ಸೋಮವಾರಪೇಟೆ, NEWS DESK ಸೆ.15: ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆ ಪ್ರಪಂಚದಲ್ಲೇ ಅತ್ಯುನ್ನತ ಸ್ಥಾನದಲ್ಲಿದೆ ಎಂದು ಶಾಸಕ ಡಾ.ಮಂತರ್‌ಗೌಡ ಅಭಿಪ್ರಾಯಪಟ್ಟರು.
ಪಟ್ಟಣದ ಕೊಡವ ಸಮಾಜದಲ್ಲಿ ಮಂಗಳವಾರ ನಡೆದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
“ಇಂದು ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಇಲ್ಲದಿದ್ದರೆ, ನಾವೆಲ್ಲರೂ ರಾಜಪ್ರಭುತ್ವದ ವ್ಯವಸ್ಥೆಯಲ್ಲಿ ಬದುಕಬೇಕಾಗಿತ್ತು. ಮೂಲಭೂತ ಹಕ್ಕುಗಳಿಂದಲೂ ವಂಚಿತರಾಗಬೇಕಾಗಿತ್ತು. ದೇಶದ ಸಂವಿಧಾನವು ಪ್ರಜೆಗಳಿಗೆ ಸಮಾನವಾಗಿ ಬದುಕುವ ಹಕ್ಕನ್ನು ನೀಡಿದೆ. ವ್ಯಕ್ತಿ ಸ್ವಾತಂತ್ರ್ಯದೊಂದಿಗೆ ಪ್ರಶ್ನಿಸುವ ಹಕ್ಕನ್ನೂ ನಾವೆಲ್ಲರೂ ಗಳಿಸಿಕೊಂಡಿದ್ದೇವೆ. ಮುಂದೆಯೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗದಂತೆ ಯುವ ಸಮುದಾಯ ಕಾವಲು ಕಾಯಬೇಕಿದೆ,” ಎಂದು ಹೇಳಿದರು.
ವಕೀಲರ ಸಂಘದ ಅಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್ ಮಾತನಾಡಿ, ಚುನಾವಣೆಗಳಲ್ಲಿನ ಭ್ರಷ್ಟಾಚಾರವನ್ನು ಹೋಗಲಾಡಿಸಿದಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬರುತ್ತದೆ ಎಂದು ಹೇಳಿದರು. ‘ಒಂದು ಮತ, ಒಂದು ಮೌಲ್ಯ’ ಎಂಬ ತತ್ವದಡಿ ರೂಪುಗೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ಜನರೂ ಸಕ್ರಿಯವಾಗಿ ಮತದಾನದಲ್ಲಿ ಪಾಲ್ಗೊಂಡು, ವ್ಯವಸ್ಥೆ ಬಲಿಷ್ಠವಾಗಲು ಸಹಕಾರ ನೀಡಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಕುಶಾಲನಗರ ತಾಲೂಕು ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಪ್ರಜಾಪ್ರಭುತ್ವದ ಮೌಲ್ಯಗಳು ಎಲ್ಲಾ ಜನರ ಬದುಕಿಗೆ ಉತ್ತಮ ದಾರಿದೀಪವಾಗಿವೆ. ಪ್ರಜಾಪ್ರಭುತ್ವ ವಿರೋಧಿಗಳು ಇದನ್ನು ನಾಶಪಡಿಸಲು ಹೊಂಚುಹಾಕುತ್ತಿದ್ದಾರೆ. ಈ ಸಂದರ್ಭದಲ್ಲಿ ಯುವ ಸಮುದಾಯ ಜಾಗೃತರಾಗಬೇಕು ಎಂದು ಹೇಳಿದರು.
ವೇದಿಕೆಯಲ್ಲಿ ದಲಿತ ಸಂಘರ್ಷ ಸಮಿತಿ ಹಿರಿಯ ಮುಖಂಡ ಜಯಪ್ಪ ಹಾನಗಲ್, ಗ್ಯಾರಂಟಿ ಸಮಿತಿ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಕಾಂತರಾಜು, ಸೂಡ ಅಧ್ಯಕ್ಷ ಕೆ.ಎಂ.ಆದಂ, ತಹಸೀಲ್ದಾರ್ ಕೃಷ್ಣಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದೇಗೌಡ, ಪ್ರಮುಖರಾದ ಬಿ.ಈ.ಜಯೇಂದ್ರ, ಟಿ.ಈ.ಸುರೇಶ್, ಡಿ.ಎಸ್.ನಿರ್ವಾಣಪ್ಪ, ಹೊನ್ನಪ್ಪ, ಮೊಹಿನಿ, ರುದ್ರಪ್ಪ, ಪುಟ್ಟರಾಜು, ಗುರುಸ್ವಾಮಿ ಇದ್ದರು.
ವಿದ್ಯಾರ್ಥಿಗಳಿಗೆ ಇವಿಎಂ ಮೂಲಕ ಮತದಾನದ ಬಗ್ಗೆ ಮಾಹಿತಿ ನೀಡಿ, ಮತದಾನ ಮಾಡಿಸಲಾಯಿತು.







