ನಾಪೋಕ್ಲು ಆ.28 : ಮೂಢನಂಬಿಕೆಗಳು ಅವೈಜ್ಞಾನಿಕವಾಗಿದ್ದು ಇಂತಹ ವಿಚಾರಗಳನ್ನು ವೈಜ್ಞಾನಿಕ ತಳಹದಿಯಲ್ಲಿ ಚರ್ಚಿಸದೆ ಒಪ್ಪಿಕೊಳ್ಳಬಾರದು ಎಂದು ಭಾರತ ವಿಚಾರವಾದಿ ಒಕ್ಕೂಟದ ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್ ಹೇಳಿದರು.
ಮೂರ್ನಾಡು ವಿದ್ಯಾಸಂಸ್ಥೆಯಲ್ಲಿ ಕೊಡಗು ನ್ಯಾಷನಲಿಸ್ಟ್ ಅಸೋಸಿಯೇಷನ್ ಮತ್ತು ಮೂರ್ನಾಡು ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ವತಿಯಿಂದ ವಿಜ್ಞಾನ ಮತ್ತು ಮೂಢನಂಬಿಕೆಗಳು ಎಂಬ ವಿಚಾರದ ಕುರಿತು ಮಾತನಾಡಿದರು.
ಸಮಾಜದಲ್ಲಿ ಮೌಡ್ಯತೆ ಹತ್ತಿಕ್ಕಬೇಕಾದರೆ ಯುವ ಜನರು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು, ವಿದ್ಯಾರ್ಥಿಗಳಲ್ಲಿ ಸಂಶೋಧನಾ ಪ್ರವೃತ್ತಿ ರೂಢಿಸುವಲ್ಲಿ ಶಿಕ್ಷಣ ನೆರವಾಗಬೇಕು ಎಂದರು.
ವಿಜ್ಞಾನ ಮನುಷ್ಯನಲ್ಲಿ ಆಲೋಚನಾ ಪ್ರವೃತ್ತಿಯನ್ನು ಬೆಳೆಸುತ್ತದೆ ದೇವರೇ ಹೆಸರಿನಲ್ಲಿ ಬಲಿಕೊಡುವುದು, ವಾಮಾಚಾರ, ಮಾಟ ಮಂತ್ರ ನಡೆಸುವುದು ಇದೆಲ್ಲ ಮುಗ್ಧರನ್ನು ವಂಚಿಸುವ ಕೆಲಸವಾಗಿದೆ. ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಆಗಬೇಕು ಎಂದರು.
ವೇದಿಕೆಯಲ್ಲಿ ಕಾವೇರಿ ವಿದ್ಯಾಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಕೊಡಗು ನ್ಯಾಷನಲಿಸ್ಟ್ ಅಸೋಸಿಯೇಷನ್ ಅಧ್ಯಕ್ಷ ಡಾ.ಎ.ಸಿ.ಗಣಪತಿ, ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಪಿ.ಸಿ.ಸುಬ್ರಮಣಿ, ಕಾರ್ಯದರ್ಶಿ ವೇಣು ಅಪ್ಪಣ್ಣ, ಖಜಾಂಚಿ ಬಿ.ಪಿ.ಸುಬ್ರಮಣಿ ,ಪ್ರಾಂಶುಪಾಲರಾದ ದೇವಕಿ ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ದಮಯಂತಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು .
ವರದಿ : ದುಗ್ಗಳ ಸದಾನಂದ