ಮಡಿಕೇರಿ ಅ.21 : ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ಜನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳಲು ಕರಾವಳಿ-ಮಲೆನಾಡು ಜನಪರ ಒಕ್ಕೂಟ ರಚಿಸಲಾಗಿದ್ದು, ಅ.31 ರಂದು ಬೆಂಗಳೂರಿನಲ್ಲಿ ಸಭೆ ನಡೆಯಲಿದೆ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಮುರೋಳಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಹಾಗೂ ಮಲೆನಾಡು ಪ್ರದೇಶ ಒಳಗೊಂಡ ಚಿಕ್ಕಮಗಳೂರು, ಉಡುಪಿ, ಶಿವಮೊಗ್ಗ, ಹಾಸನ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ ಭಾಗದ ಜನರ, ಕೂಲಿ ಕಾರ್ಮಿಕರ, ಬೆಳೆಗಾರರ ಸಮಸ್ಯೆ ಬಗೆಹರಿಸಲು ಒಕ್ಕೂಟ ರಚಿಸಲಾಗಿದೆ ಎಂದರು.
ಎಲ್ಲ ಜಿಲ್ಲೆಗಳ ಗ್ರಾಪಂ ವ್ಯಾಪ್ತಿಯಲ್ಲಿ ಕನಿಷ್ಠ 200 ಕುಟುಂಬಗಳಿಗೆ ನಿವೇಶನ ಒದಗಿಸಲು ಕ್ರಮಕೈಗೊಳ್ಳಬೇಕು, ಧಾರವಾಡ, ಕಲಬುರಗಿಯಲ್ಲಿ ಹೈಕೋರ್ಟ್ ಪೀಠದಂತೆ ಮಲೆನಾಡು ಹಾಗೂ ಕರಾವಳಿ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಭಾಗದಲ್ಲಿ ಹೈಕೋರ್ಟ್ ವಿಭಾಗೀಯ ಪೀಠ ಸ್ಥಾಪಿಸಬೇಕು, ಆಟೋ, ಟ್ಯಾಕ್ಸಿ ಚಾಲಕರ ಮಂಡಳಿಯನ್ನು ರಚಿಸಿ, ಪರ್‍ಮಿಟರ್ ನಿಯಮವನ್ನು ಇಲ್ಲಿನ ಭೂ ಪ್ರದೇಶಕ್ಕೆ ಅನುಗುಣವಾಗಿ ತಾಲೂಕು ಪರಿಮಿಟ್ ನೀಡಬೇಕು, ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭ ಭೂ ಪರಿಮಿತಿ ಆಧಾರದಲ್ಲಿ ಏಳು ಜಿಲ್ಲೆಗಳನ್ನು ಪರಿಗಣಿಸಬೇಕು, ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ, ಆಸ್ಪತ್ರೆ ಸೇರಿದಂತೆ ಹಲವು ಬೇಡಿಕೆಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಕಲ್ಯಾಣ ಮಂಟಪದಲ್ಲಿ ಅ.31 ರಂದು “ಸರ್ವ ಧರ್ಮ ಸಮ ಭಾವ” ಎಂಬ ಘೋಷವಾಕ್ಯದಡಿ ಸಭೆ ನಡೆಯಲಿದ್ದು, ಸಭೆಗೆ ರೈತರು, ನಿವೃತ್ತ ಪ್ರಾಧ್ಯಾಪಕರು, ವಕೀಲರು, ಸರ್ವ ಪಕ್ಷ ಹಾಗೂ ಸಂಘಟನೆ ಪ್ರಜ್ಞಾವಂತ ಮುಖಂಡರು ಜಿಲ್ಲೆಯ ಹಾಲಿ, ಮಾಜಿ ಶಾಸಕರು ಭಾಗವಹಿಸಲಿದ್ದು, ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಶ್ರಮಿಸಲಾಗುವುದು. ಸಭೆಯಲ್ಲಿ ಈ ಬಗ್ಗೆ ಪ್ರತಿಯೊಬ್ಬರ ಅಭಿಪ್ರಾಯ ಸಂಗ್ರಹಿಸಿ ನಂತರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಸುಧೀರ್ ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಸಂಚಾಲಕ ಅನಿಲ್ ಹೊಸಕೊಪ್ಪ, ಸಂಚಾಲಕರಾದ ಮಿಥುನ್ ಗೌಡ, ಎಸ್.ಸಿ.ಜಯಂತ್, ಮುನೀರ್ ಅಹಮ್ಮದ್ ಹಾಗೂ ಶ್ರೀ ಹರ್ಷ ಉಪಸ್ಥಿತರಿದ್ದರು.








