ಮಡಿಕೇರಿ ಅ.13 : ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅನುಮೋದನೆಗೊಂಡು, ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಗೊಂಡ ಕಾಮಗಾರಿಗಳನ್ನೆ ನೂತನ ಕಾಮಗಾರಿಗಳೆಂದು ತಿಳಿಸಿ, ಜನರ ಹಾದಿ ತಪ್ಪಿಸುವ ಪ್ರಯತ್ನವನ್ನು ಕಾಂಗ್ರೆಸ್‍ನ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ತೆನ್ನಿರ ಮೈನಾ ಮಾಡುತ್ತಿದ್ದಾರೆ ಎಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ತಳೂರು ಕಿಶೋರ್ ಕುಮಾರ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ತೆನ್ನಿರ ಮೈನಾ ಅವರು ಶಾಸಕ ಎ.ಎಸ್.ಪೊನ್ನಣ್ಣ ಅವರನ್ನು ಭೇಟಿಯಾಗಿ, ತಾಳತ್‍ಮನೆ-ಮೇಕೇರಿ-ಬಿಳಿಗೇರಿ-ಅರ್ವತ್ತೊಕ್ಲು-ಬೆಟ್ಟಗೇರಿ ರಸ್ತೆಯನ್ನು ಜಿಲ್ಲಾ ರಸ್ತೆಯನ್ನಾಗಿ ಮೇಲ್ದರ್ಜೆಗೇರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಸುಳ್ಳು ಹೇಳಿಕೆಯನ್ನು ನೀಡಿದ್ದಾರೆ. ಈ ರಸ್ತೆ ಒಳಗೊಂಡಂತೆ ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ತಾಲ್ಲೂಕಿನ 355 ಕಿ.ಮೀ. ದೂರದ ಒಟ್ಟು 34 ರಸ್ತೆ ಕಾಮಗಾರಿಗಳಿಗೆ 2020 ಸೆ.1 ರಂದು ಅನುಮೋದನೆಗೊಂಡು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟವಾಗಿದೆ ಎಂದು ದಾಖಲೆ ಸಹಿತ ಮಾಹಿತಿ ನೀಡಿದರು.
ಅರ್ವತ್ತೊಕ್ಲು, ಬೆಟ್ಟಗೇರಿ, ತಾಳತ್ತ್‍ಮನೆ ವಿಭಾಗಗಳಲ್ಲಿ ಈಗಾಗಲೆ ಸಾಕಷ್ಟು ಗ್ರಾಮೀಣ ರಸ್ತೆ ಕಾಮಗಾರಿಗಳು ನಡೆದಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಮಡಿಕೇರಿ ತಾಲ್ಲೂಕಿನ 132 ಕಿ.ಮೀ., ವಿರಾಜಪೇಟೆ ತಾಲ್ಲೂಕಿನ 117.45 ಕಿ.ಮೀ. ಮತ್ತು ಸೋಮವಾರಪೇಟೆ ತಾಲ್ಲೂಕಿನ 106.20ಕಿ.ಮೀ. ರಸ್ತೆ ರಸ್ತೆ ಕಾಮಗಾರಿಗೆ ಅನುಮೋದನೆ ದೊರಕಿರುವುದಲ್ಲದೆ, ಕಾಮಗಾರಿಗಳು ನಡೆದಿದೆ. ಹೀಗಿದ್ದೂ ತೆನ್ನೀರ ಮೈನ ಅವರು, ಕಾಂಗ್ರೆಸ್‍ನ ಈ ಅವಧಿಯಲ್ಲಿ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳದೆ, ಹಳೆಯ ಕಾಮಗಾರಿಗಳನ್ನು ಹೊಸದೆಂದು ಬಿಮಬಿಸಿ ಜನರ ಹಾದಿ ತಪ್ಪಿಸುವ ಪ್ರಯತ್ನಕ್ಕೆ ಮುಂದಾಗಿದ್ದು, ಇದನ್ನು ಖಂಡಿಸುವುದಾಗಿ ಹೇಳಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಇದರೊಂದಿಗೆ ಎನ್‍ಡಿಆರ್‍ಎಫ್ ಮೂಲಕ 6.96 ಕೋಟಿ ರೂ. ಮತ್ತು ಟಾಸ್ಕ್ ಫೋರ್ಸ್‍ನಡಿ 27 ಕೊಟಿ ರೂ. ವೆಚ್ಚದ ರಸ್ತೆ ಕಾಮಗಾರಿಗಳು ನಡೆದಿರುವುದಾಗಿ ತಳೂರು ಕಿಶೋರ್ ಕುಮಾರ್ ಮಾಹಿತಿ ನೀಡಿ, ಅರ್ವತ್ತೊಕ್ಲು ಗ್ರಾಮ ವ್ಯಾಪ್ತಿಯಲ್ಲಿ ಸುಮಾರು 5 ಕೋಟಿ ವೆಚ್ಚದ ಕಾಮಗಾರಿಗಳು ನಡೆದಿದೆ. ನಡೆದಿರುವ ಕಾಮಗಾರಿಗಳನ್ನು ನಡೆದಿಲ್ಲವೆನ್ನುವುದು ಸರಿಯಲ್ಲವೆಂದರು.
ತಲಕಾವೇರಿ ಜಾತ್ರೆ ಸಮೀಪಿಸುತ್ತಿರುವ ಹಂತದಲ್ಲಿ ಕಾವೇರಿ ಕ್ಷೇತ್ರಕ್ಕೆ ತೆರಳುವ ರಸ್ತೆಯ ಬದಿಗಳಲ್ಲಿ ಸಮರ್ಪಕವಾಗಿ ಕಾಡು ಕಡಿಯುವ ಕೆಲಸವೂ ನಡೆದಿಲ್ಲ. ಕಾಟಾಚಾರಕ್ಕೆಂಬಂತೆ ಕೆಲಸ ಮಾಡಲಾಗಿದೆಯಷ್ಟೆ ಎಂದರು.
ಪ್ರಸ್ತುತ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಕಾಡಲಾರಂಭಿಸಿದ್ದು, ಇದು ಮುಂದುವರಿದರೆ ಬಿಜೆಪಿ ವತಿಯಿಂದ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಮೇಕೇರಿಯ ಬಿಜೆಪಿ ಶಕ್ತಿ ಕೇಂದ್ರದ ಕಾರ್ಯದರ್ಶಿ ಮಂಞೀರ ಅಪ್ಪಣ್ಣ ಮಾತನಾಡಿ, ಅರ್ವತ್ತೊಕ್ಲು ಗ್ರಾಮದವರೇ ಆಗಿರುವ ತೆನ್ನಿರ ಮೈನಾ ಅವರು, ಗ್ರಾಮ ವ್ಯಾಪ್ತಿಯಲ್ಲಿ ಸಾಕಷ್ಟು ಕೆಲಸ ಕಾರ್ಯಗಳು ನಡೆದಿದ್ದರು ನಡೆದಿಲ್ಲವೆಂದು ಹೇಳುವ ಮೂಲಕ ಗ್ರಾಮದ ಘನತೆಗೆ ಕುಂದು ತರುವ ಪ್ರಯತ್ನ ಮಾಡಿದ್ದಾರೆ. ಅರ್ವತ್ತೊಕ್ಲು ವಿಭಾಗದಲ್ಲಿ ಸಾಕಷ್ಟು ಗ್ರಾಮೀಣ ರಸ್ತೆಗಳು ಆಗಿರುವುದಲ್ಲದೆ, ಬಸ್ ಸಂಪರ್ಕ ವ್ಯವಸ್ಥೆಯೂ ಇರುವುದಾಗಿ ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಬೆಟ್ಟಗೇರಿ ಶಕ್ತಿ ಕೇಂದ್ರದ ಅಧ್ಯಕ್ಷ ಕಡ್ಲೇರ ವಿಜಯ ಕುಮಾರ್, ಮಡಿಕೇರಿ ಗ್ರಾಮಾಂತರ ಮುಖ್ಯ ಸಂಚಾಲಕ ಸೂರಿ ಕಾಕೇರಿ ಹಾಗೂ ಮೇಕೇರಿ ಶಕ್ತಿ ಕೇಂದ್ರದ ಅಧ್ಯಕ್ಷ ಚೊಂಡೀರ ಕಿರಣ್ ಉಪಸ್ಥಿತರಿದ್ದರು.









