ಮಡಿಕೇರಿ ಸೆ.23 : ನಗರದ ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ಬೆಳ್ಳಿ ಮಹೋತ್ಸವದ ಸಂಭ್ರಮದಲ್ಲಿದೆ. ವಿದ್ಯಾ ಸಂಸ್ಥೆಗೆ 25 ವರ್ಷಗಳು ತುಂಬಿದ ಹಿನ್ನೆಲೆ ಬೆಳ್ಳಿ ಹಬ್ಬದ ಲೋಗೋವನ್ನು ಇಂದು ಅನಾವರಣಗೊಳಿಸಲಾಯಿತು.
ಶಾಲೆಯ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೊಡವ ಸಮಾಜ ಹಾಗೂ ಶಾಲೆಯ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪ ಅವರು ಲೋಗೋದ ವಿಡಿಯೋವನ್ನು ಬಿಡುಗಡೆಗೊಳಿಸಿದರು. ಕೊಡವ ಸಮಾಜದ ಉಪಾಧ್ಯಕ್ಷ ಹಾಗೂ ಶಾಲೆಯ ಕಾರ್ಯಾಧ್ಯಕ್ಷ ನಂದಿನೆರವಂಡ ಚೀಯಣ್ಣ ಅವರು ಲೋಗೋವನ್ನು ಅನಾವರಣಗೊಳಿಸಿದರು.
ನಂತರ ಮಾತನಾಡಿದ ಮುತ್ತಪ್ಪ ಅವರು, ಉತ್ತಮ ಶಿಕ್ಷಣ ನೀಡುವ ಮೂಲಕ ಜನರಲ್ ತಿಮ್ಮಯ್ಯ ಶಾಲೆಯು ಮಾದರಿ ಶಿಕ್ಷಣ ಸಂಸ್ಥೆಯಾಗಿ 25 ವರ್ಷಗಳನ್ನು ಪೂರೈಸಿರುವುದು ಹೆಮ್ಮೆಯ ವಿಚಾರವಾಗಿದೆ ಎಂದರು.
ಶಿಕ್ಷಕರ ಪರಿಶ್ರಮದೊಂದಿಗೆ ವಿದ್ಯಾರ್ಥಿಗಳು ಕೂಡ ಉತ್ತಮ ಫಲಿತಾಂಶ ಗಳಿಸುವ ಮೂಲಕ ಶಾಲೆ ಹಾಗೂ ಪೋಷಕರಿಗೆ ಕೀರ್ತಿ ತಂದುಕೊಡಬೇಕು ಎಂದು ಕರೆ ನೀಡಿದರು.
ಶಾಲೆಯ ಪ್ರಾಂಶುಪಾಲರಾದ ಕಲ್ಲುಮಾಡಂಡ ಸರಸ್ವತಿ ಸುಬ್ಬಯ್ಯ, ಪ್ರಮುಖರಾದ ಕನ್ನಂಡ ಕವಿತಾ ಕಾವೇರಮ್ಮ, ಶಾಲಾ ಆಡಳಿತ ಮಂಡಳಿಯ ನಿರ್ದೇಶಕರುಗಳಾದ ನಂದಿನೆರವಂಡ ಎಂ.ದಿನೇಶ್, ಕೇಕಡ ದೇವಯ್ಯ, ಕಾಳಚಂಡ ಅಪ್ಪಣ್ಣ, ಪುತ್ತರಿರ ಕರುಣ್ ಕಾಳಯ್ಯ, ಮಂಡೀರ ಸದಾ ಮುದ್ದಪ್ಪ, ಮೂವೇರ ಜಯರಾಂ, ಹಿರಿಯ ಸಲಹೆಗಾರ ಚೌರೀರ ಕಾವೇರಿ ಪೂವಯ್ಯ, ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ಶಿಕ್ಷಕರು, ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕಿ ಸುಮಿತ್ರ ಈರಪ್ಪ ಪ್ರಾಸ್ತವಿಕ ಭಾಷಣ ಮಾಡಿದರು. ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿನಿ ಸಿಂಚನಾ ಪ್ರಸನ್ನ ಸ್ವಾಗತಿಸಿ, ಪೂರ್ಣ ಪೂವಮ್ಮ ನಿರೂಪಿಸಿ, ವಿದ್ಯಾರ್ಥಿ ವಿಪುಲ್ ಸೋಮಣ್ಣ ವಂದಿಸಿದರು.











