ಕುಶಾಲನಗರ ಸೆ.14 : ದೊಡ್ಡತ್ತೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಸಮವಸ್ತ್ರ ವಿತರಿಸಿದರು.
ನಂತರ ಮಾತನಾಡಿದ ಅವರು ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸಲು ಎಲ್ಲರೂ ತಮ್ಮ ತಮ್ಮ ಗ್ರಾಮದ ಶಾಲೆಗಳ ಬಗ್ಗೆ ಶಾಲೆಯ ಆಡಳಿತ ಮಂಡಳಿಯೊಂದಿಗೆ ಸಹಕರಿಸಬೇಕು. ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗೆ ಮಕ್ಕಳನ್ನು ಸೇರಿಸುವುದು ಕಡಿಮೆ ಆಗಿದೆ. ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಉಳಿಸಬೇಕಾಗಿದೆ ಎಂದರು.
ಶಾಲೆಗಳಲ್ಲಿ ಕುಡಿಯುವ ನೀರು, ಕಟ್ಟಡಗಳ ಸಮಸ್ಯೆ, ಅರೋಗ್ಯ, ರಸ್ತೆ, ಉಪಹಾರ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ಉಂಟಾದಲ್ಲಿ ಸಮಸ್ಯೆಗಳ ಬಗ್ಗೆ ನನಗೆ ಆಗಲಿ ಸ್ಥಳೀಯ ಜನಪ್ರತಿನಿಧಿಗಳಿಗಾಗಲಿ ಮಾಹಿತಿ ನೀಡಬೇಕು ಎಂದರು.
ಮಕ್ಕಳ ಮುಖಾಂತರವೇ ದೇಶ ಬದಲಾವಣೆಯಗಲು ಸಾಧ್ಯ, ಸರ್ಕಾರಿ ಶಾಲೆಯ ಮಕ್ಕಳಿಗೆ ನಮ್ಮಿಂದ ಹೆಚ್ಚಿನ ಪ್ರೋತ್ಸಾಹ, ಅನುದಾನಗಳನ್ನು ನೀಡಲಾಗುವುದು. ಸರ್ಕಾರಿ ಶಾಲೆಯ ಉನ್ನತಿಗಾಗಿ ಶಾಲೆಯ ಮಕ್ಕಳ ಹಿತಕ್ಕಾಗಿ ಸರ್ಕಾರವು ಮತ್ತು ನಾನು ಯಾವಾಗಲು ನಿಮ್ಮ ಪರ ಇರುತ್ತೇವೆ ಎಂದು ಭರವಸೆ ನೀಡಿದರು.
ನಂತರ ಶಾಸಕರು ಶಾಲೆಯ ಸಿಬ್ಬಂದಿಗಳೊಂದಿಗೆ ಮತ್ತು ಗ್ರಾಮಸ್ಥರೊಂದಿಗೆ ಶಾಲೆಗೆ ಆಗಬೇಕಿರುವ ಅಭಿವೃದ್ಧಿ ಕಾರ್ಯಗಳು ಮತ್ತು ಗ್ರಾಮದ ರಸ್ತೆಗಳ ಪ್ರಗತಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಈ ಸಂದರ್ಭ ಶಾಲೆಯ ಮುಖ್ಯ ಶಿಕ್ಷಕ ಗೋವಿಂದ್ ರಾಜು, ಸಮಾಜ ಸೇವಕ ಡಿ.ಸಿ ಪ್ರಕಾಶ್, ಕುಶಾಲನಗರ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ವಿ.ಪಿ ಶಶಿಧರ್, ಶಾಲೆಯ ಸಹ ಶಿಕ್ಷಕರು, ಶಾಲೆಯ ಆಡಳಿತ ಮಂಡಳಿಯ ಪ್ರಮುಖರಾದ ಶೇಖರ್, ನಾರಾಯಣ, ಗ್ರಾಮ ಪಂಚಾಯಿತಿ ಸದಸ್ಯರಾದ ಖತೀಜ, ಟಿ. ಪಿ ಹಮೀದ್, ಊರಿನ ಪ್ರಮುಖರಾದ ಸಂತೋಷ್, ಸುರೇಶ್, ಅಶ್ವಥ್ ಹಾಗೂ ಗ್ರಾಮಸ್ಥರು ಮತ್ತು ಹಿತೈಷಿಗಳು ಉಪಸ್ಥಿತರಿದ್ದರು.












