ಮಡಿಕೇರಿ ಅ.12 : ಕೊಡವ ಸಮುದಾಯವನ್ನು ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿ, ಉದ್ಯೋಗ ಮತ್ತು ಶೈಕ್ಷಣಿಕ ಮೀಸಲಾತಿ ಕಲ್ಪಿಸಲು ಸೂಕ್ತ ಅವಕಾಶ ಕಲ್ಪಿಸಿಕೊಡುವಂತೆ ಒತ್ತಾಯಿಸಿ ‘ಯುನೈಟೆಡ್ ಕೊಡವ ಆರ್ಗನೈಜೇಷನ್ – ಯುಕೊ’ ನಿಯೋಗ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದತು.
ಇಂದು ಬೆಂಗಳೂರಿನ ದೇವರಾಜ ಅರಸು ಭವನದಲ್ಲಿರುವ ಕಛೇರಿಯಲ್ಲಿ ಯುಕೊ ಅಧ್ಯಕ್ಷ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಅವರ ನೇತೃತ್ವದಲ್ಲಿ ಆಯೋಗವನ್ನು ಭೇಟಿ ಮಾಡಿ ಚರ್ಚಿಸಿದ ನಿಯೋಗ ಕೊಡಗು ಜಿಲ್ಲೆಯಲ್ಲಿ ಕೇವಲ 1.75 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಕೊಡವ ಸಮುದಾಯವು ಅಲ್ಪಸಂಖ್ಯಾತ ಜನಾಂಗವಾಗಿದೆ. ಸಾಮಾಜಿಕ ಮತ್ತು ಸಾಂಸ್ಕೃತಿಕವಾಗಿ ತನ್ನ ಆದ ವೈಶಿಷ್ಟ್ಯತೆಯನ್ನು ಕಾಪಾಡಿಕೊಂಡು ಬಂದಿರುವ ಈ ಸಣ್ಣ ಸಮುದಾಯ ವಿವಿದ ಆಯಾಮಗಳಲ್ಲಿ ವಿಶ್ವಮಟ್ಟದಲ್ಲಿ ಗಮನ ಸೆಳೆದಿದೆ.
ಪ್ರಸ್ತುತ ಕೊಡವ ಸಮುದಾಯವು ಕರ್ನಾಟಕ ರಾಜ್ಯದ ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಪ್ರವರ್ಗ 3A ಅಡಿಯಲ್ಲಿ ವರ್ಗೀಕರಣಗೊಂಡು ಒಕ್ಕಲಿಗರು ಹಾಗು ಬಲಿಜ ಸಮುದಾಯಗಳೊಂದಿಗೆ ರಾಜ್ಯ ದಲ್ಲಿ ಶೇ. 4 ರಷ್ಟು ಶಿಕ್ಷಣ ಮತ್ತು ಉದ್ಯೋಗ ವಲಯಕ್ಕೆ ಸೀಮಿತವಾದ ಮೀಸಲಾತಿಯನ್ನು ಹಂಚಿಕೊಂಡಿದೆ. ಈ ಮೀಸಲಾತಿಯು ಕೇವಲ ರಾಜ್ಯಕ್ಕೆ ಮಾತ್ರ ಸೀಮಿತಗಿದ್ದು, ರಾಜ್ಯ ಸರ್ಕಾರ ಉದ್ಯೋಗ ಹಾಗೂ ರಾಜ್ಯದ ಶೈಕ್ಷಣಿಕ ಸಂಸ್ಥೆಗಳ ವ್ಯಾಪಿಗೆ ಮಾತ್ರ ಒಳಪಡುತ್ತದೆ. ಆದ್ದರಿಂದ ಈ ಮೀಸಲಾತಿ ಕೇಂದ್ರ ಸರ್ಕಾರದ ಅಥವಾ ರಾಜ್ಯದ ಹೊರಗಿನ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುವದಿಲ್ಲ. ಹೀಗಾಗಿ ಕೊಡವ ಸಮುದಾಯವು ಕೇಂದ್ರ ಸರ್ಕಾರದ ಮತ್ತು ರಾಜ್ಯದ ಹೊರಗಿನ ಶಿಕ್ಷಣ ಸಂಸ್ಥೆಗಳ ಮೀಸಲಾತಿ ವ್ಯವಸ್ಥೆಯಿಂದ ಸಂಪೂರ್ಣ ವಂಚಿತರಾಗಿದ್ದಾರೆ. ಆದ್ದರಿಂದ ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಕೊಡವ ಜನಾಂಗವನ್ನು ಸೇರ್ಪಡೆಗೊಳಿಸುವುದರ ಮೂಲಕ ಕೇಂದ್ರದ ಮೀಸಲಾತಿ ಕಲ್ಪಿಸುವಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ, ಕರ್ನಾಟಕದಲ್ಲಿ ಕೊಡವರು ಸೇರಿದಂತೆ 191ಪಂಗಡಗಳು ಕೇಂದ್ರದ ಪಟ್ಟಿಯಿಂದ ವಂಚಿತರಾಗಿದ್ದು, ಈ ಎಲ್ಲಾ ಸಮುದಾಯಗಳನ್ನು ಕೇಂದ್ರದ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಲು ಶಿಫಾರಸ್ಸು ಮಾಡಿ ಪತ್ರವನ್ನು ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ರಾಜ್ಯ ಸರ್ಕಾರ ಮುಂದಿನ ತೀರ್ಮಾನ ಕೈಗೊಂಡು ಕೇಂದ್ರಕ್ಕೆ ಶಿಫಾರಸು ಮಾಡಬೇಕಾಗಿದೆ. ಇದೀಗ ಯುಕೊ ಮನವಿಯನ್ನು ಪರಿಗಣಿಸಿ ಮತ್ತೊಮ್ಮೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ನಿಯೋಗಕ್ಕೆ ಆಯೋಗದ ಅಧ್ಯಕ್ಷರು ಭರವಸೆ ನೀಡಿದರು. ಸಾಧ್ಯವಾದಲ್ಲಿ ಕೇಂದ್ರದ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಮನವಿ ಸಲ್ಲಿಸುವಂತೆಯೂ ಸಲಹೆ ನೀಡಿದರು.
ನಿಯೋಗದಲ್ಲಿ ಚೆಪ್ಪುಡಿರ ಸುಜು ಕರುಂಬಯ್ಯ,ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ನೆಲ್ಲಮಕ್ಕಡ ಜೆಫ್ರಿ ಮಾದಯ್ಯ, ಪಂಚಲ್ ಪೊನ್ನಪ್ಪ,ಮಚ್ಚಾಮಾಡ ರಮೇಶ್, ಅರುಣ ಸೋಮಯ್ಯ, ಅಜಿನಿಕಂಡ ಸೂರಜ್ ತಿಮ್ಮಯ್ಯ, ತೀತಿಮಾಡ ಬೋಸ್ ಅಯ್ಯಪ್ಪ, ಬೊಪ್ಪಂಡ ರವಿ, ಡಾ. ಶರಣ್ ಸುಬ್ಬಯ್ಯ, ಡಾ. ಕುಪ್ಪಂಡ ರಾಹುಲ್ ಪೊನ್ನಪ್ಪ, ಚಿರಿಯಪಂಡ ವಿಶು ಕಾಳಪ್ಪ, ಕೊಕ್ಕಲೆರ ಕುಟ್ಟಪ್ಪ, ಪಟ್ಟಡ ಸೋಮಣ್ಣ, ಅರೆಯಡ ಲೋಕೇಶ್, ಕೊಪ್ಪಿರ ವಿನು ಅಯ್ಯಪ್ಪ, ಕೊಟ್ರಂಡ ಶ್ರೀಕಾಂತ ಪೂವಣ್ಣ, ಕುಯಿಮಂಡ ರಾಜೇಶ್ ಮೇದಪ್ಪ, ಅಂಜಪರವಂಡ ರಂಜು ಮುತ್ತಪ್ಪ, ಚೆಪ್ಪುಡಿರ ಪ್ರತಿಮಾ ಕರುಂಬಯ್ಯ, ಪನ್ನಗಾ ಕರುಂಬಯ್ಯ, ಕಳ್ಳಿಚಂಡ ದೀನ ಉತ್ತಪ್ಪ, ಬೊಳ್ಳಚೆಟ್ಟಿರ ಮೈನಾ ಪ್ರಕಾಶ್, ಕುಂಜಿಲಂಡ ಗ್ರೇಸಿ ಪೂಣಚ್ಚ, ಕೊಕ್ಕಲೆಮಾಡ ರತಿ ಕುಶಾಲಪ್ಪ, ಮೀದೇರಿರ ಟೋಯಿಸಿ ಪೂವಣ್ಣ ಹಾಜರಿದ್ದರು.
ಮನವಿ ಸಲ್ಲಿಸುವ ಸಂದರ್ಭ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಬಿ.ಎಸ್ ರಾಜಶೇಖರ್ ಉಪಸ್ಥಿತರಿದ್ದರು.