ಮಡಿಕೇರಿ ಅ.13 : ಐತಿಹಾಸಿಕ ಹಿನ್ನೆಲೆಯ ಮಡಿಕೇರಿ ದಸರಾ ಉತ್ಸವಕ್ಕೆ ಸಾಹಿತ್ಯ ಸ್ಪರ್ಶವನ್ನು ನೀಡುವ ‘ಬಹುಭಾಷಾ ಕವಿಗೋಷ್ಠಿ’ ಅ.18 ರಂದು ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ನಡೆಯಲಿದ್ದು, ನಾಡಿನ ಉದಯೋನ್ಮುಖ ಕವಿ, ಕವಿಯಿತ್ರಿಯರ ಕವನ ವಾಚನ ಸಾಹಿತ್ಯಾಭಿಮಾನಿಗಳನ್ನು ಸೆಳೆಯಲಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಹುಭಾಷಾ ಕವಿಗೋಷ್ಠಿ ಸಮಿತಿಯ ಅಧ್ಯಕ್ಷ ಉಜ್ವಲ್ ರಂಜಿತ್ ಅಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ನಡೆಯುವ ಕವಿಗೋಷ್ಠಿಯಲ್ಲಿ ಆಯ್ದ 60 ಕವನಗಳ ವಾಚನ ನಡೆಯಲಿದೆಯೆಂದು ತಿಳಿಸಿದರು.
ಕವಿಗೋಷ್ಠಿಯನ್ನು ಡಿಸಿಸಿ ಬ್ಯಾಂಕ್ ರಸ್ತೆಯ ಬಳಿಯ ‘ರಾಷ್ಟ್ರಕವಿ ಕುವೆಂಪು’ ಪುತ್ಥಳಿಗೆ ಕವಿಗೋಷ್ಠಿಯ ಅಧ್ಯಕ್ಷರಾದ ಹಿರಿಯ ಕವಿ, ಸಾಹಿತಿ, ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಕೋರನ ಸರಸ್ವತಿ ಪ್ರಕಾಶ್ ಮತ್ತು ಸಮಿತಿಯ ಪದಾಧಿಕಾರಿಗಳು ಪುಷ್ಪಗುಚ್ಛವನ್ನಿರಿಸಿ ಗೌರವ ಸಲ್ಲಿಸುವ ಮೂಲಕ ಚಾಲನೆ ನೀಡಲಾಗುತ್ತದೆ ಎಂದರು.
ಕವಿಗೋಷ್ಠಿಯಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ಹಿರಿಯ ವಕೀಲರಾದ ಹೆಚ್.ಎಸ್. ಚಂದ್ರಮೌಳಿ ಅವರು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಾಂತಾರ ಚಲನ ಚಿತ್ರದ ‘ಸಿಂಗಾರ ಸಿರಿಯೇ’ ಗೀತ ರಚನಾಕಾರರು, ಪ್ರತಿಷ್ಟಿತ ಸೌತ್ ಇಂಡಿಯನ್ ಇಂಟರ್ ನ್ಯಾಷನಲ್ ಮೂವಿ ಅವಾರ್ಡ್ ವಿಜೇತರಾದ ಪ್ರಮೋದ್ ಮರವಂತೆ ಅವರನ್ನು ಆಹ್ವಾನಿಸಲಾಗಿದೆಯೆಂದು ತಿಳಿಸಿದರು.
ಅತಿಥಿಗಳಾಗಿ ಕೊಡಗು ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷರಾದ ಗಿರೀಶ್ ಮಲ್ಲಪ್ಪ ಮೋರಿಕಲ್ಲು, ಕೊಡವ ಭಾಷಿಕ ಸಮುದಾಯಗಳ ಕೂಟದ ಅಧ್ಯಕ್ಷರಾದ ಡಾ.ಮೇಚಿರ ಸುಭಾಶ್ ನಾಣಯ್ಯ, ದಸರಾ ಸಮಿತಿ ಅಧ್ಯಕ್ಷೆ ಅನಿತಾ ಪೂವಯ್ಯ, ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ, ಉಪಾಧ್ಯಕ್ಷೆ ಸವಿತಾ ರಾಕೇಶ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಖಜಾಂಚಿ ಅರುಣ್ ಶೆಟ್ಟಿ ಮತ್ತಿತರರು ಭಾಗವಹಿಸಲಿದ್ದಾರೆಂದರು.
ಅಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ಜಿ.ರಾಜೇಂದ್ರ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಕವಿಗಳಿಗೆ ಪ್ರಶಂಸನಾ ಪತ್ರ ವಿತರಣೆ ಮಾಡಲಿದ್ದಾರೆ.
ಕವನ ಸಂಕಲನ- ಐತಿಹಾಸಿಕ ನಾಡ ಹಬ್ಬ ಮಡಿಕೇರಿ ದಸರಾ ಉತ್ಸವದ ಪ್ರಮುಖ ಆಕರ್ಷಣೆಗಳಲ್ಲೊಂದಾದ ಬಹುಭಾಷಾ ಕವಿಗೋಷ್ಠಿಯನ್ನು ಈ ಬಾರಿ ಅರ್ಥ ಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ಈಗಾಗಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.
ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ.ಎಂ. ರವಿ ಅವರು, ಈ ಬಾರಿ 200 ಕ್ಕೂ ಹೆಚ್ಚು ಕವನಗಳು ಬಂದಿದ್ದು ಅವುಗಳಲ್ಲಿ ಸುಮಾರು 60 ಕವನಗಳನ್ನು ಆಯ್ಕೆ ಮಾಡಿ ಕವನ ಸಂಕಲನ ಹೊರತಲಾಗುತ್ತಿದೆಯೆಂದು ವಿವರಗಳನ್ನಿತ್ತರು.
ಈ ಬಾರಿ ಜಿಲ್ಲೆ ಸೇರಿದಂತೆ ನೆರೆ ಕರೆಯ ಜಿಲ್ಲೆ ಮತ್ತು ರಾಜ್ಯಗಳಿಂದಲು ಸಾಹಿತ್ಯಾಸಕ್ತರು ಕವನಗಳನ್ನು ಕಳುಹಿಸಿದ್ದಾರೆ. ಇವುಗಳ ನಡುವೆ ಸ್ಥಳೀಯ ಸಾಹಿತ್ಯ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ನೀಡಲು ಒತ್ತು ನೀಡಲಾಗಿದೆ. ಮಕ್ಕಳ ಕವನಗಳಿಗು ಪ್ರಾಧಾನ್ಯತೆ ನೀಡಲಾಗಿದೆಯೆಂದು ಉಜ್ವಲ್ ರಂಜಿತ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಹುಭಾಷಾ ಕವಿಗೋಷ್ಠಿ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ.ಎಂ.ರವಿ, ಸಹ ಕಾರ್ಯದರ್ಶಿ ಪ್ರಸಾದ್ ಸಂಪಿಗೆ ಕಟ್ಟೆ, ಸದಸ್ಯರಾದ ಅರುಣ್ ಕೂರ್ಗ್, ಅಬ್ದುಲ್ ಕೌಸರ್ ಹಾಗೂ ಎಸ್.ಜಿ.ಉಮೇಶ್ ಉಪಸ್ಥಿತರಿದ್ದರು.








