ಮಡಿಕೇರಿ ಅ.13 : ಅಖಿಲ ಕರ್ನಾಟಕ ಅರುಂಧತಿಯಾರ್ ಆದಿದ್ರಾವಿಡ ಪೌರಕಾರ್ಮಿಕ ಸಂಘಟನೆಯ ರಾಜ್ಯಾಧ್ಯಕ್ಷ ಆರ್.ಕೃಷ್ಣ ಅವರನ್ನು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ಅಥವಾ ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕೆಂದು ಅಖಿಲ ಕರ್ನಾಟಕ ಅರುಂಧತಿಯಾರ್ ಮಹಾಸಭಾ ಒತ್ತಾಯಿಸಿದೆ.
ಮಡಿಕೇರಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ರಾಜ್ಯ ಉಪಾಧ್ಯಕ್ಷ ವಿರಾಜಪೇಟೆಯ ಪಳನಿಪ್ರಕಾಶ್, ಪೌರಕಾರ್ಮಿಕ ಸಫಾಯಿ ಕರ್ಮಚಾರಿಗಳಿಗೆ ಪ್ರತ್ಯೇಕವಾಗಿ ಶೇ.3ರಷ್ಟು ಒಳಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಹೋರಾಟ ಮಾಡಿದ ಏಕೈಕ ನಾಯಕ ಆರ್.ಕೃಷ್ಣ ಅವರಾಗಿದ್ದಾರೆ. ಸಮುದಾಯದ ಪರವಾಗಿ ಕಳೆದ 25 ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದ್ದು, ಅವರ ಪ್ರಯತ್ನದ ಫಲವಾಗಿ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕಿದೆ ಎಂದರು.
1996ರಲ್ಲಿ ರಾಜಕೀಯ ಕ್ಷೇತ್ರ ಪ್ರವೇಶ ಮಾಡಿ ಮಂಡ್ಯ ಜಿಲ್ಲೆಯ ಶ್ರೀರಂಗ ಪಟ್ಟಣ ಪುರಸಭೆಗೆ ಅಧ್ಯಕ್ಷರು ಹಾಗೂ ಎರಡನೇ ಬಾರಿಗೆ ಉಪಾಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಅನುಭವನ ಹೊಂದಿದ್ದಾರೆ. ಆರು ಜಿಲ್ಲೆಗಳಲ್ಲಿ ಸಮುದಾಯದ ಸಮಸ್ಯೆಗಳಿಗೆ ಹೋರಾಟ ಮಾಡುತ್ತಿರುವ ಕೃಷ್ಣ ಅವರಿಗೆ ರಾಜ್ಯ ಸರ್ಕಾರ ಉನ್ನತ ಹುದ್ದೆ ನೀಡಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಆರ್.ರಂಗಸ್ವಾಮಿ ಹಾಗೂ ಕುಶಾಲನಗರ ತಾಲ್ಲೂಕು ಅಧ್ಯಕ್ಷ ಹೆಚ್.ಆರ್.ಮಂಜು ಉಪಸ್ಥಿತರಿದ್ದರು.









