ಮಡಿಕೇರಿ ಅ.31 : ನಮ್ಮ ಸಂಸ್ಕೃತಿ ಈ ಭೂಮಿಯ ಕೃಷಿಯೊಂದಿಗೆ ಬೆಸೆದುಕೊಂಡಿದೆ. ಆದರೆ ಈ ಭೂಮಿಯೊಂದಿಗೆ ಪೂರ್ವಜರು ಹಾಗೂ ಹಿರಿಯರು ಹೊಂದಿದಂತಹ ಪೂಜನೀಯ ಬಾಂಧವ್ಯವನ್ನು ನಾವು ಕೂಡ ಅನುಕರಿಸಬೇಕು ಎಂದು ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಅಭಿಪ್ರಾಯಪಟ್ಟರು.
ಟಿ.ಶೆಟ್ಟಿಗೇರಿಯ ಮೂಂದ್ ನಾಡ್ ಕೊಡವ ಸಮಾಜ ಆಶ್ರಯದಲ್ಲಿ ಸಾರ್ವಜನಿಕ ಗೌರಿ ಗಣೇಶೋತ್ಸವ ಸೇವಾ ಸಮಿತಿ, ಸಂಭ್ರಮ ಮಹಿಳಾ ಕ್ರೀಡೆ ಮತ್ತು ಸಾಂಸ್ಕೃತಿಕ ಸಂಘ, ಕೊಡವ ತಕ್ಕ್ ಎಳ್ತ್’ಕಾರಡ ಕೂಟದ ಆಶ್ರಯದಲ್ಲಿ ಟಿ- ಶೆಟ್ಟಿಗೇರಿ ಕೊಡವ ಸಮಾಜದಲ್ಲಿ ನಡೆಯುತ್ತಿರುವ 7ನೇ ವರ್ಷದ ಕಾವೇರಿ ಚಂಗ್ರಾಂದಿ ಪತ್ತಾಲೋದಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ 10ನೇ ದಿನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು
ಟಿ.ಶೆಟ್ಟಿಗೇರಿ ಕೊಡವ ಸಮಾಜ ಅಧ್ಯಕ್ಷ ಕೈಬುಲೀರ ಹರೀಶ್ ಅಪ್ಪಯ್ಯ ಅವರು ಕೊಡಗಿನ ಪಾಳು ಬಿದ್ದಿರುವ ಸಹಸ್ರಾರು ಎಕರೆ ಭತ್ತದ ಗದ್ದೆಗಳನ್ನು ಕೃಷಿ ಭೂಮಿಯಾಗಿ ಸಂರಕ್ಷಣೆ ಮಾಡಲು ಮರುಕೃಷಿ ಮಾಡಿ ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಮತ್ತು ಈ ಮೂಲಕ ಅಂತರ್ಜಲ ವೃದ್ಧಿಸುವ ಯೋಜನೆಯನ್ನು ಸರಕಾರ ಜಾರಿಗೊಳಿಸಿ ಸಹಾಯಧನವನ್ನು ನೀಡಬೇಕೆಂದು ನೀಡಿದ ಮನವಿ ಸ್ವೀಕರಿಸಿ ಪೊನ್ನಣ್ಣ ಮಾತನಾಡಿದರು.
ನಾವು ಆಟವಾಡುತ್ತಿದ್ದ ಭತ್ತದ ಗದ್ದೆಗಳಲ್ಲಿ ವಾಣಿಜ್ಯ ಕಟ್ಟಡ, ಲೇಔಟ್ ನಿರ್ಮಾಣವಾಗುತ್ತಿದೆ. ಅತಿ ಹೆಚ್ಚು ಸಂಖ್ಯೆಯಲ್ಲಿ ವಾಣಿಜ್ಯ ಉದ್ದೇಶಕ್ಕೆ ಭೂಪರಿವರ್ತನೆ ಆಗುತ್ತಿರುವ ಆತಂಕದ ಬಗ್ಗೆ ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಅವರು ಸಹ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿದ್ದಾರೆ. ಗದ್ದೆಗಳನ್ನು ಸೈಟ್ ಮಾಡಿ ಮನೆ ಕಟ್ಟಿದರೆ ಮಳೆಗಾಲದಲ್ಲಿ ಮನೆಗೆ ನೀರು ನುಗ್ಗುತ್ತವೆ. ಆಗ ಜನಪ್ರತಿನಿಧಿಗಳನ್ನು- ಸರಕಾರವನ್ನು ಜನರು ದೂಷಿಸುತ್ತಾರೆ ಎಂದು ಹೇಳಿದರು.
