ಸುಂಟಿಕೊಪ್ಪ ಅ.13 : ಸುಂಟಿಕೊಪ್ಪ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಚುನಾವಣೆಯು ಅ.16 ರಂದು ನಡೆಯಲಿದ್ದು, ಬಿಜೆಪಿ ಕಾಂಗ್ರೆಸ್ ಹೊಂದಾಣಿಕೆಯ ರಾಜಕೀಯ ಬೆಳವಣಿಗೆಯಿಂದ 13 ಸ್ಥಾನಗಳಲ್ಲಿ 6 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಉಳಿದ 7 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ಸುಂಟಿಕೊಪ್ಪ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘ ಹಿಂದಿನಿಂದಲೂ ಬಿಜೆಪಿ ಆಡಳಿತದಲಿದ್ದು, ವಿರೋಧ ಪಕ್ಷದಲ್ಲಿ ಕಾಂಗ್ರೆಸ್ಸಿನ ಕೆಲವು ನಿರ್ದೇಶಕರು ಇದ್ದರು.
ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ಸ್ಥಾನ ಹಂಚಿಕೆಯ ಪ್ರಸ್ತಾಪಕ್ಕೆ ಹಿರಿಯ ಸಹಕಾರಿಗಳು ಮುಂದಾದರು. ಪರಿಣಾಮವಾಗಿ ಇಂತಿಷ್ಟು ಸೀಟು ಬಿಜೆಪಿಗೆ ಹಾಗೂ ಕಾಂಗ್ರೆಸ್‍ಗೆ ಹಂಚಿಕೆ ಸೂತ್ರ ಅಳವಡಿಸಲಾಯಿತು. ಅದು ಯಶಸ್ವಿಯೂ ಆಯಿತು. ಆದರೆ ಸಾಲಗಾರರ ಸಾಮಾನ್ಯ 6 ಕ್ಷೇತ್ರದಲ್ಲಿ ಹಾಗೂ ಪರಿಶೀಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ಅಭ್ಯರ್ಥಿಗಳ ಬಿಗಿ ಪಟ್ಟಿನಿಂದ ಚುನಾವಣೆಯು ತಾ.16 ರಂದು ನಡೆಯಲಿದೆ.
ಸಾಲಗಾರರ ಸಾಮಾನ್ಯ 6 ಕ್ಷೇತ್ರಕ್ಕೆ ಉದಯಕುಮಾರ್ ಪಟ್ಟೆಮನೆ, ಜೆರ್ಮಿ ಡಿಸೋಜ, ಕ್ಲೈವಾ ಪೊನ್ನಪ್ಪ, ಮೋಹನ್ ಆರ್.ಆರ್.ಕುಂಜಿಲನ ಮಂಜುನಾಥ್, ಕೆ.ಆರ್.ಮಂಜುನಾಥ್ ಹಾಗೂ ಡಾ.ಶಶಿಕಾಂತರೈ ಸ್ಪರ್ಧಾ ಕಣದಲ್ಲಿರುವುದರಿಂದ ಚುನಾವಣೆ ನಡೆಯಲಿದೆ. ಪಕ್ಷೇತರ ಅಭ್ಯರ್ಥಿ ಮೋಹನ್ ನಾಮಪತ್ರ ಹಿಂಪಡೆಯಲು ಬಿಗಿಪಟ್ಟು ಹಿಡಿದಿರುವುದೇ ಚುನಾವಣೆ ಅನಿವಾರ್ಯವಾಗಿದೆ. ಪರಿಶೀಷ್ಟ ಜಾತಿ ಮೀಸಲು ಕ್ಷೇತ್ರದ 1 ಬಿ.ಕೆ.ದಯಾನಂದ ಹಾಗೂ ಐ. ಸೋಮನಾಥ್ ಸ್ಪರ್ಧಿಸಿದ್ದಾರೆ.
ಉಳಿದಂತೆ ಸಾಲಗಾರಲ್ಲದ ಕ್ಷೇತ್ರದಿಂದ ಹಾಲಿ ಅಧ್ಯಕ್ಷ ದಾಸಂಡ ರಮೇಶ ಚಂಗಪ್ಪ, ಹಿಂದುಳಿದ ವರ್ಗದ (ಬಿ) ಕ್ಷೇತ್ರದಿಂದ ಎಂ.ಎನ್.ಕೊಮಾರಪ್ಪ, ಹಿಂದುಳಿದ ವರ್ಗ(ಎ) ಕ್ಷೇತ್ರದಿಂದ ಕೆ.ಪಿ.ಜಗನ್ನಾಥ್, ಮಹಿಳೆಯರ ಮೀಸಲು ಕ್ಷೇತ್ರದಿಂದ ಪಿ.ಪಿ.ಲೀಲಾವತಿ, ಕೆ.ವಿ.ರಮ್ಯಾ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಡಿ.ಕೆ.ಗಂಗಾಧರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.









