ಮಡಿಕೇರಿ ಫೆ.3 NEWS DESK : ಆಮ್ ಆದ್ಮಿ ಪಾರ್ಟಿಯ ನಡೆ ಹಳ್ಳಿಯ ಕಡೆ ಅಭಿಯಾನದಡಿ ಪಕ್ಷದ ಕೊಡಗು ಜಿಲ್ಲಾ ಘಟಕ ಕುಶಾಲನಗರ ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಭೇಟಿ ನೀಡಿತು. ಕಲುಷಿತಗೊಳ್ಳುತ್ತಿರುವ ಕಾವೇರಿ ನದಿ, ಅಶುಚಿತ್ವದ ವಾತಾವರಣ, ಕುಡಿಯುವ ನೀರಿನ ಕೊರತೆ ಸೇರಿದಂತೆ ಮೂಲಭೂತ ಸಮಸ್ಯೆಗಳ ವಿರುದ್ಧ ಹೋರಾಟ ರೂಪಿಸುವುದಾಗಿ ಪಕ್ಷದ ಜಿಲ್ಲಾಧ್ಯಕ್ಷ ಭೋಜಣ್ಣ ಸೋಮಯ್ಯ ಅವರು ಇದೇ ಸಂದರ್ಭ ಎಚ್ಚರಿಕೆ ನೀಡಿದ್ದಾರೆ.
ಕುಶಾಲನಗರ ತಾಲ್ಲೂಕಿನ ವಾಲ್ನೂರು, ತ್ಯಾಗತ್ತೂರು, ನಂಜರಾಯಪಟ್ಟಣ, ಗುಡ್ಡೆಹೊಸೂರು, ಶಿರಾಂಗಾಲ, ಹೆಬ್ಬಾಲೆ, ತೊರೆನೂರು, ಕೂಡ ಮಂಗಳೂರು, ಕೂಡಿಗೆ, ಸುಂಟಿಕೊಪ್ಪ, ಕೆದಕಲ್ಲು, ನೆಲ್ಲಿಹುದಿಕೇರಿ, ಕೊಡಗರಹಳ್ಳಿ ಮತ್ತು ಚೆಟ್ಟಳ್ಳಿ ಗ್ರಾಮಗಳಿಗೆ ಆಪ್ ನಿಯೋಗ ಭೇಟಿ ನೀಡಿ ಸಮಸ್ಯೆಗಳ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆಯಿತು. ಸರ್ಕಾರಿ ಶಾಲೆ ಹಾಗೂ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಕಟ್ಟಡದ ಸ್ಥಿತಿಗತಿ, ವಿದ್ಯಾರ್ಥಿಗಳ ಸಂಖ್ಯೆ, ಶಿಕ್ಷಕರ ಕೊರತೆ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಲಭ್ಯಗಳ ಕುರಿತು ಸ್ಥಳೀಯರೊಂದಿಗೆ ಚರ್ಚಿಸಿತು.
ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ ಯುಜಿಡಿ ಕಾಮಗಾರಿ ಪೂರ್ಣಗೊಳ್ಳದೆ ಇರುವುದರಿಂದ ತ್ಯಾಜ್ಯ ಕಾವೇರಿ ನದಿ ಸೇರುತ್ತಿದೆ. ಈ ಭಾಗದಲ್ಲಿ ಕುಡಿಯುವ ನೀರು ಕಲುಷಿತಗೊಂಡು ಸೇವನೆಗೆ ಯೋಗ್ಯ ಇಲ್ಲದಂತೆ ಕಂಡು ಬಂದಿದೆ ಎಂದು ಭೋಜಣ್ಣ ಸೋಮಯ್ಯ ಬೇಸರ ವ್ಯಕ್ತಪಡಿಸಿದರು.
ಸುಂಟಿಕೊಪ್ಪ ಗ್ರಾ.ಪಂ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮತ್ತು ವಿಂಗಡಣೆ ದೊಡ್ಡ ಸಮಸ್ಯೆಯಾಗಿದ್ದು, ಇಡೀ ಪಟ್ಟಣ ಕಸದ ರಾಶಿಯಿಂದ ತುಂಬಿದೆ. ಇಲ್ಲಿನ ಕಸ ವಿಲೇವಾರಿ ವಾಹನ ಕೆಟ್ಟು ಹೋಗಿದೆ, ಬಹಳ ದಿನಗಳಿಂದ ಕಸ ವಿಲೇವಾರಿಯಾಗದೆ ಇರುವುದು ಸಾರ್ವಜನಿಕರ ದೂರಿನಿಂದ ತಿಳಿದು ಬಂದಿದೆ. ಕೆದಕಲ್ಲು ಮತ್ತು ಮೋದೂರು ಗ್ರಾಮದ ಶಾಲೆ ಮುಚ್ಚುವ ಹಂತದಲ್ಲಿದೆ, ಶಾಲೆಯಲ್ಲಿ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಿದ್ದಾರೆ. ಚೆಟ್ಟಳ್ಳಿಯ ಕೂಡ್ಲೂರುವಿನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ಈಗಾಗಲೇ ಮುಚ್ಚಿದೆ. ಈ ಭಾಗದ ರಸ್ತೆ ಹದಗೆಟ್ಟು ಸಂಚಾರ ಮಾಡಲು ಯೋಗ್ಯವಾಗಿಲ್ಲ. ಕೂಡ ಮಂಗಳೂರು ಮತ್ತು ಗುಡ್ಡೆ ಹೊಸೂರು ಹಾಡಿಗಳಲ್ಲಿ ಮೂಲಭೂತ ಸೌಕರ್ಯವಿಲ್ಲದೆ ಅಲ್ಲಿನ ಜನರು ಟೆಂಟ್ ಗಳಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಶಿರಾಂಗಾಲ, ಹೆಬ್ಬಾಲೆ ಹಾಗೂ ತೂರೆನೂರು ವ್ಯಾಪ್ತಿಯಲ್ಲಿ ಇರುವ ಪಶು ಚಿಕಿತ್ಸಾಲಯದಲ್ಲಿ ಸಿಬ್ಬಂದಿಗಳ ಕೊರತೆ ಇದೆ. ಪಶುಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಸಿಗುತ್ತಿಲ್ಲ, ರೈತರು ದೂರದ ಮಡಿಕೇರಿಗೆ ಹೋಗುವ ಪರಿಸ್ಥಿತಿ ಬಂದಿದೆ. ಕುಶಾಲನಗರ ತಾಲ್ಲೂಕಿನ ಬಹಳಷ್ಟು ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಸಿಬ್ಬಂದಿಗಳ ಕೊರತೆಯಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತಿಲ್ಲ. ನೆಲ್ಲಿಹುದಿಕೇರಿಯಲ್ಲಿ ಕುಡಿಯುವ ನೀರು ಹಾಗೂ ಕಸ ವಿಲೇವಾರಿ ಸಮಸ್ಯೆ ಇದೆ. ಅಭ್ಯತ್ ಮಂಗಲ, ವಾಲ್ನೂರು ಭಾಗಗಳಲ್ಲಿ ಕಾಡಾನೆ ಉಪಟಳ ಮಿತಿ ಮೀರಿದೆ. ಈ ಭಾಗದಲ್ಲಿ ದೂರವಾಣಿ ನೆಟ್ ವರ್ಕ್ ಸಮಸ್ಯೆ ಇದೆ ಭೋಜಣ್ಣ ಸೋಮಯ್ಯ ಅವರು ಗಮನ ಸೆಳೆದರು.
ಪ್ರತಿ ಗ್ರಾಮಗಳಿಗೆ ತೆರಳಿದಾಗಲೂ ಗ್ರಾಮಸ್ಥರು ಸಮಸ್ಯೆಗಳ ಬಗ್ಗೆ ಮನಬಿಚ್ಚಿ ಮಾತನಾಡುತ್ತಿದ್ದಾರೆ. ನಿರ್ಲಕ್ಷ್ಯ ವಹಿಸುತ್ತಿರುವ ಆಡಳಿತ ವ್ಯವಸ್ಥೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಆದ್ದರಿಂದ ಜನರ ಪರವಾಗಿ ಆಮ್ ಆದ್ಮಿ ಪಾರ್ಟಿ ಜಿಲ್ಲೆಯಲ್ಲಿ ಹೋರಾಟವನ್ನು ರೂಪಿಸಲಿದೆ ಎಂದು ತಿಳಿಸಿದರು.