ಮಡಿಕೇರಿ ಫೆ.8 NEWS DESK : ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ಮತ್ತು ಹೊಸ ಸಂಸತ್ ನಲ್ಲಿ ಪ್ರತ್ಯೇಕ ಕೊಡವ ಪ್ರಾತಿನಿಧ್ಯ ನೀಡಬೇಕೆಂದು ಒತ್ತಾಯಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಫೆ.9 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಲು ನಿರ್ಧರಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, ಅತ್ಯಂತ ಸೂಕ್ಷ್ಮ ಆದಿಮ ಸಂಜಾತ ಕೊಡವ ಬುಡಕಟ್ಟು ಜನಾಂಗಕ್ಕೆ ಸಂವಿಧಾನದ ಅನುಚ್ಛೇದ 244 ಆರ್/ಡಬ್ಲ್ಯೂ 6ನೇ ಮತ್ತು 8ನೇ ಶೆಡ್ಯೂಲ್ ಅಡಿಯಲ್ಲಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆ ನೀಡಬೇಕು ಹಾಗೂ ಸಿಕ್ಕಿಂ ರಾಜ್ಯದ ಬೌದ್ಧ ಸನ್ಯಾಸಿ ಸಮುದಾಯದ ಸಂಘ ಕ್ಷೇತ್ರದ ಮಾದರಿಯಲ್ಲಿ ಹೊಸ ಸಂಸತ್ ನಲ್ಲಿ ಪ್ರತ್ಯೇಕ ಕೊಡವ ಪ್ರಾತಿನಿಧ್ಯ ಕಲ್ಪಿಸಬೇಕೆನ್ನುವ ಬೇಡಿಕೆಯ ಮನವಿ ಪತ್ರವನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಮಡಿಕೇರಿಯ ಜಿಲ್ಲಾಧಿಕಾರಿಗಳ ಕಚೇರಿ ಎದುರಿನಲ್ಲಿ ಬೆಳಗ್ಗೆ 10.30 ಗಂಟೆಗೆ ಶಾಂತಿಯುತ ಧರಣಿ ಸತ್ಯಾಗ್ರಹ ನಡೆಸಿ ಹಕ್ಕೊತ್ತಾಯ ಮಂಡಿಸಲಾಗುವುದು ಎಂದು ಹೇಳಿದ್ದಾರೆ.









