ಮಡಿಕೇರಿ ಮಾ.19 NEWS DESK : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಶಿಕ್ಷಣ ಅತ್ಯಗತ್ಯವಾಗಿದ್ದು, ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಧೈರ್ಯದಿಂದ ಎದುರಿಸಬೇಕೆಂದು ಕಿರಿಕೊಡ್ಲಿ ಮಠಾಧೀಶರರಾದ ಸದಾಶಿವ ಸ್ವಾಮೀಜಿ ಕರೆ ನೀಡಿದ್ದಾರೆ.
ಸೋಮವಾರಪೇಟೆ ಪಟ್ಟಣದ ಎಸ್.ಜೆ.ಎಂ ಪ್ರೌಢಶಾಲೆ ಆವರಣದಲ್ಲಿ ನಡೆದ 10ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಹಾಗೂ ಪರೀಕ್ಷಾ ಪರಿಕರ ವಿತರಣಾ ಸಮಾರಂಭದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
ಸ್ಪರ್ಧಾತ್ಮಕ ಯುಗದಲ್ಲಿ ನಾವು ಎಷ್ಟು ಕಲಿತರು ಸಾಲದು, ಪಠ್ಯವನ್ನು ಗಮನವಿಟ್ಟು ಕೇಳಬೇಕು, ಏಕಾಗ್ರತೆಯಿಂದ ಓದಬೇಕು. ಪರೀಕ್ಷೆಯ ಬಗ್ಗೆ ಎಂದಿಗೂ ಭಯ ಪಡಬಾರದು, ಹತ್ತು ತಿಂಗಳಲ್ಲಿ ನೀವು ಕಲಿತದ್ದನ್ನು ನೀವೇ ಬರೆಯುತ್ತೀರಿ. ಮೊದಲು ಪ್ರಶ್ನೆ ಪತ್ರಿಕೆಯನ್ನು ಗಮನವಿಟ್ಟು ಓದಿರಿ, ಸುಲಭದ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ ಎಂದು ಸಲಹೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಭಾಗ್ಯಮ್ಮ ಅವರು ವಿದ್ಯಾರ್ಥಿಗಳು ಸಹನೆಯಿಂದ ಪರೀಕ್ಷೆ ಬರೆಯುವ ಮನೋಸ್ಥಿತಿ ಬೆಳೆಸಿಕೊಳ್ಳಬೇಕು, ಭಯ ಪಡುವ ಅಗತ್ಯವಿಲ್ಲ. ಪರೀಕ್ಷೆಯ ಸಮಯ ಮೊದಲ 15 ನಿಮಿಷ ಪ್ರಶ್ನೆಗಳನ್ನು ಓದಲು ಮೀಸಲಾಗಿರುತ್ತದೆ. ಆದ್ದರಿಂದ ಮೊದಲು ಪ್ರಶ್ನೆಗಳನ್ನು ಅರ್ಥಮಾಡಿಕೊಳ್ಳಿ ಎಂದರು.
ಸ್ಥಳೀಯ ವಿರಕ್ತಮಠದ ಶ್ರೀನಿಶ್ಚಲ ನಿರಂಜನ ದೇಶಿಕೇಂದ್ರ ಸ್ವಾಮೀಜಿ ಕಾರ್ಯಕ್ರಮದ ನೇತೃತ್ವ ವಹಿಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪರಿಕರಗಳನ್ನು ವಿತರಿಸಿದರು.
ಪಟ್ಟಣ ಪಂಚಾಯಿತಿ ಸದಸ್ಯ ಮೃತ್ಯುಂಜಯ, ಮಾಜಿ ಸದಸ್ಯ ಎಸ್.ಮಹೇಶ್, ಮುಖ್ಯೋಪಾಧ್ಯಾಯರಾದ ಮಾರಪ್ಪ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.