ಮಡಿಕೇರಿ ಸೆ.13 : ಇಂದಿನ ಯುವಜನಾಂಗ ಮಾದಕ ವ್ಯಸನದಂತಹ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಬೇಸರದ ಸಂಗತಿ. ಪೋಷಕರು ತಮ್ಮ ಮಕ್ಕಳನ್ನು ಉತ್ತಮ ಪ್ರಜೆಗಳನ್ನಾಗಿ ರೂಪಿಸಿ ಸುಂದರ ಸಮಾಜವನ್ನು ನಿರ್ಮಿಸುವ ಕಾರ್ಯದಲ್ಲಿ ಮಹತ್ತರವಾದ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ಮಡಿಕೇರಿಯ ಅಹ್ಮದಿಯಾ ಮುಸ್ಲಿಂ ಜಮಾಅತ್’ನ ಧರ್ಮಗುರು ಖಲೀಂ ಖಾನ್ ಅಭಿಪ್ರಾಯಪಟ್ಟರು.
ಮಡಿಕೇರಿಯ ಅಹ್ಮದಿಯಾ ಮುಸ್ಲಿಂ ಜಮಾಅತ್ ಹಾಗೂ ಜಿಲ್ಲಾ ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ ಇವರ ಸಹಯೋಗದೊಂದಿಗೆ ಜಿಲ್ಲಾ ಕಾರಾಗೃಹದ ಸಭಾಂಗಣದಲ್ಲಿ ಕಾರಾಗೃಹದಲ್ಲಿನ ಖೈದಿಗಳಿಗೆ ಆಯೋಜಿಸಲಾಗಿದ್ದ ‘ಆಮೂಲಾಗ್ರ ಸುಧಾರಣೆ'(ಡಿ-ರಾಡಿಕಲೈಸೇಷನ್) ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಹುಟ್ಟಿನಿಂದ ಎಲ್ಲರೂ ಮುಗ್ಧರು. ಬೆಳೆಯುತ್ತಾ ಹೋದಂತೆ ತಪ್ಪುಗಳನ್ನು ಮಾಡುತ್ತಾರೆ. ಆದರೆ ತಪ್ಪುಗಳ ಬಗ್ಗೆ ಪಶ್ಚಾತ್ತಾಪಪಟ್ಟು ಉತ್ತಮ ನಾಗರಿಕನಾಗಿ ಸುಧಾರಣೆ ಹೊಂದಲು ಖಂಡಿತವಾಗಿಯೂ ಸಾಧ್ಯವಿದೆ ಎಂದರು.
ಅಹ್ಮದಿಯಾ ಜಮಾಅತ್’ನ ಜಾಗತಿಕ ನೇತಾರರಾದ ಹಝ್ರತ್ ಮಿರ್ಝಾ ಮಸ್ರೂರ್ ಅಹ್ಮದ್ ಅವರ “ಯಾವುದೇ ಮನುಷ್ಯನು ದೌರ್ಬಲ್ಯ ಮತ್ತು ನ್ಯೂನ್ಯತೆಗಳಿಂದ ಮುಕ್ತನಾಗಿರುವುದಿಲ್ಲ. ಆದ್ದರಿಂದ ಸುಧಾರಣೆಗೆ ನಾವು ನಿರಂತರ ಪ್ರಯತ್ನವನ್ನು ಮಾಡಬೇಕಾಗುತ್ತದೆ” ಎಂಬ ನುಡಿಯನ್ನು ಈ ಸಂದರ್ಭ ಉಲ್ಲೇಖಿಸಿದ ಖಲೀ ಖಾನ್ ಅವರು, ಮಕ್ಕಳು ತಮ್ಮ ಮಾತಾಪಿತರನ್ನು ಗೌರವದಿಂದ ಕಾಣಬೇಕು. ಹಾಗೆಯೇ ಇತರರ ಮಾತಾಪಿತರನ್ನೂ ಗೌರವದಿಂದ ಕಾಣಬೇಕು. ಎಲ್ಲರೊಂದಿಗೂ ಪ್ರೀತಿ, ಸಮಾಧಾನದಿಂದ ವರ್ತಿಸಿದಾಗ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ ಎಂದರು. ಖೈದಿಗಳ ಮನಪರಿವರ್ತನೆಗೆ ಜಿಲ್ಲಾ ಕಾರಾಗೃಹದ ಅಧೀಕ್ಷರು ಹಾಗೂ ಸಿಬ್ಬಂದಿ ವರ್ಗದವರು ಅತ್ಯಂತ ಕಾಳಜಿಯಿಂದ ಪ್ರಯತ್ನಿಸುತ್ತಿದ್ದು ಭಗವಂತನು ಅವರಿಗೆ ಈ ಕಾರ್ಯದಲ್ಲಿ ಶುಭವನ್ನು ಅನುಗ್ರಹಿಸಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾರಾಗೃಹದ ಅಧೀಕ್ಷಕರಾದ ಸಂಜಯ್ ಜಿತ್ತಿ ಮಾತನಾಡಿ “ಪ್ರೀತಿ ಎಲ್ಲರಲ್ಲೂ ದ್ವೇಷವಿಲ್ಲ ಯಾರಲ್ಲೂ”ಎಂಬ ಧ್ಯೇಯವಾಕ್ಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಹ್ಮದಿಯಾ ಮುಸ್ಲಿಂ ಜಮಾಅತ್ ಸುಮಾರು 190ಕ್ಕೂ ಅಧಿಕ ರಾಷ್ಟ್ರಗಳಲ್ಲಿ ತನ್ನ ಶಾಖೆಗಳ ಮೂಲಕ ಶಾಂತಿ ಸ್ಥಾಪನೆ ಹಾಗೂ ಭಯೋತ್ಪಾದನೆ ನಿರ್ಮೂಲನೆಗೆ ಪ್ರಯತ್ನಿಸುತ್ತಿರುವುದು ಶ್ಲಾಘನೀಯ.
ಕಾರಾಗೃಹದ ಖೈದಿಗಳಿಗೆ ಆಯೋಜಿಸಲಾದ ಈ ‘ಆಮೂಲಾಗ್ರ ಸುಧಾರಣೆ’ ಕಾರ್ಯಕ್ರಮಕ್ಕೆ ಸಂಘಟನೆಯ ಸದಸ್ಯರು ಕೈಜೋಡಿಸಿರುವುದು ಸಂತಸದ ವಿಚಾರ.ಮನುಷ್ಯನು ತಪ್ಪುಗಳನ್ನು ಮಾಡುತ್ತಾನೆ.ಆದರೆ ಆ ತಪ್ಪುಗಳನ್ನು ತಿದ್ದಿ ನಡೆದರೆ ಮಾತ್ರ ಅವನು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳುತ್ತಾನೆ ಎಂದು ಸಂಜಯ್ ಜಿತ್ತಿ ಅಭಿಪ್ರಾಯಪಟ್ಟರು.
