ಮಡಿಕೇರಿ ಅ.13 : ಹಿಂದುಳಿದ ವರ್ಗಗಳ ಜಾತಿ ಪಟ್ಟಿಯ ಪ್ರವರ್ಗ 3ಎ ಕ.ಸಂ.2ರಲ್ಲಿ ನಮೂದಾಗಿರುವ ಕೊಡಗರು'(Kodagaru) ಎಂಬುದರ ಬದಲಾಗಿ ಕನ್ನಡ ಆವೃತ್ತಿಯಲ್ಲಿ “ಕೊಡವ” ಎಂದು ಮತ್ತು ಆಂಗ್ಲ ಆವೃತ್ತಿಯಲ್ಲಿ ‘Kodava’ಎಂದು ಬದಲಾಯಿಸಿ ಸರಕಾರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧೀನ ಕಾರ್ಯದರ್ಶಿ ಹೇಮಲತ ಎಂ. ಅವರು ಸರಕಾರದ ನಿರ್ಧಾರದಂತೆ ಆದೇಶ ಹೊರಡಿಸಿದ್ದಾರೆ.
ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ನಂದಿನೆರವಂಡ ಯು.ನಾಚಪ್ಪ ಅವರ ನೇತೃತ್ವದ ನಿಯೋಗ ಡಾ.ಸಿ.ಎಸ್.ದ್ವಾರಕನಾಥ್ ಅವರ ನೇತೃತ್ವದ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವನ್ನು ನಿರಂತರವಾಗಿ ಭೇಟಿಯಾಗಿ “ಕೊಡಗರು” ಬದಲಿಗೆ “ಕೊಡವ” ಎಂದು ಬದಲಾಯಿಸುವಂತೆ ಮನವಿ ಸಲ್ಲಿಸಿತ್ತು. ಅಲ್ಲದೆ ಕಳೆದ 14 ವರ್ಷಗಳಿಂದ ಹೈಕೋರ್ಟ್ ನಲ್ಲಿ ನ್ಯಾಯಾಂಗ ಹೋರಾಟದ ಮೂಲಕ ಗಮನ ಸೆಳೆದು ಸಂವಿಧಾನಿಕ ಹಕ್ಕು ನೀಡಬೇಕೆಂದು ಅರ್ಜಿ ಸಲ್ಲಿಸಿತ್ತು. ಅಲ್ಲದೆ ಇತ್ತೀಚೆಗೆ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೂಡ ಭೇಟಿಯಾಗಿ ನಾಚಪ್ಪ ಚರ್ಚಿಸಿದ್ದರು.
ಸರ್ಕಾರ “ಕೊಡವ” ಎಂದು ಬದಲಾಯಿಸಿ ಆದೇಶ ಹೊರಡಿಸಿದ ಕುರಿತು ಪ್ರತಿಕ್ರಿಯೆ ನೀಡಿದ ಎನ್.ಯು.ನಾಚಪ್ಪ ಅವರು, ಇದು ಸಿಎನ್‍ಸಿ ಸಂಘಟನೆಯ ಐತಿಹಾಸಿಕ ಗೆಲುವಾಗಿದ್ದು, ಸರ್ವ ಕೊಡವರಿಗೆ ಶೈಕ್ಷಣಿಕ, ಔದ್ಯೋಗಿಕ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಅನುಕೂಲವಾಗಲಿದೆ ಎಂದರು.
