ಸಿದ್ದಾಪುರ ಆ.25 : 169ನೇ ಬ್ರಹ್ಮರ್ಷಿ ಶ್ರೀ ನಾರಾಯಣ ಗುರು ಜಯಂತಿಯನ್ನು,
ಆ.31 ರಂದು ಸಿದ್ದಾಪುರದ ಸ್ವರ್ಣ ಮಾಲ ಕಲ್ಯಾಣ ಮಂಟಪದಲ್ಲಿ ನಡೆಯಲಿದೆ ಎಂದು ಎಸ್‌ಎನ್‌ಡಿಪಿ ಕೊಡಗು ಯೂನಿಯನ್ ಅಧ್ಯಕ್ಷ ವಿ.ಕೆ ಲೋಕೇಶ್ ತಿಳಿಸಿದ್ದಾರೆ .
ಸಿದ್ದಾಪುರ ಎಸ್ ಎನ್ ಡಿ ಪಿ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್.ಎನ್.ಡಿ.ಪಿ ಕೊಡಗು ಯೂನಿಯನ್, ಜಯಂತಿ ಆಚರಣಾ ಸಮಿತಿ, ಹಾಗೂ ಎಸ್‌ಎನ್‌ಡಿಪಿ
ಶಾಖೆಗಳ ಸಂಯುಕ್ತ ಆಶ್ರಯದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ
ಆಚರಿಸಲಾಗುವುದು ಎಂದರು.
ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 50ಕ್ಕೂ ಹೆಚ್ಚು ಶಾಖೆಗಳ 18 ಸಾವಿರಕ್ಕೂ ಹೆಚ್ಚು ಮಂದಿ ಸದಸ್ಯತ್ವ ಹೊಂದಿರುವ ಬೃಹತ್ ಸಂಘಟನೆಯಾಗಿದ್ದು, ಎಲ್ಲಾ ಶಾಖೆಗಳ ಸಂಯುಕ್ತ ಆಶ್ರಯದಲ್ಲಿ ಅದ್ದೂರಿಯಾಗಿ ನಡೆಸಲಾಗುವುದೆಂದು ತಿಳಿಸಿದರು.
ಎಸ್ ಎನ್ ಡಿ ಪಿ ಕಟ್ಟಡದ ನೂತನ ಸಭಾಂಗಣದಲ್ಲಿ ಬೆಳಿಗ್ಗೆ ಗಣಪತಿ ಹೋಮ ನಂತರ ಗುರು ಪೂಜೆ ನಡೆಯಲಿದೆ.
ಎಸ್ ಎನ್ ಡಿ ಪಿ ಯೋಗಂ ನ ಮಾಜಿ ಉಪಾಧ್ಯಕ್ಷ ಕಂಬಿಬಾಣೆ ಟಿ.ಕೆ.ಸೋಮನ್ ಧ್ವಜಾರೋಹಣ ನೆರವೇರಿಸಲಿದ್ದಾರೆ.
ಬೆಳಗ್ಗೆ 10.30ಕ್ಕೆ ಸಿದ್ದಾಪುರ ಮ್ಯಾಗ್ಡೂರ್ ಎಸ್ಟೇಟ್ ನ ಟಿ.ಎಸ್.ಸಂಜೀವ ಮೆರವಣಿಗೆಗೆ ಚಾಲನೆ ನೀಡಲಿದ್ದು,
ಶ್ರೀ ನಾರಾಯಣ ಗುರುಗಳ ಮೂರ್ತಿಯನ್ನು ಅಲಂಕೃತ ಮಂಟಪದಲ್ಲಿ ವಾದ್ಯ ಮೇಳಗಳೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಆರಂಭಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯೊಂದಿಗೆ ಶ್ರೀ ನಾರಾಯಣ ಸಭಾಂಗಣ (ಸ್ವರ್ಣಮಾಲ ಕಲ್ಯಾಣ ಮಂಟಪ)ಕ್ಕೆ ಬರಲಾಗುವುದು.
ಅಪರಾಹ್ನ 1.30ಕ್ಕೆ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್ ಪೊನ್ನಣ್ಣ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೊಡಗು ಎಸ್ ಎನ್ ಡಿ ಪಿ ಯೂನಿಯನ್ ಅಧ್ಯಕ್ಷ ವಿ.ಕೆ ಲೋಕೇಶ್ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ,ಎಂಎಲ್ಸಿ ಸುಜಾ ಕುಶಾಲಪ್ಪ, ಮಾಜಿ ಶಾಸಕರುಗಳಾದ ಕೆ.ಜಿ ಬೋಪಯ್ಯ, ಅಪ್ಪಚ್ಚು ರಂಜನ್, ಕೊಡಗು ಹಿಂದೂ ಮಲೆಯಾಳಿ ಸಮಾಜದ ಅಧ್ಯಕ್ಷ ವಿ.ಎಂ ವಿಜಯನ್, ಬಿಲ್ಲವ ಸಮಾಜದ ಅಧ್ಯಕ್ಷ ರಘು ಆನಂದ್, ಪ್ಯಾಡಿಂಗ್ಟನ್ ರೆಸಾರ್ಟ್ ಮ್ಯಾನೇಜಿಂಗ್ ಡೈರೆಕ್ಟರ್ ಟಿ.ಎಲ್. ಪ್ರವೀಣ್ ಸೇರಿದಂತೆ ದಾನಿಗಳು, ಸಮಾಜ ಸೇವಕರು ಹಾಗೂ ಗಣ್ಯರು ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳು, ದೇಶ ಸೇವೆ ಸಲ್ಲಿಸಿದ ಮಾಜಿ ಸೈನಿಕರಿಗೆ ಮತ್ತು ದಾಂಪತ್ಯ ಜೀವನದಲ್ಲಿ ಐವತ್ತು ವರ್ಷ ಪೂರೈಸಿದ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು
ಇದರೊಂದಿಗೆ ವಿವಿಧ ಕಲಾತಂಡಗಳ ಸಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಪತ್ರಿಕೆಗೋಷ್ಠಿಯಲ್ಲಿ ಎಸ್ ಎನ್ ಡಿ ಪಿ ಯೂನಿಯನ್ ಉಪಾಧ್ಯಕ್ಷ ರಾಜನ್, ಕಾರ್ಯದರ್ಶಿ ಪ್ರೇಮಾನಂದ,
ಆಚರಣೆ ಸಮಿತಿಯ ಅಧ್ಯಕ್ಷ ಗಿರೀಶ್, ಕಾರ್ಯದರ್ಶಿ ರೀಶಾ ಸುರೇಂದ್ರ, ನಿರ್ದೇಶಕರುಗಳಾದ ಪಾಪಯ್ಯ, ಎಂ.ಎ ಆನಂದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.