, ಸರ್ಕಾರಿ ಪ್ರೌಢ ಶಾಲೆಗಳಲ್ಲಿ 2,ಹಾಗೂ ಅನುದಾನಿತ ಪ್ರೌಢ ಶಾಲೆಗಳಲ್ಲಿ 05 ದೈಹಿಕ ಶಿಕ್ಷಕರ ಹುದ್ದೆ ಖಾಲಿ ಇದೆ.ಕೊಡಗಿನ ಮೂರು ತಾಲ್ಲೂಕುಗಳಲ್ಲಿ ಸರ್ಕಾರಿ ಪ್ರಾಥಮಿಕ,ಪ್ರೌಢ ಹಾಗೂ ಅನುದಾನಿತ ಪ್ರೌಢ ಶಾಲೆಗಳು ಸೇರಿ 80 ಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿರುವ 58 ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಹುದ್ದೆ ಖಾಲಿ ಇದೆ.ಹಾಗೂ 80 ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳಲ್ಲಿ ಸಹಶಿಕ್ಷಕರೇ ದೈಹಿಕ ಶಿಕ್ಷಕರಾಗಿದ್ದಾರೆ.
ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ತುಂಬಾ ಅವಶ್ಯಕವಾಗಿದೆ.ವಿದ್ಯಾರ್ಥಿಗಳ ಎಲ್ಲಾ ಆಯಾಮ,ಚಟುವಟಿಕೆಗಳಿಗಾಗಿ ದೈಹಿಕ ಶಿಕ್ಷಣ ಕಡ್ಡಾಯವಾಗಿ, ದೈಹಿಕ ಶಿಕ್ಷಕರ ನೇಮಕಾತಿ ಆಗಬೇಕಾಗಿದೆ.ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗಾಗಿ ದೈಹಿಕ ಶಿಕ್ಷಕರು ಶಾಲೆಯಲ್ಲಿ ಇರಬೇಕಾಗಿದೆ. :: ಡಾ. ಸದಾಶಿವಯ್ಯ ಎಸ್ ಪಲ್ಲೇದ್,ಕೊಡಗು ಜಿಲ್ಲಾ ದೈಹಿಕ ಶಿಕ್ಷಣ ಅಧಿಕಾರಿ ::
ರಾಜ್ಯದಲ್ಲಿ ಡಾ.ವೈದ್ಯನಾಥನ್ ವರದಿ ಜಾರಿಗೊಳಿಸಿ,ಎಲ್ಲಾ ಸರ್ಕಾರಿ, ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಯ ಮಿತಿ ನೋಡದೆ, ಹೊಸ ದೈಹಿಕ ಶಿಕ್ಷಕರನ್ನು ಸರ್ಕಾರ ನೇಮಕ ಮಾಡಬೇಕಾಗಿದೆ.
ದೈಹಿಕ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳು ದೈಹಿಕ ಶಿಕ್ಷಣದಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದರ.ದೈಹಿಕ ಶಿಕ್ಷಕರನ್ನು ಸಹಶಿಕ್ಷಕರಾಗಿ ಪರಿಗಣಿಸಲಾಗುತ್ತಿದೆ.ದೈಹಿಕ ಶಿಕ್ಷಕರಾಗಿ ಪರಿಗಣಿಸಿದರೆ,ವಿದ್ಯಾರ್ಥಿಗಳ ಸಂಖ್ಯೆಯ ಮಿತಿ ನೋಡಿ ಹೆಚ್ಚುವರಿ ಅಥವಾ ವರ್ಗಾವಣೆ ಮಾಡುತ್ತಾರೆ.
ಸಹಶಿಕ್ಷಕರಿಗೆ ದೈಹಿಕ ಶಿಕ್ಷಣದ ಬಗ್ಗೆ ತರಬೇತಿ ನೀಡಲಾಗುತ್ತದೆ.
ಸರ್ಕಾರ ರಾಜ್ಯದಲ್ಲಿ ಹೊಸ ದೈಹಿಕ ಶಿಕ್ಷಕರ ನೇಮಕಾತಿ ಮಾಡಬೇಕಾದ ಅನಿವಾರ್ಯತೆ ಇದೆ. :: ಪೂರ್ಣೇಶ್ ಬಿ.ಟಿ, ಕೊಡಗು ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ::
>>>(ವರದಿ : ಕೆ.ಎಂ ಇಸ್ಮಾಯಿಲ್ ಕಂಡಕರೆ)<<<