ಮಡಿಕೇರಿ ಜ.4 : ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಬಲಮುರಿಯಲ್ಲಿ ಕಾವೇರಿ ನದಿಯಿಂದ ಅಕ್ರಮವಾಗಿ ಹೊರ ತೆಗೆಯಲಾಗಿದ್ದ ಮರಳು ಹಾಗೂ ಮರಳು ಗಣಿಗಾರಿಕೆಗೆ ಬಳಸಿದ್ದ 2 ಕಬ್ಬಿಣದ ತೆಪ್ಪಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಜೆ.ಸಿ.ಬಿ ಯಂತ್ರದ ಮೂಲಕ ಹೊಳೆದಂಡೆಗೆ ಹೋಗುವ ಕಚ್ಚಾ ರಸ್ತೆಗೆ ಚರಂಡಿಯನ್ನು ತೋಡುವ ಮೂಲಕ ಅಕ್ರಮ ಮರಳುಗಾರಿಕೆ ನಡೆಯದಂತೆ ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಮಂಜುನಾಥ್ ಹಾಗೂ ಸಿಬ್ಬಂದಿಗಳು ಕ್ರಮ ಕೈಗೊಂಡಿದ್ದಾರೆ. ಬಲಮುರಿಯಿಂದ 3 ಕಿ.ಮೀ. ದೂರದ ಕಚ್ಚಾ ರಸ್ತೆಯ ಮೂಲಕ ರಾತ್ರಿ ವೇಳೆ ಅಕ್ರಮ ಮರಳುಗಾರಿಕೆ ನಡೆಯುತ್ತಿತ್ತು ಎಂದು ಆರೋಪಿಸಲಾಗಿದೆ. ನಾಪೋಕ್ಲು ವ್ಯಾಪ್ತಿಯಲ್ಲಿ ನಿರಂತರವಾಗಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದು, ಜಿಲ್ಲೆಯ ಶಾಸಕರು ಈ ಬಗ್ಗೆ ಗಮನ ಹರಿಸಿ ಕಡಿವಾಣ ಹಾಕಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.