ಇಲ್ಲಿಯವರೆಗೆ ಕೊಡಗಿನ ಪರಿಸರವನ್ನು ನಾವು ಅನುಭವಿಸುತ್ತಾ ಬಂದಿದ್ದೇವೆ. ಇದು ನಮ್ಮ ಸ್ವಂತ ಅಲ್ಲ. ನಾವು ಕಾಪಾಡುವ ಭರವಸೆಯಿಂದ ಪೂರ್ವಜರು ಬಳುವಳಿಯಾಗಿ ನೀಡಿದ ಈ ನೆಲವನ್ನು ಹಾಳು ಮಾಡದೇ ಮುಂದಿನ ಪೀಳಿಗೆಗೂ ಹಸ್ತಾಂತರಿಸಬೇಕು ಎಂದರು.
ಹಿರಿಯರು, ಸಂಘ ಸಂಸ್ಥೆಗಳು ಈ ಬಗ್ಗೆ ಚಿಂತನೆ ಮಾಡಬೇಕು. ಕೊಡಗಿನ ಕೃಷಿ ಭೂಮಿಗೆ ಒಳಿತಾಗುವ ಒಮ್ಮತದ ನಿಲುವು ವ್ಯಕ್ತವಾದರೆ ಕೃಷಿ ಭೂಮಿಯ ಸಂರಕ್ಷಣೆಗೆ ಬದ್ಧ ಎಂದು ನುಡಿದರು.
ಕೊಡವರ ಬಗ್ಗೆ ಎಲ್ಲರಿಗೂ ಪ್ರೀತಿ ಗೌರವವಿದೆ ಇನ್ನೊಂದು ಜನಾಂಗ- ಧರ್ಮವನ್ನು ದ್ವೇಷಿಸುವ ಮನೋಭಾವ ಬೆಳೆಸಿಕೊಳ್ಳಬಾರದು. ಹಾಗೆಯೇ ಚುನಾವಣೆ ಸಮಯದಲ್ಲಿ ರಾಜಕೀಯ ಬರುತ್ತದೆ, ಆದರೆ ನಂತರ ದಿನಗಳಲ್ಲಿ ರಾಜಕೀಯ ದ್ವೇಶ ಬೆಳೆಸಿಕೊಳ್ಳದೆ ರಾಜಕೀಯ ಮನಸ್ಥಿತಿಯಿಂದ ಹೊರಬರಬೇಕು ಎಂದು ಕಿವಿಮಾತು ಹೇಳಿದರು.
ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಅವರು ಪ್ರಾಸ್ತಾವಿಕ ಮಾತನಾಡಿ, ದೇಶದಲ್ಲಿ 53 ಜನಾಂಗ ಮತ್ತು ಆ ಜನಾಂಗದ ಭಾಷೆ ಅಳಿವಿನ ಅಂಚಿನಲ್ಲಿದ್ದು, ಇದರಲ್ಲಿ ‘ಕೊಡವ’ ಸಹ ಸೇರಿರುವುದು ಆತಂಕಕಾರಿ. ಕೊಡವರು ಹಲವು ದಶಕಗಳಿಂದ ದಸರಾ, ಗೌರಿ ಗಣೇಶ ಹಬ್ಬಗಳನ್ನು ಅತ್ಯಂತ ಅದ್ದೂರಿಯಾಗಿ ನಡೆಸುತ್ತಾ ಬಂದಿದ್ದಾರೆ, ಆದರೆ ತಮ್ಮದೇ ಜನಾಂಗದ ಹಬ್ಬಗಳ ಆಚರಣೆಯಲ್ಲಿ ಆಸಕ್ತಿ ತೋರುತ್ತಿಲ್ಲ. ಆದ್ದರಿಂದ ಚಂಗ್ರಾಂದಿ ಪತ್ತಲೋದಿ ಹಬ್ಬವನ್ನು 10 ದಿನಗಳ ಕಾಲ ವಿಶಿಷ್ಟವಾಗಿ ಆಚರಿಸುವ ಮೂಲಕ ಕೊಡವ ಭಾಷೆ ಸಂಸ್ಕೃತಿಯನ್ನು ಬೆಳೆಸಿ ಉಳಿಸುವ ಉದ್ದೇಶದಿಂದ ಆಚರಣೆ ಮಾಡಲಾಗುತ್ತಿದೆ ಎಂದರು.
