ಮಡಿಕೇರಿ ಆ.30 : ಕುಂದಚೇರಿ ವ್ಯಾಪ್ತಿಯ ಗ್ರಾಮಗಳ ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸುವುದಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಭರವಸೆ ನೀಡಿದ್ದಾರೆ.
ಕುಂದಚೇರಿ ವಲಯ ಕಾಂಗ್ರೆಸ್ ಮತ್ತು ಸಾರ್ವಜನಿಕರ ವತಿಯಿಂದ ಕುಂದಚೇರಿ ಶಾದಿ ಮಹಲ್‌ನಲ್ಲಿ ನಡೆದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಗ್ರಾಮಸ್ಥರು ಹಾಗೂ ಕಾಂಗ್ರೆಸ್ ಪ್ರಮುಖರು ನೀಡಿದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಪರಿಶೀಲಿಸಿದ ಪೊನ್ನಣ್ಣ ಅವರು ಶೀಘ್ರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದಾಗಿ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಂದಚೇರಿ ಕಾಂಗ್ರೆಸ್ ವಲಯಾಧ್ಯಕ್ಷ ಕೆ.ಎಂ.ಹರೀಶ್, ಶಾಸಕ ಪೊನ್ನಣ್ಣ ಅವರು ಜನಪರ ಕಾಳಜಿಯೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.
ಕೆಪಿಸಿಸಿ ಸದಸ್ಯ ಬೇಕಲ್ ರಮಾನಾಥ್ ಹಾಗೂ ಪ್ರಮುಖ ಎಂ.ಆರ್.ಗಣೇಶ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಮಸ್ಯೆ ಮತ್ತು ಅಭಿವೃದ್ಧಿ ಕಾರ್ಯಗಳ ಕುರಿತು ಕೆ.ಎಸ್.ಅಣ್ಣಯ್ಯ ಹಾಗೂ ಮೂವನ ಶಿವರಾಮ್ ಶಾಸಕರ ಗಮನ ಸೆಳೆದರು. ನೂರಾರು ಸಂಖ್ಯೆಯಲ್ಲಿ ಗ್ರಾಮಸ್ಥರು ಕೂಡ ಶಾಸಕರಿಗೆ ಮನವಿ ಸಲ್ಲಿಸಿದರು.
ಕುಂದಚೇರಿ ವಲಯ ಕಾಂಗ್ರೆಸ್ ಪ್ರಮುಖರು ಹಾಗೂ ಗ್ರಾಮಸ್ಥರು ಪೊನ್ನಣ್ಣ ಅವರನ್ನು ಸನ್ಮಾನಿಸಿ ಗೌರವಿಸಿದರು. ಇದಕ್ಕೂ ಮೊದಲು ಶಾಸಕರನ್ನು ವಾದ್ಯಗೋಷ್ಠಿಗಳೊಂದಿಗೆ ಬರ ಮಾಡಿಕೊಂಡ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಕೆಪಿಸಿಸಿ ಸದಸ್ಯ ಬೇಕಲ್ ರಮಾನಾಥ್, ಕರಿಕೆ ಗ್ರಾ.ಪಂ ಅಧ್ಯಕ್ಷ ಬಾಲಚಂದ್ರ ನಾಯರ್ ಹಾಗೂ ಕೇಕಡ ಚರಣ್ ಅವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು.
ಪ್ರಮುಖರಾದ ಕೆದಂಬಾಡಿ ರಘುನಾಥ್, ಮಂಗೇರಿರ ಜಗದೀಶ್ ಸೋಮಯ್ಯ, ಇಸ್ಮಾಯಿಲ್ ಹಾಜಿ, ಮುಕ್ಕಾಟಿ ನೇತ್ರಾವತಿ, ಕೆ.ಎಸ್.ಅಣ್ಣಯ್ಯ, ವೇಣುಗೋಪಲ್, ಕೆ.ಎ.ಉಸ್ಮಾನ್, ಕೆ.ಟಿ.ರಮೇಶ್, ಕೆ.ಬಿ.ಸುರೇಂದ್ರ, ಕೆ.ಕೆ.ಹಂಸ, ರಶೀದ್, ಮಹೇಶ್ ಕೋಪಟ್ಟಿ, ಪಿ.ಯು.ಮಹಮ್ಮದ್, ಹೆಚ್.ಪಿ.ಬೇಬಿ, ಸವಿತ, ವಿಶು ಪ್ರವೀಣ್ ಕುಮಾರ್, ಡಿ.ಎನ್.ಹರ್ಷ, ಸುನಿಲ್ ಪತ್ರಾವೋ ಮತ್ತಿತರ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ನೇತ್ರಾವತಿ ಪ್ರಾರ್ಥಿಸಿ, ಕೆ.ಯು.ಹಾರಿಸ್ ನಿರೂಪಿಸಿ, ಸಿ.ಕೆ.ಫೈಸಲ್ ವಂದಿಸಿದರು. ಇದೇ ಸಂದರ್ಭ ಚೆಟ್ಟಿಮಾನಿ ಬದ್ರಿಯಾ ಜುಮಾ ಮಸೀದಿ ವತಿಯಿಂದ ಶಾಸಕ ಪೊನ್ನಣ್ಣ ಅವರನ್ನು ಸನ್ಮಾನಿಸಲಾಯಿತು. ಸಭೆಯಲ್ಲಿ ಅಗಲಿದ ಪ್ರಮುಖರಿಗೆ ಸಂತಾಪ ಸೂಚಿಸಲಾಯಿತು.











