ಮಡಿಕೇರಿ ನ.18 : ಶಾಲೆಗಳಿಗೆ ಸಾಹಿತ್ಯವನ್ನು ಕೊಂಡೊಯ್ಯುವ ಮೂಲಕ ವಿದ್ಯಾರ್ಥಿಗಳನ್ನು ಸಾಹಿತ್ಯಾಸಕ್ತರನ್ನಾಗಿ ಮಾಡಿ ಕನ್ನಡ ಭಾಷೆಯನ್ನು ಬೆಳೆಸುವ ಕಾರ್ಯಕ್ರಮ ಪ್ರತಿಯೊಂದು ಶಾಲೆಗಳಲ್ಲಿ ವ್ಯವಸ್ಥಿತವಾಗಿ ನಡೆಯಬೇಕೆಂದು ಮಡಿಕೇರಿ ತಾಲ್ಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಬಿ.ಸಿ.ದೊಡ್ಡೇಗೌಡ ತಿಳಿಸಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಮಡಿಕೇರಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಹಾಕತ್ತೂರು ಸರ್ಕಾರಿ ಪ್ರೌಢ ಶಾಲೆಯ ಸಂಯುಕ್ತಾಶ್ರಯದಲ್ಲಿ ಹಾಕತ್ತೂರು ಪ್ರೌಢಶಾಲೆಯಲ್ಲಿ ನಡೆದ ಬಿ.ಆರ್.ಸಾಯಿನಾಥ್ ಮತ್ತು ತ್ರಿಭಾಷಾ ಸಾಹಿತಿ ಮುಲ್ಲೇಂಗಡ ದಿ.ಬೇಬಿ ಚೋಂದಮ್ಮ ಅವರ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಕೊಡಗಿನ ಮಹಿಳಾ ಸಾಹಿತ್ಯದಲ್ಲಿ ಕಥೆಗಾರ್ತಿ ಗೌರಮ್ಮ ಅವರ ಸಾಧನೆಯ ಕುರಿತು ಶ್ಲಾಘಿಸಿದ ದೊಡ್ಡೇಗೌಡರು, ನಂಜನಗೂಡು ತಿರುಮಲಾಂಭ ಕಲ್ಯಾಣಮ್ಮನವರ ಸಮಕಾಲೀನರಾಗಿ ಗೌರಮ್ಮನವರು ಬರೆದ ಪುಸ್ತಕಗಳು ಇಂದು ಓದುಗರ ಮನದಲ್ಲಿ ಅಚ್ಚಳಿಯದೆ ಉಳಿದಿದೆ ಎಂದರು.
ಹತ್ತನೇ ಶತಮಾನದ ಕವಿ ನಾಗವರ್ಮ 15ನೇ ಶತಮಾನದ ಜೈನ ಕವಿ ದೇವಪ್ಪ, ರೆ.ಫಾ.ಕಿಟೆಲ್ ಅನಂತರ ಪಂಜೆ ಮಂಗೇಶರಾಯರು, ಭಾರತೀಸುತರು , ಗೌರಮ್ಮ, ಡಿ.ಎನ್. ಕೃಷ್ಣಯ್ಯನವರು ಕೊಡಗಿನಲ್ಲಿ ಬೆಳೆಸಿದ ಕನ್ನಡ ಸಾಹಿತ್ಯ ಚಿಗುರೊಡೆದು, ಜಿಲ್ಲೆಯಲ್ಲಿ ಕನ್ನಡ ಸಾಹಿತ್ಯ ಇದೀಗ ಸಮೃದ್ಧಗೊಳ್ಳುತ್ತಿದೆ. ಕೊಡಗು ಸಸ್ಯಶ್ಯಾಮಲೆಯ ನಾಡಾಗಿದ್ದು, ಪ್ರವಾಸೋದ್ಯಮದ ಬೆಳವಣಿಗೆಯಿಂದ ಪರಿಸರದ ಮೇಲೆ ಉಂಟಾಗುತ್ತಿರುವ ಹಾನಿಯನ್ನು ತಡೆಗಟ್ಟಬೇಕಾಗಿದೆ ಎಂದು ತಿಳಿಸಿದರು.
ಸುಂದರ ಪರಿಸರದ ನಾಡಿನಲ್ಲಿ ಸಾಹಿತ್ಯ ರಚನೆಗೆ ಇಂಬು ನೀಡುವ ಕೆಲಸಗಳಾಗಬೇಕಾಗಿದೆ ಎಂದು ದೊಡ್ಡೇಗೌಡರು ಹೇಳಿದರು.
ಬಿ.ಆರ್.ಸಾಯಿನಾಥ್ ದತ್ತಿ ಉಪನ್ಯಾಸದಲ್ಲಿ ಭಾಗಿಯಾದ ಕವಯಿತ್ರಿ ಕೆ.ಜಿ.ರಮ್ಯ ಮಾತನಾಡಿ, ಸುವರ್ಣ ಕರ್ನಾಟಕ 50 ರ ಸಂಭ್ರಮದಲ್ಲಿ ಶಾಲೆಗಳಲ್ಲಿ ಕನ್ನಡ ಸಾಹಿತ್ಯದ ಕಾರ್ಯಕ್ರಮಗಳು ದತ್ತಿ ರೂಪದಲ್ಲಿ ನಡೆಯುತ್ತಿರುವುದು ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಪರಿಚಯ ಮಾಡಲು ಒಳ್ಳೆಯ ವೇದಿಕೆಯಾಗಿದೆ ಎಂದರು.
ಕವಿ ಕಾವ್ಯ ಪರಿಚಯದ ಬಗ್ಗೆ ಮಾತನಾಡಿದ ಅವರು, ಕಾವ್ಯ ನಮ್ಮ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಅನ್ಯತೆಯನ್ನು ಹೋಗಲಾಡಿಸಿ ಅನನ್ಯತೆಯಿಂದ ಕಾವ್ಯಗಳ ರಚನೆ ಆಗಬೇಕಾಗಿದೆ ಎಂದರು. ಮಾನವೀಯತೆ ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಮನುಷ್ಯತ್ವವನ್ನು ಬೆಳೆಸುವ ಜವಬ್ದಾರಿ ಕವಿಗಳ ಮೇಲಿದೆಯೆಂದು ಸಲಹೆ ನೀಡಿದರು.
ಜನಪದ ಸಾಹಿತ್ಯದಿಂದ ಕಾವ್ಯಗಳು ಆರಂಭಗೊಂಡಿದ್ದು, ಭಾವನೆಗಳಲ್ಲಿ ಆತ್ಮಸಂಚಲನ ಕಾವ್ಯ ಪ್ರಕಾರವಾಗಿದೆಯೆಂದು ರಮ್ಯ ನುಡಿದರು.
ತ್ರಿಭಾಷಾ ಸಾಹಿತಿ ದಿ.ಬೇಬಿ ಚೋಂದಮ್ಮ ಅವರು ಕನ್ನಡ, ಇಂಗ್ಲೀಷ್, ಹಿಂದಿ ಹಾಗೂ ಕೊಡವ ಭಾಷಾ ಸಾಹಿತ್ಯದಲ್ಲಿ ಪ್ರವೀಣರಾಗಿದ್ದರೆಂದು ಸಾಹಿತಿ ಗೌರಮ್ಮ ಮಾದಮ್ಮಯ್ಯ ಹೇಳಿದರು.
ಕೊಡಗಿನಲ್ಲಿ ಮಹಿಳಾ ಸಾಹಿತಿಗಳ ವಿಚಾರ ಪ್ರಸ್ತಾಪಿಸುವುದಾದಲ್ಲಿ ಕೊಡಗಿನಲ್ಲಿ ಮಹಿಳಾ ಲೇಖಕಿಯರಲ್ಲಿ ಇಪ್ಪತ್ತು ಮಂದಿ ಕೃತಿಕಾರರ ಕೃತಿಗಳಿಗೆ ಗೌರಮ್ಮ ದತ್ತಿ ಪ್ರಶಸ್ತಿ ಲಭಿಸಿರುವುದು ಮಹಿಳಾ ಸಾಹಿತಿಗಳ ಬೆಳವಣಿಗೆಗೆ ಅದ್ಭುತ ಕೊಡುಗೆಯಾಗಿದೆ ಎಂದರು.
ಜಿಲ್ಲೆಯಲ್ಲಿ ಕೃತಿಕಾರರಾಗಿ ಸಾಕಷ್ಟು ಮಹಿಳೆಯರು ತಮ್ಮ ಲೇಖನಗಳ ಮೂಲಕ ಹೊರಹೊಮ್ಮುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ದಿ.ಬೇಬಿ ಚೋಂದಮ್ಮ ಅವರ ಪುತ್ರ ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮುಲ್ಲೇಂಗಡ ಮಧೋಷ್ ಪೂವಯ್ಯ ಮಾತನಾಡಿ, ತಮ್ಮ ತಾಯಿಯವರು ಶಿಕ್ಷಕಿಯಾಗಿ, ಬಹುಭಾಷಾ ಲೇಖಕಿಯಾಗಿ ಸಾಹಿತ್ಯ ಕ್ಷೇತ್ರದಲ್ಲಿ ದೀರ್ಘಕಾಲ ದುಡಿದಿದ್ದಾರೆ. ಇವರು ನನಗೆ ಸ್ಫೂರ್ತಿಯಾಗಿದ್ದಾರೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ಪ್ರಾಥಮಿಕ ಹಂತದ ವಿದ್ಯಾರ್ಥಿಗಳಲ್ಲಿ ಕನ್ನಡದ ಆಸಕ್ತಿ ಮೂಡಿದರೆ ಮುಂದಕ್ಕೆ ಅವರುಗಳೆ ಕನ್ನಡದ ಕಟ್ಟಾಳುಗಳಾಗಿ ಭಾಷೆಯನ್ನು ಬೆಳೆಸಲು ಸಾಧ್ಯ ಎಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮದ್, ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಕನ್ನಡ ಸಾಹಿತ್ಯದ ಪುಸ್ತಕಗಳನ್ನು ಓದಬೇಕು. ದತ್ತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಸಾಹಿತ್ಯದ ತಿಳುವಳಿಕೆಯನ್ನು ಉಣಬಡಿಸಲಿವೆ ಎಂದು ಅಭಿಪ್ರಾಯಪಟ್ಟರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಹಿರಿಯ ಸಾಹಿತಿ ಶೋಭಾ ಸುಬ್ಬಯ್ಯ, ತಾಲ್ಲೂಕು ನಿಕಟಪೂರ್ವ ಅಧ್ಯಕ್ಷ ಅಂಬೆಕಲ್ ನವೀನ್, ತಾಲೂಕು ಗೌರವ ಕಾರ್ಯದರ್ಶಿ ರಿಶಿತ್ ಮಾದಯ್ಯ, ತಾಲ್ಲೂಕು ಗೌರವ ಕೋಶಾಧಿಕಾರಿ ಸಿದ್ದರಾಜು ಬೆಳ್ಳಯ್ಯ, ಶಾಲಾ ಮುಖ್ಯಫಪಾಧ್ಯಾಯರಾದ ನೀತಾಕುಮಾರಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಹೆಚ್.ಎಸ್.ಹೇಮಾವತಿ, ಕಸಾಪದ ವ್ಯವಸ್ಥಾಪಕಿ ರೇಣುಕಾ ಉಪಸ್ಥಿತರಿದ್ದರು.
ಗೌರವ ಕೋಶಾಧಿಕಾರಿ ಎಸ್.ಎಸ್.ಸಂಪತ್ ಕುಮಾರ್ ಸ್ವಾಗತಿಸಿ, ಶಿಕ್ಷಕರಾದ ಭವಾನಿ ಶಂಕರ್ ಕಾರ್ಯಕ್ರಮ ನಿರೂಪಿಸಿದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಕಡ್ಲೇರ ತುಳಸಿ ಮೋಹನ್ ವಂದಿಸಿದರು.









