ಮಡಿಕೇರಿ ಅ.13 : ಸಹಕಾರ ಸಂಘಗಳು ಪ್ರಜಾಸತ್ತಾತ್ಮಕ ಸಂಸ್ಥೆಗಳಾಗಿದ್ದು, ಸದಸ್ಯರೇ ಸಹಕಾರ ಸಂಸ್ಥೆಗಳನ್ನ ನಿರ್ವಹಿಸುವ ಮತ್ತು ನಿಯಂತ್ರಿಸುವ ವ್ಯವಸ್ಥೆ ಇದೆ. ಸಹಕಾರ ಸಂಘಗಳು ಕಾರ್ಯನೀತಿ ರೂಪಿಸುವಲ್ಲಿ ನಿರ್ಧಾಗಳನ್ನು ಕೈಗೊಳ್ಳುವ ಕಾರ್ಯದಲ್ಲಿ ಮತ್ತು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಲ್ಲಿ ಪ್ರತಿಯೊಬ್ಬ ಸದಸ್ಯನಿಗೆ ಹಕ್ಕುಂಟು. ಆದರೆ ಪ್ರಜಾಪ್ರಭುತ್ವ ಸ್ವೇಚ್ಛಾಚಾರವಾಗಿರಬಾರದು. ಕಾರ್ಯನಿರ್ವಹಣೆಯು ಉಪನಿಯಮಗಳ, ನಿಯಮಗಳ ಹಾಗೂ ಸಹಕಾರಿ ಅಧಿನಿಯಮ ಮತ್ತು ಇತರ ಅಧಿನಿಯಮಗಳ ಮಿತಿಗೊಳಪಟ್ಟು ನಿಯಂತ್ರಿಸಲ್ಪಟ್ಟಲ್ಲಿ ಸಂಘಗಳು ಉತ್ತಮ ರೀತಿಯಲ್ಲಿ ಸಾಗುತ್ತವೆ ಎಂದು ಕೊಡಗು ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಎಂ.ಎಸ್.ಕೃಷ್ಣ ಪ್ರಸಾದ್ ಅಭಿಪ್ರಾಯಪಟ್ಟರು.
ಬೆಂಗಳೂರು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಂಯುಕ್ತಾಶ್ರಯದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಮತ್ತು ಕಾರ್ಯದರ್ಶಿಗೆ ಸಹಕಾರ ಕಾಯ್ದೆ, ಕಾನೂನು, ಹಾಲಿನ ಶೇಖರಣೆ, ಸಂಗ್ರಹಣೆ ಹಾಗೂ ಲೆಕ್ಕಪತ್ರ ನಿರ್ವಹಣೆ ಕುರಿತು ವಿಶೇಷ ಶಿಕ್ಷಣ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎ.ಕೆ.ಮನು ಮುತ್ತಪ್ಪ, ಭಾರತವು ವಿಶ್ವದಲ್ಲಿ ಅತಿ ಹೆಚ್ಚು ಹಾಲು ಉತ್ಪಾದಕ ಮತ್ತು ಗ್ರಾಹಕ ರಾಷ್ಟ್ರವಾಗಿದೆ. ಕರ್ನಾಟಕವು ಹಾಲು ಉತ್ಪಾದನೆಯಲ್ಲಿ ದೇಶದ 9ನೇ ಸ್ಥಾನದಲ್ಲಿದೆ. ಆದರೆ ಕೊಡಗು ಜಿಲ್ಲೆ ಮಾತ್ರ ಹಾಲು ಉತ್ಪಾದನೆಗಿಂತ ಗ್ರಾಹಕ ಜಿಲ್ಲೆಯಾಗುತ್ತಿದೆ. ಜಿಲ್ಲೆಯ ಕುಶಾಲನಗರ ಮತ್ತು ಸೋಮವಾರಪೇಟೆಯ ಕೆಲ ಪ್ರದೇಶಗಳನ್ನು ಹೊರತುಪಡಿಸಿದರೆ ಹೈನೋದ್ಯಮವು ಅಪರೂಪವಾಗಿದೆ. ಹಾಲಿಗೆ ಹೆಚ್ಚುತ್ತಿರುವ ಬೇಡಿಕೆ, ಸರ್ಕಾರದ ಬೆಂಬಲ, ಸುಧಾರಿತ ತಳಿ ಮತ್ತು ಆಹಾರ ಪದ್ಧತಿಗಳಿಂದಾಗಿ ಡೈರಿ ವಲಯವು ಅಂದರೆ ಹಾಲು ಉತ್ಪಾದಕರ ಸಹಕಾರ ಸಂಘ ದೇಶದ ಜಿ.ಡಿ.ಪಿ. ಗೆ ಗಣನೀಯ ಕೊಡುಗೆ ನೀಡುತ್ತದೆ ಹಾಗೂ ಪ್ರಜೆಗಳ ಪೌಷ್ಠಿಕಾಂಶದ ಅಗತ್ಯತೆಗಳನ್ನು ಪೂರೈಸುತ್ತದೆ ಎಂದರು.
ಕರ್ನಾಟಕವು ಭಾರತದ ಅತಿಹೆಚ್ಚು ಕಾಫಿ ಉತ್ಪಾದಿಸುವ ರಾಜ್ಯವಾಗಿದೆ. ದೇಶದ ಶೇ.70 ರಷ್ಟು ಕಾಫಿಯು ನಮ್ಮ ರಾಜ್ಯದಲ್ಲಿ ಬೆಳೆಯಲಾಗುತ್ತದೆ. ಅದರಲ್ಲಿ ಜಿಲ್ಲೆಯ ಕೊಡಗು ಶೇ.50 ರಷ್ಟು ಎಂದರೆ ದೇಶದ ಶೇ.35 ರಷ್ಟು ಉತ್ಪಾದಿಸಲಾಗುತ್ತಿದೆ. ಆದರೆ ಇದನ್ನು ಬೆಳೆಯಲು ಉಪಯೋಗಿಸುವ ಸಗಣಿ ಗೊಬ್ಬರಕ್ಕೆ ಜಿಲ್ಲೆಯವರು ದುಪ್ಪಟ್ಟು ಬೆಲೆ ನೀಡುತ್ತಿದ್ದಾರೆ. ಸಗಣಿ ಗೊಬ್ಬರವನ್ನು ಹೊರ ಜಿಲ್ಲೆಗಳಿಂದ ಮತ್ತು ಹೊರ ರಾಜ್ಯಗಳಿಂದಲೂ ಖರೀದಿಸುತ್ತಿದ್ದು, ಕಾಫಿ ಕೃಷಿ ದುಬಾರಿಯಾಗಿ ಪರಿಣಮಿಸುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಆದ್ದರಿಂದ ಸರ್ಕಾರ ಮತ್ತು ಸಂಬಂಧಿಸಿದ ಇಲಾಖೆಗಳು ಹೆಚ್ಚಿನ ಮುತುವರ್ಜಿ ವಹಿಸಿ ಜಿಲ್ಲೆಯ ಎಲ್ಲಾ ಭಾಗಗಳಲ್ಲಿ ಹೈನೋದ್ಯಮಕ್ಕೆ ಪ್ರೋತ್ಸಾಹ ನೀಡಿದರೆ ಜಿಲ್ಲೆಯ ಪ್ರಮುಖ ಕೃಷಿ ಕಾಫಿಯ ಉತ್ಪಾದನಾ ವೆಚ್ಚ ಕಡಿಮೆಯಾಗಿ ಬೆಳೆಗಾರರಿಗೆ ಅನುಕೂಲವಾಗುತ್ತದೆ. ಉದ್ಯೋಗ ಸೃಷ್ಠಿಯೂ ಹೆಚ್ಚಾಗುತ್ತದೆ. ಸಮಾಜದಲ್ಲಿ ಉತ್ಪಾದನೆಯಿಂದ ಆರಂಭಿಸಿ ಮಾರಾಟದವರೆಗೆ ಸಹಕಾರ ವ್ಯವಸ್ಥೆ ಅತ್ಯಾವಶ್ಯಕವಾಗಿದೆ. ಸಹಕಾರ ಸಂಘ ಸಮರ್ಪಕವಾಗಿ ನಡೆಯಲು ನಿರ್ಧಿಷ್ಠ ಗುರಿ, ಉದ್ದೇಶದೊಂದಿಗೆ ಪಾರದರ್ಶಕ ವ್ಯವಸ್ಥೆ ಇರಬೇಕು. ಪರಿಣಾಮಕಾರಿಯಾಗಿ ಸಂಸ್ಥೆ ನಡೆಯಲು ಲೆಕ್ಕಪತ್ರ ಸರಿಯಾಗಿರಬೇಕು. ಆಗ ಮಾತ್ರವೇ ಸಕಾಲದಲ್ಲಿ ಕೆಲಸ ಕಾರ್ಯಗಳು ನಡೆದು ಸದಸ್ಯರಿಗೆ ನ್ಯಾಯ ಸಿಗುತ್ತದೆ. ಅಂತೆಯೇ ಸಂಘ ಬಲಿಷ್ಠವಾಗುತ್ತದೆ. ಶಿಕ್ಷಣ-ತರಬೇತಿ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ತೊಡಗಿಸಿಕೊಳ್ಳಲು ಕರೆ ನೀಡಿ ಕೊಡಗು ಕೇವಲ ಹಾಲಿನ ಗ್ರಾಹಕ ಮಾತ್ರವಾಗದೆ ಉತ್ಪಾದಕ ಮತ್ತು ಸರಬರಾಜು ಜಿಲ್ಲೆಯಾಗಿ ಮಾರ್ಪಾಡಾಗಬೇಕೆಂದು ಆಶಿಸಿದರು.
ವೇದಿಕೆಯಲ್ಲಿ ಯೂನಿಯನ್ ನಿರ್ದೇಶಕ ಎನ್.ಎ.ರವಿ ಬಸಪ್ಪ, ಪಿ.ಬಿ. ಯತೀಶ್ ಹಾಜರಿದ್ದರು.
ಲೆಕ್ಕಪತ್ರ ನಿರ್ವಹಣೆ ಬಗ್ಗೆ ಸಹಕಾರ ಸಂಘಗಳ ನಿವೃತ್ತ ಹಿರಿಯ ಲೆಕ್ಕಪರಿಶೋಧಕರಾದ ಡಿ.ಎನ್. ಚಂದ್ರಶೇಖರ್, ಸಹಕಾರ ಕಾಯ್ದೆ-ಕಾನೂನು ಕುರಿತು ಸಹಕಾರ ಅಭಿವೃದ್ಧಿ ಅಧಿಕಾರಿ ಬಿ.ಕೆ. ವಿಜಯೇಂದ್ರ, ಹಾಲಿನ ಶೇಖರಣೆ-ಸಂಗ್ರಹಣೆ ಕುರಿತು ವಿಸ್ತರಣಾಧಿಕಾರಿ ಬಿ.ವಿ. ವೀಣಾ ಉಪನ್ಯಾಸ ನೀಡಿದರು.
ಕೆ.ಟಿ. ಶ್ಯಾಮಲಾ ಪ್ರಾರ್ಥಿಸಿದರು. ಯೂನಿಯನ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ ವಂದಿಸಿದರು. ವ್ಯವಸ್ಥಾಪಕಿ ಆರ್. ಮಂಜುಳ, ಕೆ.ಎಸ್. ಸುರೇಶ್ ಕಾರ್ಯಕ್ರಮ ನಿರ್ವಹಣೆಗೆ ಸಹಕರಿಸಿದರು.