ಕೊಡವ ಸಮಾಜದ ಅಧ್ಯಕ್ಷ ಹರೀಶ್ ಅಪ್ಪಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದಾನಿ ಕೈಬುಲೀರ ಪಾರ್ವತಿ ಬೋಪಯ್ಯ, ಕೊಡವ ಸಮಾಜದ ಮಾಜಿ ನಿರ್ದೇಶಕ ತೀತಿರ ಧರ್ಮಜ ಉತ್ತಪ್ಪ, ರೂಟ್ಸ್ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕಿ ಕೇಚೆಟ್ಟಿರ ಮಮತಾ ಅರುಣ್, ತೀತಿರ ಮೀನಾ ಸತೀಶ್, ಸಮಾಜದ ಉಪಾಧ್ಯಕ್ಷ ಮಚ್ಚಮಾಡ ಸುಮಂತ್, ಕಾರ್ಯದರ್ಶಿ ಕೋಟ್ರಮಾಡ ಸುಮಂತ್ ಮಾದಪ್ಪ, ಖಜಾಂಚಿ ಚಂಗುಲಂಡ ಸತೀಶ್, ಸಾಂಸ್ಕೃತಿಕ ಸಮಿತಿಯ ಅಧ್ಯಕ್ಷ ಚೆಟ್ಟಂಗಡ ರವಿಸುಬ್ಬಯ್ಯ, ಕ್ರೀಡಾ ಸಮಿತಿಯ ಅಧ್ಯಕ್ಷ ತಡಿಯಂಗಡ ಶಮ್ಮಿ, ನಿರ್ದೇಶಕರುಗಳಾದ ಚಂಗುಲಂಡ ಅಶ್ವಿನಿ ಸತೀಶ್, ಆಂಡಮಾಡ ಸತೀಶ್, ಮುಕ್ಕಾಟಿರ ಸಂದೀಪ್, ತೀತಿರ ಅನಿತಾ ಸುಬ್ಬಯ್ಯ, ಬೊಳ್ಳೆರ ಅಪ್ಪುಟ ಪೊನ್ನಪ್ಪ, ಕರ್ನಂಡ ರೂಪ ದೇವಯ್ಯ, ಬಾದುಮಂಡ ವಿಷ್ಣು ಕಾರ್ಯಪ್ಪ ಹಾಜರಿದ್ದರು. ಚಂಗುಲಂಡ ಅಶ್ವಿನಿ ಸತೀಶ್ ಪ್ರಾರ್ಥಿಸಿದರು. ಮಚ್ಚಮಾಡ ಸುಮಂತ್ ಸ್ವಾಗತಿಸಿದರು. ಕೋಟ್ರಮಾಡ ಸುಮಂತ್ ಮಾದಪ್ಪ ವಂದಿಸಿದರು.
ಕಾರ್ಯಕ್ರಮದಲ್ಲಿ ಶಾಸಕ ಪೊನ್ನಣ್ಣ, ದಾನಿ ಪಾರ್ವತಿ ಬೋಪಯ್ಯ, ಸಮಾಜದ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ರವಿಸುಬ್ಬಯ್ಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಟಿ.ಶೆಟ್ಟಿಗೇರಿ ರೂಟ್ಸ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ನಾಲ್ಕು ಸಣ್ಣ ನಾಟಕ ಪ್ರದರ್ಶನ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆಯಿತು.