ಸುಂಟಿಕೊಪ್ಪ ಜ.23 NEWS DESK : ಪ್ರತಿಯೊಬ್ಬ ವ್ಯಕ್ತಿಯೂ ಉತ್ತಮ ಆರೋಗ್ಯವಂತರಾಗಿರಬೇಕಾದರೆ ಶಿಬಿರಗಳಲ್ಲಿ ಪಾಲ್ಗೊಂಡು ವೈದ್ಯರಿಂದ ಸೂಕ್ತ ತಪಾಸಣೆ ಸಲಹೆಗಳನ್ನು ಪಡೆಯುವ ಮೂಲಕ ಸಧೃಡ ಆರೋಗ್ಯವಂತರಾಗಿರಬಹುದೆಂದು ಜಿಲ್ಲಾಡಳಿತ ಕಾನೂನು ಸಲಹೆಗಾರ ಎ.ಲೋಕೇಶ್ ಕುಮಾರ್ ಹೇಳಿದರು. ಸುಂಟಿಕೊಪ್ಪ ಲಯನ್ಸ್ ಕ್ಲಬ್ ಹಾಗೂ ಕಂಪನಿಯೋ ಸಂಯುಕ್ತಾಶ್ರಯದಲ್ಲಿ ಮಂಜುನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿರುವ 15 ದಿನಗಳ ಉಚಿತ ಫೂಟ್ ಪಲ್ಸ್ ಥೆರಫಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಲಯನ್ಸ್ ಸಂಸ್ಥೆ ಸಾರ್ವಜನಿಕರಿಗೆ ಉಚಿತವಾಗಿ ಹಲವಾರು ಕಾರ್ಯಕ್ರಮ ಹಮ್ಮಿಕೊಂಡು ಜನಪರ ಕಾಳಜಿ ವಹಿಸುತ್ತಿರುವುದು ಶ್ಲಾಘನೀಯ. ಸಾರ್ವಜನಿಕರು ಇಂತಹ ಶಿಬಿರದ ಸದುಪಯೋಗ ಪಡೆದು ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆಯನ್ನು ಪಡೆದು ಉತ್ತಮ ಆರೋಗ್ಯದಿಂದ ಜೀವನ ನಡೆಸುವಂತೆ ಕರೆ ನೀಡಿದರು. ಕಂಪನಿ ಪ್ರತಿನಿಧಿ ಶಶಿಕಾಂತ್ ಪೂಜಾರಿ ಮಾತನಾಡಿ, ಶಿಬಿರದಲ್ಲಿ ಫೂಟ್ ಪಲ್ಸ್ ಥೆರಫಿ ಮಾಡುವುದರಿಂದ ಥೈರಾಯ್ಡ್, ಪಾಶ್ರ್ವವಾಯು, ಅಧಿಕರಕ್ತದೊತ್ತಡ, ನಿದ್ರಾಹೀನತೆ, ಪಾರ್ಕಿನ್‍ಸನ್, ಸರ್ವಿಕಲ್, ವೆರಿಕೋಸ್ ವೈಯ್ನ್, ಕುತ್ತಿಗೆ ನೋವು, ಬೆನ್ನುನೋವು, ಸ್ನಾಯು ಸೆಳೆತ, ಸೋರಿಯಸಿಸ್, ಸಕ್ಕರೆ ಕಾಯಿಲೆ ಹೀಗೆ 120ಕ್ಕೂ ಹೆಚ್ಚು ಕಾಯಿಲೆಗೆ ಉಪಯುಕ್ತವಾಗಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭ ಲಯನ್ಸ್ ಕ್ಲಬ್ ಅಧ್ಯಕ್ಷ ಶಶಾಂಕ್ ಶ್ರೀನಿವಾಸ್, ಕಾರ್ಯದರ್ಶಿ ಗ್ಲೇನ್ ಮೆನೇಜಸ್, ಕೋಶಾಧಿಕಾರಿ ಪ್ರೀತಮ್ ಪ್ರಭಾಕರ್, ಹಿರಿಯ ಸದಸ್ಯರಾದ ಶ್ರೀನಿವಾಸ್ ಎಸ್.ಜಿ. ಯಶೋಧರ್ ಪೂಜಾರಿ, ಕೆ.ಪಿ.ಜಗನಾಥ್, ಪಿ.ಜಿ.ಪೆಮ್ಮಯ್ಯ ಸಿ.ಟಿ.ಪೊನ್ನಪ್ಪ, ಕಂಪಾನಿಯೋ ಕಂಪನಿ ಪ್ರತಿನಿಧಿ ಶಶಿಕಾಂತ್ ಪೂಜಾರಿ ಹಾಜರಿದ್ದರು.