ಮಡಿಕೇರಿ ಅ.22 : ಸಂಸಾರ ನೌಕೆಯನ್ನು ಸಮತೋಲನದಿಂದ ಮುನ್ನಡೆಸಿಕೊಂಡು ಹೋಗುವ ಮಹಿಳೆಯರ ನಿತ್ಯ ಜಂಜಡಗಳಿಗೆ ಒಂದಷ್ಟು ವಿರಾಮ ನೀಡುವ ನಿಟ್ಟಿನಲ್ಲಿ ಮಡಿಕೇರಿ ದಸರಾ ಉತ್ಸವದ ಅಂಗವಾಗಿ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಆಯೋಜಿತ ‘ಮಹಿಳಾ ದಸರಾ’ ನಾಡಿನ ವಿವಿಧೆಡೆಗಳಿಂದ ಆಗಮಿಸಿದ ಮಹಿಳೆಯರ ಸಂಗಮಕ್ಕೆ ವೇದಿಕೆಯಾಯಿತು. ವೈವಿಧ್ಯಮಯ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡ ಮಹಿಳೆಯರ ಸಂತಸ ಮೇರೆ ಮೀರಿತು.
ಮಹಿಳಾ ದಸರಾ ಕಾರ್ಯಕ್ರಮವನ್ನು ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಭಾಗದ ಮಹಿಳೆಯರಿಗೆ ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿರುವುದು ಉತ್ತಮ ಬೆಳವಣಿಗೆ. ಕುಟುಂಬವನ್ನು ನಿಭಾಯಿಸುವ ಮಹಿಳೆಯ ಮುಖದಲ್ಲಿನ ನಗು ಎಂದಿಗೂ ಮಾಸದಿರಲಿ. ದಿನನಿತ್ಯದ ಜಂಜಾಟ ಬಿಟ್ಟು ಎಲ್ಲರೂ ಒಟ್ಟಾಗಿ ಸಂಭ್ರಮಿಸುತ್ತಿರುವುದು ಖುಷಿ ಕೊಟ್ಟಿದೆ ಎಂದು ಹೇಳಿದರು.
ಮಡಿಕೇರಿ ದಸರಾ ಸಮಿತಿ ಅಧ್ಯಕ್ಷರಾದ ನಗರಸಭಾ ಅಧಕ್ಷೆ ಅನಿತಾ ಪೂವಯ್ಯ ಮಾತನಾಡಿ, ಗ್ರಾಮೀಣ ಮಹಿಳೆಯರಿಗೂ ಮಹಿಳಾ ದಸರಾ ವೇದಿಕೆಯನ್ನು ಕಲ್ಪಿಸಿಕೊಟ್ಟಿದೆ. ಇಂತಹ ಕಾರ್ಯಕ್ರಮದಲ್ಲಿ ಮಹಿಳೆಯರು ಪಾಲ್ಗೊಳ್ಳುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಗೊಳ್ಳಬೇಕು. ಮಹಿಳೆಯರು ಸಾಮಾಜಿಕ ಕ್ಷೇತ್ರ ಸೇರಿದಂತೆ ವಿಜ್ಞಾನ, ಕ್ರೀಡೆ ಹೀಗೆ ಎಲ್ಲ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಿದ್ದಾಳೆ. ಒಗ್ಗಟ್ಟಿನ ಮೂಲಕ ಯಾವುದೇ ಕ್ಷೇತ್ರದಲ್ಲಿ ಸಾಧನೆ ಮಾಡಬಹುದು ಎಂಬ ಆಶಯ ವ್ಯಕ್ತಪಡಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿರೂಪಣಾ ಅಧಿಕಾರಿ ನಟರಾಜ್ ಮಾತನಾಡಿ, ಮಹಿಳೆ ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮೂಲಕ ದಾಪುಗಾಲನ್ನು ಇಡುತ್ತಿದ್ದಾರೆ. 2000 ನೇ ಇಸವಿಯಲ್ಲಿ ಸರ್ಕಾರ ಸ್ತ್ರೀ ಶಕ್ತಿ ಸಂಘವನ್ನು ಹುಟ್ಟು ಹಾಕುವ ಮೂಲಕ ಗ್ರಾಮೀಣ ಭಾಗಗಳಲ್ಲಿ ಮಹಿಳೆ ಸಂಘಗಳ ರಚನೆಗೆ ಅನುವು ಮಾಡಿಕೊಟ್ಟಿದ್ದಲ್ಲದೆ ಮಹಿಳೆಯರ ಕೈಯಲ್ಲೂ ಆರ್ಥಿಕ ಚಟುವಟಿಕೆಗಳು ನಡೆಯುವಂತೆ ನೋಡಿಕೊಳ್ಳುವ ಮೂಲಕ ಅವರ ಸರ್ವಾಂಗೀಣ ಪ್ರಗತಿಗೆ ಶ್ರಮಿಸಿದೆ. ಇದರೊಂದಿಗೆ ಸರ್ಕಾರ ಗರ್ಭಿಣಿ ಮಹಿಳೆಯರನ್ನು ಒಳಗೊಂಡಂತೆ ಹೆಣ್ಣು ಮಕ್ಕಳಿಗೆ ವಿವಿಧ ಸೌಲಭ್ಯಗಳನ್ನು ನೀಡುವ ಮೂಲಕ ಅಗತ್ಯ ಪ್ರೋತ್ಸಾಹವನ್ನು ಒದಗಿಸಿದೆ ಎಂದು ತಿಳಿಸಿದರು.
ಪ್ರಸ್ತುತ ರಾಜ್ಯ ಸರ್ಕಾರ ಜಾರಿ ತಂದಿರುವ ಗೃಹ ಲಕ್ಷ್ಮೀ ಯೋಜನೆಯಡಿ 31 ಸಾವಿರ ಕುಟುಂಬದ ಯಜಮಾನಿಯರಿಗೆ ಸುಮಾರು ರು.25 ಕೋಟಿ ನೆರವನ್ನು ನೀಡಿದೆ ಎಂದು ತಿಳಿಸಿ ಪ್ರಗತಿಯ ಪಥದಲ್ಲಿ ಮುನ್ನಡೆಯುವ ಮಹಿಳೆಯರು, ಪುರುಷರನ್ನು ಅವರೊಂದಿಗೆ ಕರೆದೊಯ್ಯಲಿ ಎಂದು ಹಾರೈಸಿದರು.
ಸನ್ಮಾನ-ಕಾರ್ಯಕ್ರಮದಲ್ಲಿ ಮೂರ್ನಾಡು ಭಾಡಗದ ಅಂಗನವಾಡಿ ಕಾರ್ಯಕರ್ತೆ ಬಿ.ಬಿ ಜಯಂತಿ ರೈ, ಕಡಗದಾಳು ಆರೋಗ್ಯ ಕಾರ್ಯರ್ತೆ ಲೀಲಾವತಿ ಎಸ್.ಇ ಹಾಗೂ ಖಾಯಂ ಪೌರಕಾರ್ಮಿಕರಾದ ಡಿ.ಲಕ್ಷ್ಮಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ಮಡಿಕೇರಿ ದಸರಾ ಸಮಿತಿ ಖಜಾಂಚಿ ಅರುಣ್ ಶೆಟ್ಟಿ, ನಗರಸಭಾ ಮಾಜಿ ಉಪಾಧ್ಯಕ್ಷೆ ಲೀಲಾ ಶೇಷಮ್ಮ, ನಗರಸಭಾ ಮಾಜಿ ಪೌರಾಯುಕ್ತ ಬಿ.ಬಿ. ಪುಷ್ಪಾವತಿ, ಮೂಡಾ ಮಾಜಿ ಅಧ್ಯಕ್ಷೆ ಸುರಯ್ಯ ಅಬ್ರಾರ್, ನಗರಸಭಾ ಮಾಜಿ ಅಧ್ಯಕ್ಷೆ ಜುಲೇಕಾಬಿ, ವೇದಿಕೆ ಸಮಿತಿ ಅಧ್ಯಕ್ಷೆ ಕನ್ನಂಡ ಕವಿತಾ, ತಾಲೂಕು ಸ್ತ್ರೀ ಶಕ್ತಿ ಒಕ್ಕೂಟದ ಪುಷ್ಪಾ, ರಜೀನಾ ಮತ್ತಿತರರು ಹಾಜರಿದ್ದದರು.ಚಿತ್ರ ಆರ್.ಎಂ. ಪ್ರಾರ್ಥಿಸಿ, ಸಂಚಾಲಕಿ ಕುಡೆಕಲ್ ಸವಿತಾ ಸ್ವಾಗತಿಸಿ, ಅನಿತಾ ಕಾರ್ಯಕ್ರಮ ನಿರೂಪಿಸಿ, ಭಾರತೀ ರಮೇಶ್ ವಂದಿಸಿದರು.
ಮಹಿಳಾ ಸಂಭ್ರಮ- ಮಹಿಳಾ ದಸರಾ ಅಂಗವಾಗಿ ಮಹಿಳೆಯರ ನೃತ್ಯ ಪ್ರದರ್ಶನ, ಸಾಂಪ್ರದಾಯಿಕ ಉಡುಪುಗಳ ರ‍್ಯಾಂಪ್ ವಾಕ್ ಸ್ಪರ್ಧೆ ನೋಡುಗರ ಗಮನ ಸೆಳೆಯಿತಾದರೆ, ಮಧುರಂಗಿ ಹಾಕುವ ಸ್ಪರ್ಧೆ, ಓಟದ ಸ್ಪರ್ಧೆ ಸೇರಿದಂತೆ ವಿವಿಧ ಮನೋರಂಜನಾ ಕ್ರೀಡೆಗಳು ಮಹಿಳಾ ದಸರಾಕ್ಕೆ ವಿಶೇಷ ಮೆರುಗನ್ನು ನೀಡಿತು.











