ಮಡಿಕೇರಿ ಆ.29 : ಪ್ರಕೃತಿಯ ಆರಾಧಕರಾದ ಕೊಡವ ಬುಡಕಟ್ಟು ಜನಾಂಗ ಆಚರಿಸಿಕೊಂಡು ಬರುತ್ತಿರುವ “ಕೈಲ್ ಪೊಳ್ದ್” ಹಬ್ಬವನ್ನು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಕಳೆದ 28 ವರ್ಷಗಳಿಂದ ಸಾರ್ವತ್ರಿಕವಾಗಿ ಆಚರಿಸಿಕೊಂಡು ಬರುತ್ತಿದೆ. 29 ನೇ ವರ್ಷದ “ಕೈಲ್ ಪೊಳ್ದ್” ನ್ನು ಈ ಬಾರಿ ಸೆ.1 ರಂದು ಆಚರಿಸಲಾಗುವುದು ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಡಿಕೇರಿ ಸಮೀಪ ಕ್ಯಾಪಿಟಲ್ ವಿಲೇಜ್ ನ ಮಂದ್ ನಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಸಾಂಪ್ರದಾಯಿಕ ಕೈಲ್ ಪೊಳ್ದ್” ಹಬ್ಬವನ್ನು ಆಚರಿಸಲಾಗುವುದು ಎಂದು ಹೇಳಿದ್ದಾರೆ.
ಗುರು ಹಿರಿಯರು, ಕಾವೇರಿ ಮಾತೆ, ಭೂತಾಯಿ, ಬೆಟ್ಟಗುಡ್ಡಗಳು ಮತ್ತು ಸೂರ್ಯಚಂದ್ರರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ ಮೀಧಿ ಅರ್ಪಿಸಲಾಗುವುದು. ಸಾಂಪ್ರದಾಯಿಕ ಕೋವಿಗಳನ್ನು ಥೋಕ್ ಪೂಗಳಿಂದ ಅಲಂಕರಿಸಿ ಪೂಜೆ ಸಲ್ಲಿಸಲಾಗುವುದು. ಅಲ್ಲದೆ ಗಾಳಿಯಲ್ಲಿ ಗುಂಡು ಹಾರಿಸಿ ಕೋವಿ ಹಕ್ಕನ್ನು ಪ್ರತಿಪಾದಿಸಲಾಗುವುದು.
ಇದರೊಂದಿಗೆ ವಿವಿಧ ಕೊಡವ ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳು, ತೆಂಗಿನ ಕಾಯಿಗೆ ಗುಂಡು ಹೊಡೆಯುವುದು ಮತ್ತು ಕೊಡವ ಜಾನಪದ ಆಟಗಳು ನಡೆಯಲಿವೆ. ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೊಡವ ಲ್ಯಾಂಡ್ ಭೂ ರಾಜಕೀಯ ಸ್ವಾಯತ್ತತೆ ನೀಡಬೇಕು, ಕೊಡವ ಬುಡಕಟ್ಟು ಜನಾಂಗವನ್ನು ಎಸ್‍ಟಿ ಟ್ಯಾಗ್ ಗೆ ಸೇರಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಕುರಿತು ನಿರ್ಣಯ ಕೈಗೊಳ್ಳಲಾಗುವುದು ಎಂದು ನಾಚಪ್ಪ ತಿಳಿಸಿದ್ದಾರೆ.
“ಕೈಲ್ ಪೊಳ್ದ್” ಪ್ರಯುಕ್ತ ಕೊಡವ ಸಾಂಪ್ರದಾಯಿಕ ಊಟ ಮತ್ತು ಖಾದ್ಯದ ವ್ಯವಸ್ಥೆಯನ್ನು ಮಾಡಲಾಗಿದೆ. ಹಬ್ಬದಲ್ಲಿ ಪಾಲ್ಗೊಳ್ಳುವವರು ತಮ್ಮ ತಮ್ಮ ಕೋವಿಗಳೊಂದಿಗೆ ಆಗಮಿಸುವಂತೆ ಮನವಿ ಮಾಡಿದ್ದಾರೆ.









