ಮಡಿಕೇರಿ ಜ.12 : ಕೃಷಿಕರನ್ನು ಕಾಡುತ್ತಿರುವ ಹತ್ತು ಹಲವು ಸಮಸ್ಯೆಗಳ ನಡುವೆ ಅಕಾಲಿಕ ಮಳೆ ಮತ್ತಷ್ಟು ತಲ್ಲಣಗೊಳಿಸಿದೆ. ಮುಂದಿನ ಜೀವನ ನಿರ್ವಹಣೆ ಹೇಗೆ ಎಂಬ ಪ್ರಶ್ನೆಯನ್ನು ಕೂಡ ಹುಟ್ಟು ಹಾಕಿದೆ. ಸರ್ಕಾರ ತಕ್ಷಣ ಬೆಳೆಗಾರರ ನೆರವಿಗೆ ಬರಬೇಕು ಎನ್ನುವ ಒತ್ತಾಯ ಕೃಷಿಕ ವರ್ಗದಿಂದ ಕೇಳಿ ಬಂದಿದೆ.
ಕೊಡಗು ಪತ್ರಕರ್ತರ ಸಂಘದ ಕುಶಾಲನಗರ ತಾಲ್ಲೂಕು ಘಟಕದ ವತಿಯಿಂದ ಶುಕ್ರವಾರ ಕಂಬಿಬಾಣೆಯ ಕಾಫಿ ತೋಟದಲ್ಲಿ ನಡೆದ “ಪತ್ರಕರ್ತರ ನಡಿಗೆ ಕೃಷಿಕರ ಕಡೆಗೆ” ಎಂಬ ಸಂವಾದ ಕಾರ್ಯಕ್ರಮದಲ್ಲಿ ಬೆಳೆಗಾರರು ತಮ್ಮ ಅಹವಾಲನ್ನು ತೋಡಿಕೊಂಡರು.
ಪ್ರಗತಿಪರ ಕೃಷಿಕ ಟಿ.ಕೆ.ಸಾಯಿಕುಮಾರ್ ಮಾತನಾಡಿ ಬೆಲೆಯ ಏರಿಳಿತ, ಸಾಲದ ಹೊರೆ, ಕಾರ್ಮಿಕರ ಕೊರತೆ, ಕಾಡಾನೆ ಸೇರಿದಂತೆ ವನ್ಯಜೀವಿಗಳ ಹಾವಳಿಯಿಂದ ರೈತರು ಕಂಗೆಟ್ಟು ಹೋಗಿದ್ದಾರೆ. ಅದರ ಜೊತೆಗೆ ನಮ್ಮ ಅನುಭವದಲ್ಲೇ ಇಲ್ಲದ ಜನವರಿ ತಿಂಗಳ ಅಕಾಲಿಕ ಮಳೆಯಿಂದ ಕಾಫಿ ಹಣ್ಣಾಗಿ ಕೊಯ್ಲು ಮಾಡುವ ಸಂದರ್ಭದಲ್ಲೇ ಕಾಫಿ ಹೂವನ್ನು ನೋಡುತ್ತಿದ್ದೇವೆ. ಕಾಫಿಯನ್ನು ಕೊಯ್ಲು ಮಾಡಬೇಕೋ ಅಥವಾ ಹೂವನ್ನು ರಕ್ಷಿಸಿಕೊಳ್ಳಬೇಕೋ ಎಂಬ ಅತಂತ್ರ ಪರಿಸ್ಥಿತಿ ಉದ್ಭವಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಳೆಗಾರರ ನೆರವಿಗೆ ಕೂಡಲೇ ಬರಬೇಕಿದೆ. ದೊಡ್ಡ ಉದ್ಯಮಿಗಳಿಗೆ ಸಾಲಮನ್ನಾ ಮಾಡುವ ಮತ್ತು ಯಾವುದೇ ಉದ್ಯಮಕ್ಕೆ ಕೋಟಿ ಲೆಕ್ಕದಲ್ಲಿ ಸಾಲ ನೀಡಿ ಎಲ್ಲಾ ರೀತಿಯ ಮೂಲಭೂತ ಸೌಲಭ್ಯ ಕಲ್ಪಿಸುತ್ತಿರುವ ಸರ್ಕಾರಿ ವ್ಯವಸ್ಥೆ ರೈತರನ್ನು ಕಡೆಗಣಿಸಿದೆ ಎಂದು ಆರೋಪಿಸಿದರು.
ಪ್ರಸ್ತುತ ಅಕಾಲಿಕ ಮಳೆಯ ಹಿನ್ನೆಲೆಯಲ್ಲಿ ಶೇ.40ರಷ್ಟು ನಷ್ಟ ಸಂಭವಿಸಿದ ಹಿನ್ನೆಲೆಯಲ್ಲಿ ಸಾಲದ ಬಡ್ಡಿ ಮನ್ನಾ ಮಾಡಬೇಕೆಂದು ಆಗ್ರಹಿಸಿದರು.
ನಾಕೂರು ಶಿರಂಗಾಲದ ಕೃಷಿಕ ಪಿ.ಎಂ.ಬಿಜು ಮಾತನಾಡಿ ಕಾಫಿ ತೋಟಗಳಲ್ಲಿ ಮರ ಕಪಾತು ಮಾಡಿದರೆ ಅರಣ್ಯ ಇಲಾಖೆಯವರು ಪ್ರಕರಣ ದಾಖಲಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ರೊಬಸ್ಟಾ ಕಾಫಿ ಬೆಳೆಗೆ ನೆರಳನ್ನು ತೆಗೆಯುವ ಅಗತ್ಯತೆ ಇದೆ, ನೆರಳಾದರೆ ಇಳುವರಿ ಕಡಿಮೆಯಾಗಲಿದೆ. ಬೆಳೆಗಾರರ ನೋವು ಯಾರಿಗೂ ತಿಳಿಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕೃಷಿಕರ ಸಮಸ್ಯೆ, ಕಷ್ಟನಷ್ಟಗಳ ಬಗ್ಗೆ ಮನವರಿಕೆಯಾಗಬೇಕಾದರೆ ಜಿಲ್ಲೆಯ ಶಾಸಕರು ನಮ್ಮೊಂದಿಗೆ ಸಂವಾದ ನಡೆಸಲಿ ಎಂದರು.
ಸುಂಟಿಕೊಪ್ಪ ಹೋಬಳಿಯ ಭತ್ತದ ಕೃಷಿಕ ಪಟ್ಟೆಮನೆ ಉದಯ ಕುಮಾರ್ ಮಾತನಾಡಿ ತಾನು ಮೂರು ತಳಿಯ ಭತ್ತವನ್ನು ಬೆಳೆಯುತ್ತಿದ್ದು, ಕಾಡು ಹಂದಿ, ಮುಳ್ಳು ಹಂದಿ ಮತ್ತು ನವಿಲುಗಳ ಉಪಟಳದಿಂದ ಕೈಗೆ ಬಂದ ಫಸಲು ಮನೆ ಸೇರುತ್ತಿಲ್ಲ. ಜೊತೆಗೆ ಸುಂಟಿಕೊಪ್ಪ ಪಟ್ಟಣ ವ್ಯಾಪ್ತಿಯ ಕೊಳಚೆ ನೀರು ಗದ್ದೆಗಳಿಗೆ ಬರುತ್ತಿದ್ದು, ದುರ್ವಾಸನೆಯ ನಡುವೆ ಹೇಗೆ ಭತ್ತ ಬೆಳೆಯಬೇಕೆಂದು ಅಸಮಾಧಾನ ವ್ಯಕ್ತಪಡಿಸಿದರು.
ಕೃಷಿಕರು ದೇಶದ ಬೆನ್ನೆಲುಬು ಎಂದು ಹೇಳುತ್ತಾರೆ, ಆದರೆ ಅಕಾಲಿಕ ಮಳೆಯಿಂದ ಕಷ್ಟ ನಷ್ಟ ಅನುಭವಿಸುತ್ತಿದ್ದರೂ ಕೃಷಿಕರ ನೋವು ಆಲಿಸಲು ಯಾರೊಬ್ಬರೂ ಬಂದಿಲ್ಲ ಎಂದರು.
ಗುಡ್ಡೆಹೊಸೂರಿನ ಕೃಷಿಕ ಚಂದ್ರಶೇಖರ್ ಮಾತನಾಡಿ ಐದು ಎಕರೆ ಜಾಗದಲ್ಲಿ ಭತ್ತದ ಕೃಷಿಯನ್ನು ಮಾಡುತ್ತಿದ್ದೇನೆ. ಅಕಾಲಿಕ ಮಳೆಯಿಂದ ಭತ್ತ ಹಾಗೂ ಹುಲ್ಲು ನೀರು ಪಾಲಾಗಿ ಅಪಾರ ನಷ್ಟ ಉಂಟಾಗಿದೆ. ಸಂಬಂಧಿಸಿದ ಇಲಾಖೆಯ ಯಾವುದೇ ಅಧಿಕಾರಿಗಳು ಬಂದಿಲ್ಲ. ಮಳೆಯಿಂದ ಉಂಟಾದ ನಷ್ಟಕ್ಕೆ ಎಕರೆಗೆ ಕನಿಷ್ಠ ರೂ.30 ಸಾವಿರ ಪರಿಹಾರ ನೀಡಬೇಕು. ಭತ್ತದ ಕೃಷಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಕ್ವಿಂಟಾಲ್ ಗೆ ರೂ.4 ಸಾವಿರ ನೀಡಬೇಕು ಎಂದು ಒತ್ತಾಯಿಸಿದರು.
