ಗೋಣಿಕೊಪ್ಪ, ಆ.11 : ನಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡುವ ಮೂಲಕ ಯಾವುದೇ ಸೊಳ್ಳೆಗಳು ಉತ್ಪತ್ತಿಯಾಗದಂತೆ ಮುಂಜಾಗ್ರತೆ ವಹಿಸುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಸಾಧ್ಯ. ಸಾಂಕ್ರಾಮಿಕ ರೋಗ ತಡೆಗೆ ಮುಂಜಾಗ್ರತೆಯೇ ಮದ್ದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ.ಸತೀಶ್ ಕುಮಾರ್ ಹೇಳಿದರು.
ಜಿಲ್ಲಾ ಮತ್ತು ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಿರಾಜಪೇಟೆ ತಾಲ್ಲೂಕು ಶಾಲಾ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕೊಡಗು ಜಿಲ್ಲಾ ಸಮಿತಿಯ ಸಂಯುಕ್ತಾಶ್ರಯದಲ್ಲಿ
ಮಲೇರಿಯಾ ಮಾಸಾಚರಣೆ ಅಂಗವಾಗಿ ಡೆಂಗ್ಯೂ, ಮಲೇರಿಯಾ ಇನ್ನಿತರ ಸಾಂಕ್ರಾಮಿಕ ರೋಗಗಳ ಕುರಿತಂತೆ “ಆರೋಗ್ಯ ಅರಿವು” ಕಾರ್ಯಕ್ರಮದಡಿ “ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣದಲ್ಲಿ ಸಹಭಾಗಿತ್ವ”ದ ಕುರಿತು ವಿರಾಜಪೇಟೆ ತಾಲ್ಲೂಕು ಮಟ್ಟದ ಶಿಕ್ಷಕರ ಅಡ್ವೊಕೆಸಿ ಕಾರ್ಯಾಗಾರದಲ್ಲಿ “ರೋಗವಾಹಕಗಳ ನಿಯಂತ್ರಣ” ಕುರಿತ ಕೈಪಿಡಿ ಬಿಡುಗಡೆಗೊಳಿಸಿ ಆರೋಗ್ಯ ಮಾಹಿತಿ ನೀಡಿದರು.
ಡೆಂಗ್ಯೂ, ಮಲೇರಿಯಾ, ಚಿಕುನ್ ಗುನ್ಯ ರೋಗಗಳು ಹರಡುವ ಕ್ರಮ ಮತ್ತು ಇವುಗಳನ್ನು ತಡೆಗಟ್ಟುವ ವಿಧಾನ ಕ್ರಮಗಳ ಬಗ್ಗೆ ಅವರು ವಿವರಿಸಿದರು.
ಸೊಳ್ಳೆಗಳ ನಿಯಂತ್ರಣ ಮಾಡುವ ಮೂಲಕ ನವೀನ ವಿಧಾನವನ್ನು ಅಳವಡಿಸಿ ಅನುಷ್ಠಾನಗೊಳಿಸುವ ಮೂಲಕ 2025 ರ ವೇಳೆಗೆ ಶೂನ್ಯ ಮಲೇರಿಯಾವನ್ನು ತಲುಪಲು ಆರೋಗ್ಯ ಇಲಾಖೆಯು ಕಾರ್ಯಯೋಜನೆ ರೂಪಿಸಿಕೊಂಡಿದೆ ಎಂದು ಡಾ ಸತೀಶ್ ಕುಮಾರ್ ತಿಳಿಸಿದರು.
ಜಿಲ್ಲೆಯಲ್ಲಿ ಈ ವರ್ಷದಲ್ಲಿ ಈ ತನಕ 92 ಡೆಂಗ್ಯೂ ಪ್ರಕರಣಗಳು ವರದಿಯಾಗಿದ್ದು, ಮಳೆ ಕ್ಷೀಣಿಸಿದಂತೆ ಡೆಂಗ್ಯೂ ರೋಗ ಕ್ರಮೇಣವಾಗಿ ಕ್ಷೀಣಿಸಿದೆ ಎಂದರು.
ಶಿಕ್ಷಕರು ತಮ್ಮ ಸುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ, ಆರೋಗ್ಯ ಮತ್ತು ನೈರ್ಮಲ್ಯದ ಕುರಿತು ಮಕ್ಕಳು ಹಾಗೂ ಸಮುದಾಯದಲ್ಲಿ ಅರಿವು ಮೂಡಿಸುವ ಮೂಲಕ ಸಾಂಕ್ರಾಮಿಕ ರೋಗಗಳು ಹರಡದಂತೆ ಜಾಗೃತಿ ಮೂಡಿಸಬೇಕು ಎಂದರು.
ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡರೆ ಎಲ್ಲಾ ರೋಗಗಳನ್ನು ತಡೆಗಟ್ಟಲು ಸಾಧ್ಯ ಎಂದರು.
ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವಕಾಮತ್ ಮಾತನಾಡಿ,
ಈ ಉಪಯುಕ್ತ ಆರೋಗ್ಯ ಕಾರ್ಯಕ್ರಮದಡಿ ಶಿಕ್ಷಕರು ಮಕ್ಕಳಿಗೆ ಸಾಂಕ್ರಾಮಿಕ ರೋಗ ಹರಡುವ ಎಚ್ಚರಿಕೆ ಹಾಗೂ ಇವುಗಳನ್ನು ತಡೆಗಟ್ಟಲು ಕೈಗೊಳ್ಳುವ ಕುರಿತು ಅವರಲ್ಲಿ ಆರೋಗ್ಯ ಅರಿವು ಮೂಡಿಸುವ ಮೂಲಕ ಸಮುದಾಯದಲ್ಲಿ ಆರೋಗ್ಯ ಅರಿವು ಮೂಡಿಸಬೇಕು ಎಂದರು.
ಸಾಂಕ್ರಾಮಿಕ ರೋಗಗಳ ನಿಯಂತ್ರಣದ ಕುರಿತು ಜಾಗೃತಿ ಮೂಡಿಸಲು ಈ ಕಾರ್ಯಾಗಾರ ಸಹಕಾರಿಯಾಗಿದೆ ಎಂದರು.
ಜಿಲ್ಲಾ ಕಸಾಪ ವತಿಯಿಂದ ಶಾಲಾ ಮಕ್ಕಳಿಗೆ ಕನ್ನಡ ಪರ ಚಟುವಟಿಕೆಗಳೊಂದಿಗೆ ಆರೋಗ್ಯ, ವೈದ್ಯಕೀಯ ಕ್ಷೇತ್ರಕ್ಕೆ ಪೂರಕವಾದ ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸಲಾಗುವುದು ಎಂದು ಕೇಶವಕಾಮತ್ ತಿಳಿಸಿದರು.
ಜಿಲ್ಲಾ ರೋಗವಾಹಕ ಆಶ್ರಿತಾ ರೋಗಗಳ ನಿಯಂತ್ರಣಾಧಿಕಾರಿ ಡಾ.ಬಿ.ಎಲ್. ಶ್ರೀನಿವಾಸ್, ರೋಗವಾಹಕ ಆಶ್ರಿತ ರೋಗಗಳ ಹರಡುವಿಕೆ ಮತ್ತು ನಿಯಂತ್ರಣ ಕ್ರಮಗಳ ಕುರಿತು ಮಾಹಿತಿ ನೀಡಿದರು.
ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಹಾಗೂ ಮುಂಜಾಗ್ರತೆ ಕುರಿತು ಮಾಹಿತಿ ನೀಡಿದ
ವಿರಾಜಪೇಟೆ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಯತಿರಾಜ್ , ಮನೆ ಮತ್ತು ಸುತ್ತಮುತ್ತಲಿನ ಸ್ಥಳಗಳಲ್ಲಿ ಟೈರುಗಳು, ತೆಂಗಿನ ಚಿಪ್ಪುಗಳಲ್ಲಿ ಹಾಗೂ ಮನೆಯ ನೀರಿನ ಮೂಲಗಳನ್ನು ಸೊಳ್ಳೆ ಪ್ರವೇಶಿಸದಂತೆ
ಸೊಳ್ಳೆಗಳ ಆಶ್ರಯ ತಾಣ ಗಳನ್ನು ನಿರ್ಮೂಲನೆ ಮಾಡುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಬಹುದು ಎಂದರು.
ಡೆಂಗ್ಯೂ, ಮಲೇರಿಯಾ, ಚಿಕುನ್ ಗುನ್ಯ ರೋಗಗಳು ಹರಡುವ ಕ್ರಮ ಮತ್ತು ಇವುಗಳನ್ನು ತಡೆಗಟ್ಟುವ ವಿಧಾನ ಕ್ರಮಗಳ ಬಗ್ಗೆ ಅವರು ವಿವರಿಸಿದರು.
ಸ್ವಚ್ಛ ಪರಿಸರ ಹಾಗೂ ಆರೋಗ್ಯ ಅರಿವು ಕುರಿತು ಮಾಹಿತಿ ನೀಡಿದ ಸಂಪನ್ಮೂಲ ವ್ಯಕ್ತಿ, ಕೂಡುಮಂಗಳೂರು ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಟಿ.ಜಿ.ಪ್ರೇಮಕುಮಾರ್, ಸಾಂಕ್ರಾಮಿಕ ರೋಗಗಳ ತಡೆಗಟ್ಟಲು ಸಮುದಾಯದ ಸಹಭಾಗಿತ್ವ ಕುರಿತು ಕೈಗೊಳ್ಳಬೇಕಾದ ಚಟುವಟಿಕೆಗಳ ಕುರಿತು ವಿವರಿಸಿದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್.ಪಾಲಾಕ್ಷ , ಸ್ಲೈಡ್ಸ್ ಗಳ ಮೂಲಕ ಸೊಳ್ಳೆಗಳ ಹರಡುವಿಕೆ ಮತ್ತು
ಸೊಳ್ಳೆಗಳ ನಿಯಂತ್ರಣದ ಕುರಿತು ಹಾಗೂ ಕಾರ್ಯಾಗಾರದ ಸಂಯೋಜಕ ಜಿ.ಶ್ರೀಹರ್ಷ ಆರೋಗ್ಯ ರಕ್ಷಣೆ ಕುರಿತು
ಮಾಹಿತಿ ನೀಡಿದರು.
ರಾಜ್ಯ ವಿಜ್ಞಾನ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿ ಡಿ.ಕೃಷ್ಣಚೈತನ್ಯ, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ವನಜಾಕ್ಷಿ, ಕಿರಿಯ ಆರೋಗ್ಯ ನಿರೀಕ್ಷಕ ಎಂ.ಪಿ.ಶಶಿಕಾಂತ್, ಕಾರ್ಯಾಗಾರದ ಸಂಯೋಜಕ ಜಿ.ಶ್ರೀಹರ್ಷ, ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಮಹೇಶ್, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷೆ ಅನ್ರಿತಾ ಫುರ್ಟಾಡೋ, ಸಂಘದ ತಾಲ್ಲೂಕು ಘಟಕದ ಕೋಶಾಧಿಕಾರಿ ಡಿ.ಚಂದನ, ಜಿಲ್ಲಾ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಎಚ್.ಕೆ.ಕುಮಾರ್, ಸಿ.ಆರ್ ಪಿ ಬಿ.ಕೆ.ರಾಧಾ, ಬಿ.ಆರ್.ಪಿ ಗೀತಾಂಜಲಿ, ಇತರರು ಇದ್ದರು.
ಬಿ ಆರ್ ಪಿ ಗೀತಾಂಜಲಿ ಕಾರ್ಯಕ್ರಮ ನಿರ್ವಹಿಸಿದರು. ಆರೋಗ್ಯ ಸಹಾಯಕಿ ರುಕ್ಮಿಣಿ ಗೀತೆ ಹಾಡಿದರು.
ಕಾರ್ಯಾಗಾರದಲ್ಲಿ ವಿರಾಜಪೇಟೆ ತಾಲ್ಲೂಕಿನ ವಿವಿಧ ಪ್ರೌಢಶಾಲೆಗಳ ವಿಜ್ಞಾನ ಹಾಗೂ ಸಂಪನ್ಮೂಲ ಶಿಕ್ಷಕರು ಪಾಲ್ಗೊಂಡಿದ್ದರು.