ಅಹ್ಮದಿಯಾ ಜಮಾಅತ್’ನ ಮಡಿಕೇರಿ ಘಟಕದ ಅಧ್ಯಕ್ಷರಾದ ಜಿ.ಎಂ.ಮಹಮ್ಮದ್ ಶರೀಫ್ ಮಾತನಾಡಿ, ಜಗತ್ತಿನ ಎಲ್ಲ ಧರ್ಮಗಳು ಮಾನವೀಯತೆಯನ್ನು ಸಾರಿ ಹೇಳುತ್ತವೆ. ಆದರೆ ಮಾನವನ ಸ್ವಾರ್ಥದಿಂದಾಗಿ ಇತ್ತೀಚಿನ ದಿನಗಳಲ್ಲಿ ಮಾನವೀಯತೆ,ಬದುಕಿನ ಮೌಲ್ಯಗಳು ಮರೆಯಾಗುತ್ತಿರುವುದು ವಿಷಾದನೀಯ.ದೇವರನ್ನು ಒಲಿಸಿಕೊಳ್ಳಬೇಕಾದರೆ ನಾವು ಇತರರಿಗೆ ಒಳ್ಳೆಯದನ್ನು ಉಂಟುಮಾಡಬೇಕು. ತನ್ನ ಸಮಸೃಷ್ಟಿಗಳನ್ನು ಪ್ರೀತಿಸದವನನ್ನು ದೇವರು ಕೂಡ ಪ್ರೀತಿಸುವುದಿಲ್ಲ. ಇಂದು ಸಮಾಜದಲ್ಲಿ ದ್ವೇಷ, ಅಸಹನೆ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರತಿಯೊಬ್ಬರೂ ಪ್ರೀತಿ, ಮಾನವೀಯತೆಯಿಂದ ಬಾಳಿದಾಗ ಸಮಾಜದಲ್ಲಿ ದ್ವೇಷಕ್ಕೆ ಜಾಗವಿಲ್ಲ. ಇಂತಹ ಸಮಾಜವನ್ನು ಕಟ್ಟುವ ಪ್ರಯತ್ನ ನಮ್ಮೆಲ್ಲರ ಹೊಣೆಯಾಗಿದೆ.”ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ, ಅಭ್ಯುತ್ಥಾನಂ ಅಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ…” ಎಂದು ಶ್ರೀಕೃಷ್ಣನು ಭಗವದ್ಗೀತೆಯಲ್ಲಿ ಹೇಳಿರುವಂತೆ ಸಮಾಜವು ದಾರಿತಪ್ಪಿದಾಗ ಅದನ್ನು ಸರಿಪಡಿಸಲು ಧರ್ಮಸುಧಾರಕರು ಆವಿರ್ಭವಿಸುತ್ತಾರೆ. ಹುಟ್ಟಿನಿಂದ ಎಲ್ಲರೂ ಒಳ್ಳೆಯವರು. ದೊಡ್ಡವರಾಗುತ್ತಾ ಕೆಲವರು ದುಷ್ಟಕಾರ್ಯಗಳಲ್ಲಿ ತೊಡಗುತ್ತಾರೆ. ಅವರನ್ನು ತಿದ್ದುವ ಮೂಲಕ ಸಮಾಜದ ಸುಧಾರಣೆ ನಮ್ಮೆಲ್ಲರ ಹೊಣೆ ಎಂದರು.
ಜಗತ್ತಿನ ಸರ್ವಜನರೂ ‘ವಸುಧೈವ ಕುಟಂಬಕಂ’ ಎಂಬ ತತ್ವದಂತೆ ಬಾಳಬೇಕಾಗಿದೆ. ಈ ನಿಟ್ಟಿನಲ್ಲಿ ಅಹ್ಮದಿಯಾ ಸಂಘಟನೆ ಕಾರ್ಯೋನ್ಮುಖವಾಗಿದೆ. ಇದರ ಅಂಗಸಂಸ್ಥೆಯಾದ ‘ಹ್ಯುಮ್ಯಾನಿಟಿ ಫಸ್ಟ್’ ಮೂಲಕ 2018ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ, ನಂತರದ ಕೋವಿಡ್’ನ ಆಪತ್ಕಾಲದಲ್ಲಿ ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ ಸಂತ್ರಸ್ತ ಕುಟುಂಬಗಳಿಗೆ ಆಹಾರ,ವಸತಿ,ಇನ್ನಿತರ ನೆರವು ನೀಡಲಾಗಿತ್ತು ಎಂದರು.
ಜಮಾಅತ್’ನ ಉಪಾಧ್ಯಕ್ಷರಾದ ಎಂ.ಬಿ.ಜಾಹೀರ್ ಅಹ್ಮದ್ ಮಾತನಾಡಿ, ಮನುಷ್ಯನು ದೌರ್ಬಲ್ಯಗಳಿಂದ ಹೊರತಾಗಿಲ್ಲ. ಅರಿತೋ ಅರಿಯದೆಯೋ ತಪ್ಪುಗಳು ಸಂಭವಿಸುವುದು ಸಹಜ. ಆದರೆ ತಿದ್ದಿ ನಡೆಯುವವನೇ ನಿಜವಾದ ಮನುಜ. ಪ್ರತಿಯೊಂದು ಸಮಸ್ಯೆಗಳಿಗೂ ಪರಿಹಾರವಿದೆ. ಆದರೆ ಪರಿಹಾರವನ್ನು ಕಂಡುಕೊಳ್ಳುವ ಜಾಣ್ಮೆಯನ್ನು ಹೊಂದಿರಬೇಕು. ಆಗ ಮಾತ್ರವೇ ನೆಮ್ಮದಿಯ ಬದುಕನ್ನು ನಡೆಸಬಹುದು ಎಂದು ತಿಳಿಸಿದರು.
ಜಮಾಅತ್’ನ ಕಾರ್ಯದರ್ಶಿ ಮೊಹಮ್ಮದ್ ಯೂಸುಫ್ ಪ್ರಾಸ್ತಾವಿಕವಾಗಿ ಮಾತನಾಡಿ, ಅಹ್ಮದಿಯಾ ಮುಸ್ಲಿಂ ಸಂಘಟನೆ 1889ರಲ್ಲಿ ಭಾರತದ ಪಂಜಾಬ್ ರಾಜ್ಯದಲ್ಲಿ ಹಝ್ರತ್ ಮಿರ್ಝಾ ಗುಲಾಂ ಅಹ್ಮದ್ ಅವರಿಂದ ಸ್ಥಾಪನೆಗೊಂಡಿದ್ದು, ಜಗತ್ತಿನಾದ್ಯಂತ ಶಾಂತಿ ಸ್ಥಾಪನೆ ಸಂಘಟನೆಯ ಪ್ರಮುಖ ಉದ್ದೇಶವಾಗಿದೆ ಎಂದು ವಿವರಿಸಿದರು.
ಜಿಲ್ಲಾ ಕಾರಾಗೃಹ ಕೇಂದ್ರದ ಸಿಬ್ಬಂದಿಗಳಾದ ಸಂಜಯಕುಮಾರ ತುಂಬದ, ರವಿ ಮುತ್ತಪ್ಪ ಬಂಡಿವಡ್ಡರ್, ಹೆಚ್.ಟಿ.ಲತಾ, ಅಹ್ಮದಿಯಾ ಸಂಘಟನೆಯ ದಕ್ಷಿಣ ಕರ್ನಾಟಕ ಉಸ್ತುವಾರಿ ಸಿ.ಜಿ.ಸುಹೈಲ್, ಮಡಿಕೇರಿ ಜಮಾಅತ್’ನ ಮಾಜಿ ಅಧ್ಯಕ್ಷರಾದ ಎಂ.ಎ.ಬಶೀರ್ ಅಹ್ಮದ್ ಮತ್ತಿತರ ಪದಾಧಿಕಾರಿಗಳು ಹಾಜರಿದ್ದರು.
ಈ ಸಂದರ್ಭ ಕಾರಾಗೃಹದ ಅಧೀಕ್ಷಕರಾದ ಸಂಜಯ್ ಜಿತ್ತಿ, ಸಿಬ್ಬಂದಿಗಳಾದ ಸಂಜಯಕುಮಾರ ತುಂಬದ, ರವಿ ಮುತ್ತಪ್ಪ ಬಂಡಿವಡ್ಡರ್ ಹಾಗೂ ಹೆಚ್.ಟಿ.ಲತಾ ಅವರನ್ನು ಅಹ್ಮದಿಯಾ ಜಮಾಅತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅಹ್ಮದಿಯಾ ಸಂಘಟನೆಯ ಕೆ.ಎಂ.ಇಬ್ರಾಹಿಂ ಪ್ರಾರ್ಥನೆಯನ್ನು ನೆರವೇರಿಸಿದರು. ಜೆ.ಎಂ.ಬಶೀರ್ ಅಹ್ಮದ್ ಭಾವೈಕ್ಯಗೀತೆಯನ್ನು ಹಾಡಿದರು.ಎಸ್.ಎಂ.ಶರೀಫ್ ನಿರೂಪಿಸಿದರು.