ಕುಶಾಲನಗರ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ವಿಘ್ನೇಶ್ ಭೂತನಕಾಡು ಮಾತನಾಡಿ ಅಕಾಲಿಕ ಮಳೆಯ ಹಿನ್ನೆಲೆಯಲ್ಲಿ ಕೃಷಿ ಪ್ರಧಾನ ಜಿಲ್ಲೆಯಾಗಿರುವ ಕೊಡಗಿನಲ್ಲಿ ಕಾಫಿ ಮತ್ತು ಭತ್ತಕ್ಕೆ ಹಾನಿಯಾಗಿದೆ. ಈ ಬಗ್ಗೆ ಪ್ರತ್ಯಕ್ಷ ಮಾಹಿತಿಯನ್ನು ಸಂಬಂಧಿಸಿದವರಿಗೆ ತಲುಪಿಸುವ ಉದ್ದೇಶದಿಂದ ಈ ಸಂವಾದ ಆಯೋಜಿಸಲಾಗಿದೆ ಎಂದು ಹೇಳಿದರು.
ಸಂವಾದದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಬಿ.ವಿನ್ಸೆಂಟ್, ಉಪಾಧ್ಯಕ್ಷ ಬಿ.ಸಿ.ದಿನೇಶ್, ಖಜಾಂಚಿ ವಿ.ಸಿ.ನವೀನ್, ನಿರ್ದೇಶಕರಾದ ಶಿವಣ್ಣ, ಗುಡ್ಡೆಮನೆ ವಿಶುಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.
ಅಕಾಲಿಕ ಮಳೆಯಿಂದ ಉಂಟಾದ ನಷ್ಟ, ಅರಳಿರುವ ಕಾಫಿ ಹೂವು, ನೆಲಕಚ್ಚಿರುವ ಕಾಫಿ, ಆನೆ ಹಾವಳಿಯಿಂದಾಗಿರುವ ನಷ್ಟದ ಬಗ್ಗೆ ಪತ್ರಕರ್ತರು ಮಾಹಿತಿ ಪಡೆದರು.
::: ಆತ್ಮರಕ್ಷಣೆಗೆ ಕೋವಿ ಕೊಡಿ :::
ಬೆಳೆಗಾರ ಪಿ.ಎಂ.ಬಿಜು ಮಾತನಾಡಿ ವನ್ಯಜೀವಿಗಳಿಂದ ರಕ್ಷಣೆ ಪಡೆಯುವ ನಿಟ್ಟಿನಲ್ಲಿ ಬಂದೂಕು ಪರವಾನಿಗೆಯನ್ನು ಹೊಂದಲು ಅರ್ಜಿ ಸಲ್ಲಿಸಿದರೆ ಪೊಲೀಸ್ ವತಿಯಿಂದ ನಿರಾಪೇಕ್ಷಣಾ ಪತ್ರ ಸಿಗುತ್ತಿಲ್ಲ. ನಾನಾ ರೀತಿಯ ದಾಖಲೆಗಳನ್ನು ಕೇಳುತ್ತಾ ಸತಾಯಿಸುತ್ತಿದ್ದಾರೆ. ಇನ್ನಾದರು ಬೆಳೆಗಾರರಿಗೆ ಆತ್ಮರಕ್ಷಣೆಗಾಗಿ ಕೋವಿ ಹೊಂದಲು ಅವಕಾಶ ನೀಡಬೇಕೆಂದು ಆಗ್ರಹಿಸಿದರು.
::: ಪ್ರಾಣಿ ತಿಂದು ಉಳಿಸಿದ್ದು ನಮಗೆ :::
ಸಂವಾದದಲ್ಲಿ ಮಾತನಾಡಿದ ಬೆಳೆಗಾರರು, ಆನೆ, ಮಂಗ, ನವಿಲು, ಕಾಡುಹಂದಿ, ಕಾಡುಕೋಣ, ಪಕ್ಷಿಗಳು ತಿಂದು ಅವುಗಳು ಉಳಿಸಿದ ಫಸಲಿನಲ್ಲಿ ನಾವು ಜೀವನ ನಿರ್ವಹಣೆ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಅರಣ್ಯ ಇಲಾಖೆ ಆನೆಗಳನ್ನು ಕಾಡಿಗಟ್ಟುವ ನಾಟಕೀಯ ವಿದ್ಯಾಮಾನ ನಡೆಸುತ್ತಿದ್ದು, ಇದರಿಂದ ಯಾವುದೇ ಪ್ರಯೋಜನ ಇಲ್ಲವೆಂದು ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿದರು.