ಮಡಿಕೇರಿ, NEWS DESK ಸೆ. 16: ಮಡಿಕೇರಿ ಪಟ್ಟಣ ಸಹಕಾರ ಬ್ಯಾಂಕ್ 2025-26ನೇ ಸಾಲಿನಲ್ಲಿ 18.97 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಬಿ.ಕೆ. ಜಗದೀಶ್ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ಯಾಂಕಿನ ವಾರ್ಷಿಕ ಮಹಾಸಭೆ ಸೆ. 19ರಂದು ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ನಡೆಯಲಿದೆ ಎಂದರು.
ಬ್ಯಾಂಕ್ ಒಟ್ಟು 2,481 ಸದಸ್ಯರನ್ನು ಹೊಂದಿದ್ದು, ಒಟ್ಟು ದುಡಿಯುವ ಬಂಡವಾಳ 5,930.79 ಲಕ್ಷ ರೂ.ಗಳಾಗಿದೆ. ಪ್ರಸ್ತುತ 5,386.53 ಲಕ್ಷ ರೂ. ವಿವಿಧ ಠೇವಣಿಗಳನ್ನು ಹೊಂದಿದೆ.
ಬ್ಯಾಂಕ್ ಮೂಲಕ ಗ್ರಾಹಕ ಸದಸ್ಯರಿಗೆ 3,505.37 ಲಕ್ಷ ರೂ. ಸಾಲವನ್ನು ವಿತರಿಸಲಾಗಿದೆ. ಇದರಲ್ಲಿ 557.41 ಲಕ್ಷ ರೂ. ಜಾಮೀನು ಸಾಲವಾಗಿದ್ದರೆ, 800.33 ಲಕ್ಷ ರೂ. ಮನೆ ಆಧಾರ ಸಾಲ ಹಾಗೂ 1,631.51 ಲಕ್ಷ ರೂ. ಚಿನ್ನಾಭರಣ ಈಡಿನ ಸಾಲ ನೀಡಲಾಗಿದೆ. ಸಾಲ ವಸೂಲಾತಿಯ ಪ್ರಮಾಣ ಶೇ. 97.04ರಷ್ಟಿದೆ ಎಂದು ತಿಳಿಸಿದರು.
ಬ್ಯಾಂಕಿನ ಜಿ.ಟಿ. ರಸ್ತೆ ಶಾಖೆಯಲ್ಲಿ 116.55 ಲಕ್ಷ ರೂ. ಒಟ್ಟು ವ್ಯವಹಾರ ನಡೆದಿದ್ದು, 8.96 ಲಕ್ಷ ರೂ. ಲಾಭ ದೊರೆತಿದೆ. ಬ್ಯಾಂಕಿನ ಠೇವಣಿಗಳಿಗೆ ಗರಿಷ್ಠ ಶೇ. 7.50ರಷ್ಟು ಆಕರ್ಷಕ ಬಡ್ಡಿ ನೀಡಲಾಗುತ್ತಿದೆ. ಹಿರಿಯ ನಾಗರಿಕರಿಗೆ ಹಾಗೂ ಒಂದು ವರ್ಷ ಮತ್ತು ಅದಕ್ಕೂ ಮೇಲ್ಪಟ್ಟು ಇಡುವ ಠೇವಣಿಗಳಿಗೆ ಶೇ. 0.50ರಷ್ಟು ಹೆಚ್ಚಿನ ಬಡ್ಡಿ ನೀಡಲಾಗುತ್ತಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕಿನ ಉಪಾಧ್ಯಕ್ಷ ಬಿ.ವಿ. ರೋಷನ್, ನಿರ್ದೇಶಕರಾದ ಜಿ.ಎಂ. ಸತೀಶ್ ಪೈ, ಸಿ.ಕೆ. ಬಾಲಕೃಷ್ಣ, ಎಸ್.ಸಿ. ಸತೀಶ್ ಹಾಗೂ ಕೆ.ಆರ್. ನಾಗೇಶ್ ಉಪಸ್ಥಿತರಿದ್ದರು.







