ಮಡಿಕೇರಿ ಅ.8 : ನಗರದ ಕಾವೇರಿ ಹಾಲ್ ಸಭಾಂಗಣದಲ್ಲಿ ನಡೆದ ಶಾಪಿಂಗ್ ಉತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಪ್ರಸ್ತುತ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಗುರುತಿಸಿಕೊಂಡಿದ್ದು, ಅವರನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದರು.
ಮಹಿಳೆಯರಿಗೆ ಹಾಗೂ ಮನೆಗೆ ಅಗತ್ಯವಾದ ವಸ್ತುಗಳನ್ನು ಗ್ರಾಹಕರಿಗೆ ನೆರವಾಗಿ ತಲುಪಿಸುವ ನಿಟ್ಟಿನಲ್ಲಿ ಶಾಪಿಂಗ್ ಉತ್ಸವವನ್ನು ಆಯೋಜಿಸಿದ್ದು, ವಿವಿಧ ಪರಿಕಾರಗಳನ್ನು ಮಾರಾಟ ಮಾಡುವುದರ ಜೊತೆಗೆ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದರೊಂದಿಗೆ ಜನರಿಗೆ ಉತ್ತಮ ವಾತಾವರಣವನ್ನು ಸೃಷ್ಟಿ ಮಾಡುವ ಸಲುವಾಗಿ ಹಲವು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿದೆ. ಗ್ರಾಹಕರು ಸ್ಥಳೀಯ ಮಹಿಳೆಯರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಅವರ ಆರ್ಥಿಕ ಸಬಲೀಕರಣವನ್ನು ಪುನರ್‍ಚೇತನ ಗೊಳಿಸಲು ಮುಂದಾಗಬೇಕೆಂದು ಕರೆ ನೀಡಿದರು.
ನಗರಸಭೆ ಅಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ಮಾತನಾಡಿ, ಮಹಿಳೆಯರು ಸ್ವಾವಲಂಭಿ ಜೀವನವನ್ನು ನಡೆಸಲು ಇಂತಹ ಮೇಳಗಳು ಸಹಕಾರಿಯಾಗಿದ್ದು, ಇಂತಹ ಕಾರ್ಯಕ್ರಮಗಳಿಂದ ಮಹಿಳೆಯರಿಗೆ ಉತ್ತಮ ಅವಕಾಶ ದೊರೆತಂತಾಗುತ್ತದೆ ಎಂದರು.
ಗ್ರಾಹಕರು ಹೆಚ್ಚಾದಾಗ ಮಾತ್ರ ಉದ್ಯಮಿಗಳು ಬೆಳೆಯಲು ಸಾಧ್ಯ. ಆದ್ದರಿಂದ ಇಂತಹ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹೆಚ್ಚಿನ ಪ್ರೋತ್ಸಾಹ ನೀಡುವ ಮೂಲಕ ಮಹಿಳೆಯರ ಆರ್ಥಿಕ ಬೆಳವಣಿಗೆಗೆ ಸಹಕಾರ ನೀಡಬೇಕು ಎಂದ ಅವರು, ಸಣ್ಣ ಉದ್ಯಮ ನಡೆಸಲು ಸರ್ಕಾರದಿಂದ ಮಹಿಳೆಯರಿಗೆ ಅನೇಕ ಸೌಲಭ್ಯಗಳಿದ್ದು, ಅವುಗಳನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಸಲಹೆ ನೀಡಿದರು.
ಮಡಿಕೇರಿ ಕೊಡವ ಸಮಾಜದ ಪೊಮ್ಮಕ್ಕಡ ಒಕ್ಕೂಟದ ಅಧ್ಯಕ್ಷೆ ಕನ್ನಂಡ ಕವಿತಾ ಬೊಳ್ಳಪ್ಪ ಮಾತನಾಡಿ, ಕಾರ್ಯಕ್ರಮದ ಆಯೋಜಕರು ಮಹಿಳಾ ಉದ್ಯಾಮಿಗಳಿಗೆ ವೇದಿಕೆಯನ್ನು ಕಲ್ಪಿಸಿದ್ದು, ಸಣ್ಣ ಮಕ್ಕಳ ಪ್ರತಿಭೆಳನ್ನು ಅನಾವಣಕ್ಕೆ ಅವಕಾಶ ಕಲ್ಪಿಸಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮ ಮತ್ತಷ್ಟ ನಡೆಸುವಂತಾಗಲಿ ಎಂದು ಹಾರೈಸಿದರು.
ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಮತ್ತು ನಟ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಪಾಲ್ಗೊಳ್ಗೊಂಡಿದ್ದರು. ಕಾರ್ಯಕ್ರಮವನ್ನು ಡೀನಾ ಪರ್ಲಕೋಟಿ ಹಾಗೂ ಮಂಡೇಟಿರ ಪ್ರಿಷ ಪೂವಮ್ಮ ನಿರೂಪಿಸಿದರು.
ಗಮನ ಸೆಳೆದ ಅಲಂಕಾರಿಕ ವಸ್ತುಗಳು :: ಆಯೋಜಕರಾದ ಯಮುನಾ ಅಯ್ಯಪ್ಪ ಹಾಗೂ ಅಂಜು ಸುಬ್ರಮಣಿ ನೇತೃತ್ವದಲ್ಲಿ ನಡೆದ ಶಾಪಿಂಗ್ ಉತ್ಸವದಲ್ಲಿ ಸಿದ್ಧ ಉಡುಪುಗಳು, ಸೀರೆಗಳು, ವಿಶೇಷ ಕಲಾಕೃತಿಗಳು, ಅನುಕರಣೆ ಆಭರಣಗಳು, ಕಲಾ ವಸ್ತುಗಳು, ಗೊಂಬೆಗಳು, ಉಲನ್ ವಸ್ತುಗಳು ಎಂಬ್ರೈಡಿಂಗ್ ಕಾರಪೇಟ್, ಡ್ರೆಸ್ ಮೆಟೀರಿಯಲ್, ತಿಂಡಿ ತಿನಿಸುಗಳು, ಅಲಂಕಾರಿಕ ಹೂಗಳು, ಹೂವು ಗಿಡಗಳು, ಮತ್ತಿತರೆ ಆಕರ್ಷಣೀಯ ಕಲಾತ್ಮಕ ವಸ್ತುಗಳು ಸಾರ್ವಜನಿಕರು ಗಮನ ಸೆಳೆಯಿತು.
ಸುಮಾರು 50ಕ್ಕಿಂತ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿತ್ತು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಶಿವಮ್ ಐಕೇರ್ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರ ನಡೆಯಿತು. ಇದೇ ಸಂದರ್ಭ ನೊಂದಾಯಿಸಿಕೊಂಡ ಎಲ್ಲಾ ವಯೋಮಿತಿಯವರಿಗೆ ಫ್ರಿ ಸೈಲ್ ನೃತ್ಯ ಸ್ಪರ್ಧೆ ಹಾಗೂ ಮಕ್ಕಳಿಗೆ ಮ್ಯಾಜಿಕ್ ಶೋ ನಡೆಯಿತು. ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿ ನೃತ್ಯ ಸಂಯೋಜಕರಾದ ಪಿ.ಎನ್.ದಿನೇಶ್, ಮಹೇಶ್ ಕಾರ್ಯನಿರ್ವಹಿಸಿದರು.









