ಮಡಿಕೇರಿ ಸೆ.13 : ಮಡಿಕೇರಿ ತಾಲ್ಲೂಕು ಕಚೇರಿಯಲ್ಲಿ ಅನೇಕ ಸಮಸ್ಯೆಗಳಿವೆ, ಕಳೆದ 25 ವರ್ಷಗಳಿಂದ ಅಧಿಕಾರದಲ್ಲಿದ್ದವರು ತಾಲ್ಲೂಕು ಕಚೇರಿ ಬಗ್ಗೆ ಆಸಕ್ತಿ ತೋರದ ಪರಿಣಾಮ ಇಂದು ಜನರು ಕಷ್ಟ ಅನುಭವಿಸುವಂತ್ತಾಗಿದೆ ಎಂದು ಆರೋಪಿಸಿರುವ ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ ಬೆಳ್ಯಪ್ಪ, ಕೊರತೆಗಳ ಕುರಿತು ಅಧಿಕಾರಿಗಳು ಶಾಸಕರ ಗಮನ ಸೆಳೆಯಬೇಕೆಂದು ಒತ್ತಾಯಿಸಿದ್ದಾರೆ.
ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, ಪಡಿತರ ಚೀಟಿ ತಿದ್ದುಪಡಿ, ಹೆಸರು ಸೇರ್ಪಡೆ, ಆಧಾರ್ ಕಾರ್ಡ್‍ಗೆ ಸಂಬಂಧಿಸಿದ ದಾಖಲೆ, ಆದಾಯ ದೃಢೀಕರಣ ಪತ್ರ ಮತ್ತಿತರ ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಿದ ಸಾರ್ವಜನಿಕರು ಬೆಳಗ್ಗೆಯಿಂದ ಸಂಜೆಯವರೆಗೆ ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಉದ್ಭವಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ತಾಲ್ಲೂಕು ಕಚೇರಿಯ ತಾಂತ್ರಿಕ ವ್ಯವಸ್ಥೆಗಳು ಇನ್ನೂ ಕೂಡ ಮೇಲ್ದರ್ಜೆಗೇರಿಲ್ಲ, ಪ್ರತಿದಿನ ಸರ್ವರ್ ಸಮಸ್ಯೆ ಮತ್ತು ವಿದ್ಯುತ್ ಕಡಿತದ ಕಾರಣಗಳನ್ನು ನೀಡಲಾಗುತ್ತಿದೆ. ಸರ್ವರ್ ಪ್ರಕ್ರಿಯೆಯು ವಿಳಂಬವಾಗುತ್ತಿದ್ದು, ಅರ್ಜಿದಾರರು ನಿತ್ಯ ತಾಲ್ಲೂಕು ಕಚೇರಿಗೆ ಅಲೆಯಲೇಬೇಕಾಗಿದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಯ ಲಾಭ ಪಡೆಯಲು ಅರ್ಹ ಫಲಾನುಭವಿಗಳಿಗೆ ಪಡಿತರ ಚೀಟಿ ಸೇರಿದಂತೆ ಅಗತ್ಯ ದಾಖಲೆಗಳ ಅಗತ್ಯವಿದೆ. ಇದನ್ನು ಪಡೆಯಲು ಜನ ತಾಲ್ಲೂಕು ಕಚೇರಿಗೆ ಬರಲೇಬೇಕಾಗಿದೆ.
ತಾಲ್ಲೂಕು ಕಚೇರಿಯಲ್ಲಿರುವ ಸಮಸ್ಯೆಗಳ ಬಗ್ಗೆ ಶಾಸಕರ ಗಮನ ಸೆಳೆಯಬೇಕಾದ ಅಧಿಕಾರಿಗಳು ಯಾವುದೇ ಆಸಕ್ತಿ ತೋರದೆ ಸಮಸ್ಯೆಗಳನ್ನು ಸಮಸ್ಯೆಗಳನ್ನಾಗಿಯೇ ಬಿಟ್ಟಿದ್ದಾರೆ ಅಧಿಕಾರಿಗಳ ನಿರಾಸಕ್ತಿ ಜನರ ಮೇಲೆ ಪರಿಣಾಮ ಬೀರುತ್ತಿದ್ದು, ಬುಧವಾರ ತಾಲ್ಲೂಕು ಕಚೇರಿ ಎದುರು ಅರ್ಜಿ ವಿಲೇವಾರಿಗಾಗಿ ಕಾದು ನಿಂತಿದ್ದ ಮಹಿಳೆಯೊಬ್ಬರು ಪ್ರಜ್ಞಾಹೀನರಾಗಿ ಬಿದ್ದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಚೇರಿಯ ತಾಂತ್ರಿಕ ವ್ಯವಸ್ಥೆಗಳನ್ನು ಮೇಲ್ದರ್ಜೆಗೇರಿಸಬೇಕು ಮತ್ತು ಜನರೇಟರ್ ಅಥವಾ ಉತ್ತಮ ಸಾಮಥ್ರ್ಯದ ಯುಪಿಎಸ್ ವ್ಯವಸ್ಥೆಯನ್ನು ಕಲ್ಪಿಸಬೇಕು. ಸರ್ವರ್ ಸಮಸ್ಯೆ ಎದುರಾಗದಂತೆ ಗುಣಮಟ್ಟದ ನೆಟ್ ವರ್ಕ್ ಸಂಪರ್ಕ ನೀಡಬೇಕು. ಹೆಚ್ಚುವರಿ ಸಿಬ್ಬಂದಿಗಳನ್ನು ನಿಯೋಜಿಸಿ ಸಾರ್ವಜನಿಕರ ಅರ್ಜಿಗಳ ತ್ವರಿತ ವಿಲೇವಾರಿಗೆ ಕ್ರಮ ಕೈಗೊಳ್ಳಬೇಕು. ತಾಲ್ಲೂಕು ಕಚೇರಿಯನ್ನು ಸುಸಜ್ಜಿತ ಕಟ್ಟಡಕ್ಕೆ ಶೀಘ್ರ ಸ್ಥಳಾಂತರಿಸಬೇಕು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಶಾಸಕರ ಗಮನ ಸೆಳೆದು ಯೋಜನೆ ರೂಪಿಸಬೇಕು ಮತ್ತು ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು ಎಂದು ಫ್ಯಾನ್ಸಿ ಪಾರ್ವತಿ ಬೆಳ್ಯಪ್ಪ ಒತ್ತಾಯಿಸಿದರು.











