ಮಡಿಕೇರಿ ಸೆ.13 : ಕೊಡಗು ಟೇಬಲ್ ಟೆನ್ನಿಸ್ ಅಸೋಸಿಯೇಷನ್ ವತಿಯಿಂದ ಸೆ.29 ರಿಂದ ಅ.1 ರವರೆಗೆ ನಗರದಲ್ಲಿ ಜಿಲ್ಲಾ ಮಟ್ಟದ ಟೇಬಲ್ ಟೆನ್ನಿಸ್ ಪಂದ್ಯಾವಳಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸೋಸಿಯೇಷನ್‍ನ ಅಧ್ಯಕ್ಷ ಪ್ರವೀಣ್ ಶೇಟ್ ಪಂದ್ಯಾವಳಿ ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ. ಜಿಲ್ಲೆಯ ಯುವ ಪ್ರತಿಭಾವಂತ ಆಟಗಾರರಿಗೆ ಉತ್ತೇಜನ ನೀಡುವ ಪ್ರಮುಖ ಉದ್ದೇಶದಿಂದ ಪಂದ್ಯಾವಳಿಯನ್ನು ಆಯೋಜಿಸಲಾಗುತ್ತಿದೆ. ಪಂದ್ಯಾವಳಿಯಲ್ಲಿ 250 ಕ್ಕೂ ಹೆಚ್ಚಿನ ಸ್ಪರ್ಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇರುವುದಾಗಿ ತಿಳಿಸಿದರು.
ಪಂದ್ಯಾವಳಿ 14 ವರ್ಷದ ಒಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗ, 18 ವರ್ಷದ ಒಳಗಿನ ಬಾಲಕ ಮತ್ತು ಬಾಲಕಿಯರ ವಿಭಾಗ, ಪುರುಷ ಮತ್ತು ಮಹಿಳೆಯರ ಮುಕ್ತ ಸಿಂಗಲ್ಸ್ ಮತ್ತು ಡಬಲ್ಸ್, ಮಿಕ್ಸ್‍ಡ್ ಡಬಲ್ಸ್, 50 ವರ್ಷ ಮೇಲ್ಪಟ್ಟವರ ಸಿಂಗಲ್ಸ್ ಮತ್ತು ಡಬಲ್ಸ್, 60 ವರ್ಷ ಮೇಲ್ಪಟ್ಟವರ ಸಿಂಗಲ್ಸ್ ಮತ್ತು ಡಬಲ್ಸ್ ವಿಭಾಗಗಳಲ್ಲಿ ನಡೆಯಲಿದೆಯೆಂದು ಮಾಹಿತಿ ನೀಡಿದರು.
ಬಾಲಕ ಮತ್ತು ಬಾಲಕಿಯರ ವಿಭಾಗಕ್ಕೆ ಯಾವುದೇ ಪ್ರವೇಶ ಶುಲ್ಕ ಇರುವುದಿಲ್ಲ. ಪುರುಷರು ಮತ್ತು ಮಹಿಳೆಯರ ವಿಭಾಗದ ಸಿಂಗಲ್ಸ್‍ಗೆ 300 ರೂ. ಮತ್ತು ಡಬಲ್ಸ್‍ಗೆ 500 ರೂ. ಪ್ರವೇಶ ಶುಲ್ಕವನ್ನು ನಿಗದಿಪಡಿಸಲಾಗಿದೆಯೆಂದು ತಿಳಿಸಿದರು.
ಆಸಕ್ತ ಸ್ಪರ್ಧಿಗಳು ಸೆ.20 ರ ಒಳಗಾಗಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಬೇಕು. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ಮೊಹಮ್ಮದ್ ಆಸಿಫ್ ಮೊ.9845606784, ಅಝರ್ ಮೊ.9343344550, ಪ್ರವೀಣ್ ಶೇಟ್ ಮೊ. 9880017003, ಹರಿಶಂಕರ್ ಮೊ.8618369238, ಪೃಥ್ವಿ ಮೊ.9880073440 ಇವರನ್ನು ಸಂಪರ್ಕಿಸಬಹುದೆಂದರು.
ಉದ್ಘಾಟನೆ- ಪಂದ್ಯಾವಳಿಯನ್ನು ಸೆ.29 ರಂದು ಬೆಳಗ್ಗೆ 10 ಗಂಟೆಗೆ ಹೆಚ್ಚುವರಿ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲೆಯ ಶಾಸಕರು ಉದ್ಘಾಟಿಸಲಿದ್ದಾರೆ. ಪಂದ್ಯಾವಳಿ ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ನೀಡಲಾಗುತ್ತದೆಯೆಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್ ಗೌರವಾಧ್ಯಕ್ಷ ಮೊಹಮ್ಮದ್ ಆಸೀಫ್, ಖಜಾಂಚಿ ಕುಮರೇಶ್ ಹಾಗೂ ಸದಸ್ಯ ಪೃಥ್ವಿ ಉಪಸ್ಥಿತರಿದ್ದರು.









