ಮಡಿಕೇರಿ ಮಾ.19 NEWS DESK : ಶುಕ್ರವಾರದಂದು ನಡೆಯುವ ಲೋಕಸಭಾ ಚುನಾವಣೆಯ ದಿನಾಂಕವನ್ನು ಬದಲಾಯಿಸಬೇಕೆಂದು ಕರ್ನಾಟಕ ಮುಸ್ಲಿಂ ಜಮಾಅತ್ ನ ಕೊಡಗು ಜಿಲ್ಲಾ ಸಮಿತಿ ಮನವಿ ಮಾಡಿದೆ.
ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಮೂಲಕ ಕೇಂದ್ರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದ ಸಮಿತಿಯ ಪ್ರಮುಖರು, ಶುಕ್ರವಾರದ ಬದಲು ಬೇರೆ ದಿನಗಳಲ್ಲಿ ಚುನಾವಣೆ ನಡೆಸಬೇಕೆಂದು ಕೋರಿದರು.
ಕೊಡಗಿನ ಮುಸ್ಲಿಂ ಸಮುದಾಯ ಲೋಕಸಭಾ ಚುನಾವಣೆಯ ಬಗ್ಗೆ ಮಹತ್ವದ ಕಾಳಜಿಯನ್ನು ಹೊಂದಿದೆ. ಆದರೆ ಶುಕ್ರವಾರದಂದು ಮುಸ್ಲಿಂ ಸಮುದಾಯಕ್ಕೆ ಅತ್ಯಂತ ಪವಿತ್ರವಾದ ದಿನವಾಗಿದೆ. ಚುನಾವಣೆ ನಡೆಯುವ ಏ.19 ಮತ್ತು 26 ರ ಶುಕ್ರವಾರದಂದು ಮುಸ್ಲಿಂ ಸಮುದಾಯದವರು ಜುಮುಆದಲ್ಲಿ (ಶುಕ್ರವಾರ ಸಭೆ) ತೊಡಗುತ್ತಾರೆ. ಇದರಿಂದ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಹಾಗೂ ಬೂತ್ ಏಜೆಂಟರಿಗೆ ಸವಾಲು ಎದುರಾಗಲಿದೆ. ಆದ್ದರಿಂದ, ಲೋಕಸಭಾ ಚುನಾವಣೆಯ ದಿನಾಂಕವನ್ನು ಶುಕ್ರವಾರ ಹೊರತುಪಡಿಸಿ ಇತರ ಯಾವುದೇ ದಿನಕ್ಕೆ ಬದಲಾಯಿಸುವಂತೆ ಚುನಾವಣಾ ಆಯೋಗದ ಬಳಿ ಮನವಿ ಮಾಡುತ್ತಿರುವುದಾಗಿ ತಿಳಿಸಿದರು.
ಮನವಿ ಪತ್ರ ಸಲ್ಲಿಸುವ ಸಂದರ್ಭ ಸಮಿತಿಯ ಅಧ್ಯಕ್ಷ ಲತೀಫ್ ಸುಂಟಿಕೊಪ್ಪ, ಕಾರ್ಯದರ್ಶಿ ಎ.ಎ.ಮೊಹಮ್ಮದ್ ಹಾಜಿ, ರಾಜ್ಯ ಸಮಿತಿ ಸದಸ್ಯರಾದ ಎಂ.ಬಿ.ಹಮೀದ್, ಕೊಡಗು ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷ ಝೈನುಲ್ ಅಬಿದ್, ಪ್ರಮುಖರಾದ ಎಂ.ಎ.ಮನ್ಸೂರ್ ಹಾಜರಿದ್ದರು.









