ಮಡಿಕೇರಿ ಅ.22 : ಕುಶಾಲನಗರದ ಕೋಟಿ ಚೆನ್ನಯ್ಯ ಬಿಲ್ಲವ ಸಮಾಜದ 2022-23ನೇ ಸಾಲಿನ ವಾರ್ಷಿಕೋತ್ಸವ ಹಾಗೂ ಶ್ರೀ ನಾರಾಯಣ ಗುರುಗಳ ಗುರು ನಮನ ಕಾರ್ಯಕ್ರಮ ಅ.29 ರಂದು ಎಪಿಸಿಎಂಎಸ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಮಾಜದ ಅಧ್ಯಕ್ಷ ಎಸ್.ಸುಧೀರ್ ತಿಳಿಸಿದ್ದಾರೆ.
ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋಬಳಿ ಸಂಘ ನೋಂದಣಿ ಯಾಗಿ 13 ವರ್ಷಗಳ ನಂತರ ಪ್ರಥಮವಾಗಿ ದೊಡ್ಡ ಮಟ್ಟದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಂದು ಬೆಳಗ್ಗೆ ಪಟ್ಟಣದ ಬೈಚನಹಳ್ಳಿ ಗ್ರಾಮದ ಶ್ರೀ ಮಾರಿಯಮ್ಮ ದೇವಾಲಯ ಬಳಿಯಿಂದ ಕೋಟಿ ಚೆನ್ನಯ್ಯರ ಹಾಗೂ ಶ್ರೀ ನಾರಾಯಣ ಗುರುಗಳ ಭಾವ ಚಿತ್ರವನ್ನು ವಾದ್ಯಗೋಷ್ಠಿ, ಭಜನಾ ತಂಡದೊಂದಿಗೆ ಸಭಾಂಗಣದವರೆಗೆ ಭವ್ಯ ಮೆರವಣಿಗೆ ನಡೆಸಲಾಗುವುದು. ಸಭಾ ಕಾರ್ಯಕ್ರಮದಲ್ಲಿ ಸಮಾಜ ಬಾಂಧವರಿಗೆ ವಿವಿಧ ಕ್ರೀಡಾಕೂಟಗಳನ್ನು ಹಮ್ಮಿಕೊಳ್ಳಲಾಗಿದೆ.
ಹೋಬಳಿ ವ್ಯಾಪ್ತಿಯಲ್ಲಿ 500 ಕ್ಕೂ ಅಧಿಕ ಮಂದಿ ಸಮುದಾಯ ಬಾಂಧವರಿದ್ದು, ಸಂಘಟನೆ ಮೂಲಕ ಸಮಾಜಕ್ಕೆ ಆರ್ಥಿಕ ಕ್ರೋಡೀಕರಣ ಮಾಡಲಾಗಿದೆ. ಹಿಂದೂ ಮುಖಂಡ ಸತ್ಯಜಿತ್ ಸುರತ್ಕಲ್, ಕುಶಾಲನಗರ ವೃತ್ತನಿರೀಕ್ಷಕ ರಾಜೇಶ್ ಕೋಟ್ಯಾನ್ ಮತ್ತಿತರರು ಅಂದಿನ ಕಾರ್ಯಕ್ರನದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಸಂಘದ ಉಪಾಧ್ಯಕ್ಷೆ ಕುಸುಮಾವತಿ ಮಾತನಾಡಿ, ಅಂದು ಸಮಾಜದ ಹಾಲಿ ಹಾಗೂ ಮಾಜಿ ಸರಕಾರಿ ನೌಕರರಿಗೆ ಸನ್ಮಾನ ಕಾರ್ಯಕ್ರಮದೊಂದಿಗೆ ಸಾಂಸ್ಕೃತಿಕ ಹಾಗೂ ಕ್ರೀಡಾಕೂಟ ಹಮ್ಮಿಕೊಳ್ಳಲಾಗಿದೆ. ಮಡಿಕೇರಿ ಕ್ಷೇತ್ರದ ಶಾಸಕ ಮಂಥರ್ ಗೌಡ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸಂಘದ ಗೌರವ ಅಧ್ಯಕ್ಷ ಗಂಗಾಧರ್, ಮಾತನಾಡಿ, ಕೋಟಿಚನ್ನಯ್ಯ ಹಾಗೂ ಶ್ರೀನಾರಾಯಣ ಗುರುಗಳ ಬಗ್ಗೆ ಸಂಕ್ಷಿಪ್ತ ವಿವರ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಬಿ.ಎಂ.ಶೀನಪ್ಪ, ಉಪ ಕಾರ್ಯದರ್ಶಿ ಅರುಣ್ ಪೂಜಾರಿ ಹಾಗೂ ಕಾರ್ಯಕ್ರಮ ಸಂಯೋಜಕ ವೇದಾವತಿ ಇದ್ದರು.










