ವಿರಾಜಪೇಟೆ ಅ.13 : ವಿದ್ಯಾರ್ಥಿ ಜೀವನದ ಯಶಸ್ಸಿಗೆ ವಚನ ಸಾಹಿತ್ಯದ ಅರಿವು ಅತೀ ಮುಖ್ಯ ಪಾತ್ರ ವಹಿಸುತ್ತದೆ ಎಂದು ವಿರಾಜಪೇಟೆ ವೃತ್ತ ನಿರೀಕ್ಷಕ ಶಿವರುದ್ರ ಅಭಿಪ್ರಾಯಪಟ್ಟರು.
ಕೊಡಗು ಜಿಲ್ಲಾ ವಚನ ಸಾಹಿತ್ಯ ವೇದಿಕೆ ಹಾಗೂ ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ವಿಭಾಗದ ಆಂತರಿಕ ಗುಣಮಟ್ಟ ಭರವಸಾ ಕೋಶದ ವತಿಯಿಂದ ಜಂಟಿಯಾಗಿ ಹಮ್ಮಿಕೊಂಡಿದ್ದ “ವಿದ್ಯಾರ್ಥಿಗಳೆಡೆಗೆ ವಚನಗಳ ನಡಿಗೆ'” ಚಿಂತನಾ ಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಪಠ್ಯದ ಜೊತೆಗೆ ಕನ್ನಡ ಸಾಹಿತ್ಯಕ್ಕೆ ಹೊಸ ಹೊಳಪು ನೀಡಿದ ಹನ್ನೆರಡನೇ ಶತಮಾನದ ವಚನಕಾರರ ವಚನ ಸಾಹಿತ್ಯದ ಜ್ಞಾನವನ್ನು ಮೈಗೂಡಿಸಿಕೊಂಡಲ್ಲಿ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ.
ಹಾಗೆಯೇ ಇಂದು ಜನರಲ್ಲಿರಲೇ ಬೇಕಾದ ಉತ್ತಮ ಸಂಸ್ಕಾರಗಳು ಹಾಗೂ ಆಚಾರ, ವಿಚಾರಗಳನ್ನು ಅರಿತು ಅದರಂತೆ ನಡೆಯುವಲ್ಲಿ ವಚನಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಶಿವರುದ್ರ ಹೇಳಿದರು.
ಇದೇ ಸಂದರ್ಭ ವಿದ್ಯಾರ್ಥಿಗಳ ಸ್ಮರಣ ಶಕ್ತಿ ಹಾಗೂ ವಿಷಯ ಗ್ರಹಿಕಾ ಶಕ್ತಿಯನ್ನು ವೃದ್ದಿಸಲು ಅನುಕೂಲವಾಗುವ ಮನಸ್ಸನ್ನು ಕೇಂದ್ರೀಕರಿಸುವ ಯೋಗದ ಬಗ್ಗೆ ಮಾಹಿತಿ ನೀಡಿದರು.
“ವಿದ್ಯಾರ್ಥಿಗಳೆಡೆಗೆ ವಚನ ಸಾಹಿತ್ಯದ ನಡಿಗೆ” ಕುರಿತು ಉಪನ್ಯಾಸ ನೀಡಿದ ವಿರಾಜಪೇಟೆ ತಾಲ್ಲೂಕು ಬಾಳುಗೋಡು ಏಕಲವ್ಯ ವಸತಿ ಶಾಲೆಯ ಪ್ರಾಂಶುಪಾಲ ಡಾ.ದಿಲನ್, ಹಳಗನ್ನಡದಿಂದ ಹೊಸಗನ್ನಡಕ್ಕೆ ಸರಳ ಭಾಷೆಯ ಮೂಲಕ ಜನರಿಗೆ ಅರ್ಥವಾಗುವ ರೀತಿಯಲ್ಲಿ ವಚನಗಳನ್ನು ರಚಿಸಿದ ಹನ್ನೆರಡನೇ ಶತಮಾನದ ವಚನಕಾರರ ಅಂದಿನ ಬದುಕು ವಿಶ್ಚವಿಭೂತಿಯಾಗಿದೆ.
ವಚನಗಳ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ಶ್ರೇಷ್ಠ ಸಾಹಿತ್ಯ ವನ್ನು ನೀಡಿದ ವಚನ ಸಾಹಿತ್ಯ ಪ್ರಾದೇಶಿಕತೆಯಿಂದ ಜಾಗತೀಕತೆಗೆ ತೆರೆದು ಕೊಂಡ ಅಗ್ರಸಾಹಿತ್ಯವಾಗಿದೆ.
ಸ್ವಾರ್ಥ ಹಿತವನ್ನು ಬದಿಗೊತ್ತಿ ಸಮಾಜದ ಹಿತಕ್ಕಾಗಿ ಜೀವ ಹಾಗೂ ಜೀವನ ವನ್ನು ಸವೆಸಿದ ವಚನಕಾರರು ಸೂರ್ಯ ಚಂದ್ರರು ಇರುವ ತನಕವೂ ಶ್ರೇಷ್ಠರಾಗಿಯೇ ಉಳಿಯುತ್ತಾರೆ ಎಂದು ಡಾ.ದಿಲನ್ ವ್ಯಾಖ್ಯಾನಿಸಿದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಸವರಾಜು ಮಾತನಾಡಿ, ವಿಶ್ವವನ್ನು ಬೆರಗುಗೊಳಿಸಿದ ವಚನ ಸಾಹಿತ್ಯ ಜನರ ದಿನ ನಿತ್ಯದ ಜೀವನದ ಅವಿಭಾಜ್ಯವಾದ ಅಂಗವಾದಾಗ ಮಾತ್ರ ಮಾನವ ನೆಲೆಸಿದ ಭೂಮಿ ಗಾಂಧಿ, ಬುದ್ಧ, ಬಸವ ಕಂಡ ರಾಮರಾಜ್ಯ ವಾಗುತ್ತದೆ ಎಂದರು.
ಮತ್ತೋರ್ವ ಕನ್ನಡ ಪ್ರಾಧ್ಯಾಪಕ ಡಾ.ಪ್ರಭು ಮಾತನಾಡಿ, ಸುತ್ತೂರು ಮಠದ ಪರಂಪರೆಯ ಕೆಲವು ಶರಣರು ತಮ್ಮ ಜೀವಿತದ ಕೊನೆಯ ದಿನಗಳನ್ನು ಕೊಡಗಿನಲ್ಲಿ ಕಳೆದ ಬಗ್ಗೆ ಮಾಹಿತಿ ಇದ್ದು ಇದರ ಬಗ್ಗೆ ಅಧ್ಯಯನ ವಾಗಬೇಕಿದೆ ಎಂದರು. ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಸಿ.ದಯಾನಂದ, ಕನ್ನಡ ಉಪನ್ಯಾಸಕ ಆರ್.ರಘುರಾಜ್ ಮಾತನಾಡಿದರು.
ವಚನ ಸಾಹಿತ್ಯ ವೇದಿಕೆ ಅಧ್ಯಕ್ಷ ಕೆ.ಎಸ್.ಮೂರ್ತಿ ಪ್ರಾಸ್ತಾವಿಕ ನುಡಿಗಳಾಡಿದರು. ರಘುರಾಜ್ ಸ್ವಾಗತಿಸಿದರು. ವಿದ್ಯಾರ್ಥಿ ನಾಯಕ ಅಜಿತ್ ನಿರೂಪಿಸಿದರು. ವಿದ್ಯಾರ್ಥಿಗಳಿಂದ ವಚನ ಗಾಯನ ನಡೆಯಿತು. ಡಾ.ಬಸವರಾಜು ವಂದಿಸಿದರು.
ಇದೇ ಸಂದರ್ಭ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿ ಸಾಧನೆ ತೋರಿದ ಡಾ.ದಿಲನ್ ಅವರನ್ನು ಕಾಲೇಜು ವತಿಯಿಂದ ಗೌರವಿಸಲಾಯಿತು.