ಅತ್ಯಂತ ಸೂಕ್ಷ್ಮ ಬುಡಕಟ್ಟು ಜನಾಂಗವಾಗಿರುವ “ಕೊಡವ”ರನ್ನು ಸರ್ಕಾರಿ ದಾಖಲೆಗಳಲ್ಲಿ “ಕೊಡವ” ಎಂದು ನಮೂದಿಸದೆ “ಕೊಡಗರು” ಎಂದು ಉಲ್ಲೇಖಿಸಿ ವಿಶಿಷ್ಟವಾದ “ಕೊಡವ” ಜನಾಂಗದ ಅಸ್ತಿತ್ವದ ಬಗ್ಗೆ ಸಂಶಯ ಮೂಡುವಂತೆ ಮಾಡಲಾಗಿತ್ತು. ನಿರಂತರ ಹೋರಾಟದ ಫಲವಾಗಿ ಸರ್ಕಾರ ಕೊಡವರ ಭಾವನೆಗೆ ಸ್ಪಂದಿಸಿ ಅಧಿಕೃತ ಆದೇಶ ಹೊರಡಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸಿಎನ್‍ಸಿಯು ಸಿಎಂ ಸಿದ್ದರಾಮಯ್ಯ, ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ನಮ್ಮ ಹೃದಯಂತರಾಳದ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ ಮತ್ತು ನಮ್ಮ ನ್ಯಾಯಸಮ್ಮತ ಆಶಯಗಳನ್ನು ಪರಿಹರಿಸಿದ ಡಾ.ಸಿ.ಎಸ್.ದ್ವಾರಕಾನಾಥ್ , ಕೆಎಸ್‍ಬಿಸಿ ಹಾಲಿ ಅಧ್ಯಕ್ಷ ಜಯಪ್ರಕಾಶ ಹೆಗ್ಡೆ , ರಾಜ್ಯ ಎಸ್‍ಪಿಪಿ ಬಲ್ಲಚಂಡ ಬೊಳ್ಳಿಯಪ್ಪ ಮತ್ತು ಎಚ್.ಸಿ. ನ್ಯಾಯಾಧೀಶ ಜಸ್ಟಿಸ್ ಕೃಷ್ಣ ದೀಕ್ಷ ಹಾಗೂ ಸಿಎನ್‍ಸಿ ಸ್ವಯಂಸೇವಕರು, ಬೆಂಬಲಿಗರು ಮತ್ತು ಸಹವರ್ತಿ ಸಹೋದ್ಯೋಗಿಗಳು ಕೊಡವ ನ್ಯಾಶನಲ್ ಕೌನ್ಸಿಲ್ ರೂಪಿಸಿದ ಪ್ರಧಾನ ಜನಾಂಗೀಯ ಸಮಸ್ಯೆಗಳಲ್ಲಿ ಒಂದನ್ನು ಪರಿಹರಿಸಲು ತಾಳ್ಮೆಯಿಂದ ಸಹಕರಿಸಿದ್ದಕ್ಕಾಗಿ ನಾವು ಅಭಾರಿಯಾಗಿದ್ದೇವೆ ಎಂದು ನಾಚಪ್ಪ ತಿಳಿಸಿದರು. ನಾವು ಕೊಡವರು ಇದನ್ನು ಸಂಭ್ರಮಿಸುತ್ತಿದ್ದೇವೆ. ಸಿಎನ್‍ಸಿ ಅಧಿಕೃತ ದಾಖಲೆಗಳಲ್ಲಿ ತನ್ನ ಅಸಭ್ಯವಾದ ಕೊಡಗರು ಬದಲಿಗೆ ಕೊಡವ ಶಾಸ್ತ್ರೀಯ ನಾಮಕರಣವನ್ನು ಮರುಸ್ಥಾಪಿಸಲು ಶ್ರಮಿಸಿತು. ಸಿಎನ್‍ಸಿ ಒತ್ತಾಯದ ಮತ್ತು ಆಮಂತ್ರಣದ ಮೇರೆಗೆ ಡಾ. ಸಿ.ಎಸ್.ದ್ವಾರಕಾನಾಥ್ ಆಯೋಗವನ್ನು ಮನವರಿಕೆ ಮಾಡಿದ ಹಿನ್ನೆಲೆಯಲ್ಲಿ ಮತ್ತು ಹಿಂದುಳಿದ ವರ್ಗಗಳ ನ್ಯಾಯಲಯಕ್ಕೆ ಸುದೀರ್ಘ ಪ್ರಮಾಣ ಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಡಾ.ದ್ವಾರಕನಾತ್ ಆಯೋಗವು ಕೊಡವ ಪದ ಬಳಕೆಯನ್ನು ಕಾಯ್ದೆ ಬದ್ದಗೊಳಿಸಲು ಐತಿಹಾಸಿಕ ಶಿಫಾರಸು ಮಾಡಿತು.









