ಕಡಂಗ ಸೆ.23 : ಕುಂಜಲಗೇರಿ ಶ್ರೀ ಗಣಪತಿ ಸೇವಾ ಸಮಿತಿ ಗಣೆಶೋತ್ಸವವಕ್ಕೆ 25ರ ಸಂಭ್ರಮ ಆ ಪ್ರಯುಕ್ತ ರಜತಮಹೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮುಂಜಾನೆ ಗಣಪತಿ ಹೋಮ ನಂತರ ವಿಘ್ನನಿವಾರಕನ ಉತ್ಸವ ಮೂರ್ತಿಯ ಪ್ರತಿಷ್ಠಾಪನೆಯೋಂದಿಗೆ ಕಾರ್ಯಕ್ರಮ ಆರಂಭವಾಯಿತು.
ಚರ್ಮಂಡ ಅಪ್ಪುಣು ಪೂವಯ್ಯ ಉತ್ಸವ ಮೂರ್ತಿಯನ್ನು ನೀಡಿದರು.
ಶ್ರೀ ಗಣಪತಿ ಸೇವಾ ಸಮಿತಿ ಅಧ್ಯಕ್ಷ ಮುಕ್ಕಾಟಿರ ಬಿನ್ನು ಮುದ್ದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯುತ್ ಇಲಾಖೆಯ ನಿವೃತ್ತ ಸುಪರಿಟೆಂಡೆಂಟ್ ಮುತ್ತಣ್ಣ, ವಿದ್ಯುತ್ ವಿಭಾಗದ ಆಪ್ತ ಸಹಾಯಕರು ಪಾಲ್ಗೊಂಡು ಮಕ್ಕಳು ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು ಹಾಗೂ ಸಾಮನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕೆಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಸುಭಾಷ್ ಚಂದ್ರ ಬೆಳ್ಳಾರೆ ಮಾತನಾಡಿ, ನಮ್ಮ ದೇಶದ ಸಂಸ್ಕೃತಿ, ಆಚಾರ, ವಿಚಾರ, ಜೀವನ ಪಾಠ ಮತ್ತು ನಮ್ಮ ದೇಶದ ಸಂಸ್ಕೃತಿಯನ್ನು ಬೆಳೆಸಿ ಮುಂದಿನ ಪೀಳಿಗೆಗೆ ಉಳಿಸುವ ವಿಚಾರವಾಗಿ ಮಾತನಾಡಿದರು.
ಕುಳಿಯಕಂಡ ಪೊನ್ನಣ್ಣ ಕುಂಜಲಗೇರಿಯ ಶ್ರೀ ಗಣಪತಿ ಸೇವಾ ಸಮಿತಿ 25 ವರ್ಷದ ಇತಿಹಾಸವನ್ನು ತಿಳಿಸಿದರು. ಪ್ರತಿ ವರ್ಷದಂತೆ ಗ್ರಾಮದಿಂದ ಭಾರತೀಯ ಸೇನೆ ಹಾಗೂ ವಿವಿಧ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಇಗ್ಗುಡ ಜಯ ಸುಬ್ಬಯ್ಯ, ಇಗ್ಗುಡ ಲಾಲು ಚಿಣ್ಣಪ್ಪ, ಅಲ್ಲಪ್ಪಿರ ಎಸ್ ಸುಬ್ಬಯ್ಯ, ಚರ್ಮಂಡ ಎಸ್ ಗಿರೀಶ್, ಮುಂಡಂಡ ಎಂ.ಅಶ್ವಥ್, ಮುಂಡಂಡ ಮಂದಣ್ಣ, ಬಟ್ಟಕಾಳಂಡ ಕೆ.ಮಂದಣ್ಣ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಗ್ರಾ.ಪಂ ಅಧ್ಯಕ್ಷೆ ಬಟ್ಟಕಾಳಂಡ ಕಾಮೀ ಸುರೇಶ್ ಮತ್ತು ಗ್ರಾ.ಪಂ ಸದಸ್ಯೆ ಹೆಚ್.ಮಲ್ಲಿಗೆ ಪಾಲೊಂಡಿದ್ದರು.
ಸಭಾ ಕಾರ್ಯಕ್ರಮದ ನಂತರ ಮಂಗಳೂರಿನ ಶ್ರೀ ದತ್ತಾತ್ರೇಯ ಕುಣಿತ ಭಜನಾ ಮಂಡಳಿ ವತಿಯಿಂದ ಕುಣಿತ ಭಜನಾ ಕಾರ್ಯಕ್ರಮ ನಡೆಯಿತು. ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ವಿವಿಧ ಸಾಂಸ್ಕೃತಿಕ ಸ್ಪರ್ಧೆ ನಡೆಲಾಯಿತು. ಮಕ್ಕಳು, ಮಹಿಳೆಯರು, ಪುರುಷರು, ವಯಸ್ಕರು, ಹಾಡುಗಾರಿಕೆ, ನೃತ್ಯ, ರಸಪ್ರಶ್ನೆ ಹೀಗೆ ವಿವಿಧ ಪೈಪೋಟಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ರಜತಮಹೋತ್ಸವವದ ಮೆರುಗನ್ನು ಹೆಚ್ಚಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಪೈಪೋಟಿಯಲ್ಲಿ ಪಾಲ್ಗೊಂಡು ಜಯಗಳಿಸಿದವರಿಗೆ ಬಹುಮಾನ ನೀಡಿ ಗೌರವಿಸಲಾಯಿತು.
ಸಭಾ ಕಾರ್ಯಕ್ರಮವನ್ನು ಕುಳಿಯಕಂಡ ಪೊನ್ನಣ್ಣ, ಕಾಮೆಯಂಡ ಕಲ್ಪನಾ ಸಾಮ್ರಾಟ್ ನಿರೂಪಿಸಿದರು, ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೆ. ಎಸ್ ಪೊನ್ನಣ್ಣ ಹಾಗೂ ಚೊಟ್ಟೇರ ಕಿರಣ್ ನಿರೂಪಿಸಿದರು.
ಸಂಜೆ ಅಲಂಕೃತಗೊಂಡ ವಾಹನದಲ್ಲಿ ಮೆರವಣಿಗೆಯ ಮೂಲಕ ತೆರಳಿ ಹೊಳೆಯಲ್ಲಿ ಗಣಪತಿ ಮೂರ್ತಿಯನ್ನು ವಿಸರ್ಜಿಸಲಾಯಿತು.
ವರದಿ : ನೌಫಲ್ ಕಡಂಗ