ಮಡಿಕೇರಿ ಮಾ.21 NEWS DESK : ಮಾನವೀಯತೆ ಮತ್ತು ಗ್ರಹದ ಉಳಿವಿಗಾಗಿ ಕಾಡುಗಳು ಮತ್ತು ಮರಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮಾರ್ಚ್ 21 ರಂದು ವಿಶ್ವ ಅರಣ್ಯ ದಿನ ದಿನ ಎಂದೂ ಕರೆಯುವ ಅಂತರಾಷ್ಟ್ರೀಯ ಅರಣ್ಯ ದಿನವನ್ನು ಆಚರಿಸಲಾಗುತ್ತಿದೆ.
ಸಂಯುಕ್ತ ರಾಷ್ಟಗಳ ಸಾಮಾನ್ಯ ಸಭೆಯಲ್ಲಿ 2012 ರಲ್ಲಿ ಕೈಗೊಂಡ ತೀರ್ಮಾನದಂತೆ ಅಂತರಾಷ್ಟ್ರೀಯ ಅರಣ್ಯ ದಿನವನ್ನು ಸ್ಥಾಪಿಸಲಾಯಿತು. ಈ ದಿನವು ಅರಣ್ಯಗಳ ಮಹತ್ವ, ಪ್ರಾಮುಖ್ಯತೆ ಮತ್ತು ಜಾಗೃತಿ ಮೂಡಿಸಲು ಹಾಗೂ ಅರಣ್ಯಗಳ ಸುಸ್ಥಿರ ನಿರ್ವಹಣೆ, ಸಂರಕ್ಷಣೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.
ನಮ್ಮ ದೈನಂದಿನ ಜೀವನದಲ್ಲಿ ಅರಣ್ಯ ಸಂಪನ್ಮೂಲದ ಪಾತ್ರ ಮತ್ತು ಅದರ ವಿನಾಶದಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಈ ದಿನವನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.
ಭೂ ಜಗತ್ತಿನ ಎಲ್ಲಾ ಜೀವ ಸಂಕುಲಗಳಿಗೆ ಭೂಮಿ ಮಾತ್ರ ಆಸರೆಯಾಗಿದೆ. ವಿಶ್ವದಲ್ಲಿ ಬಹುತೇಕ ನದಿಗಳು ಹಾಗೂ ನೀರಿನ ಸೆಲೆಗಳ ಉಗಮ ಸ್ಥಾನ ಅರಣ್ಯಗಳೇ ಆಗಿವೆ. ಗಿಡಮರಗಳು ನಮ್ಮ ಅಸ್ತಿತ್ವಕ್ಕೆ ಅತ್ಯಗತ್ಯವಾಗಿರುವ ಆಮ್ಲಜನಕದ ಆಡಂಬೋಲಗಳು. ಗಿಡ-ಮರಗಳು ಅಂತರ್ಜಲ ಸಂಪತ್ತಿನ ಪೋಷಕರು. ಅರಣ್ಯ ಪ್ರದೇಶ ಸೇರಿದಂತೆ ಗಿಡಮರಗಳ ತಟದಲ್ಲಿರುವ ಕೆರೆ-ಕಟ್ಟೆ, ಬಾವಿಗಳು ಎಂದಿಗೂ ಬರಿದಾಗವು.
ಆದರೆ, ಇದೀಗ ನಾವು ಅಭಿವೃದ್ಧಿಯ ಹಾದಿಯಲ್ಲಿ ಮುಂದೆ ಸಾಗಿದಂತೆ ದಿನೇ ದಿನೇ ಅರಣ್ಯ ಪ್ರದೇಶ ಕ್ಷೀಣಿಸುತ್ತಾ ಬಂದಿದೆ. ಇದರಿಂದ ನಾವು ಪರಿಸರ ವ್ಯವಸ್ಥೆಯಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸುವಂತಾಗಿದೆ. ಆದ್ದರಿಂದ ನಾವು ಅರಣ್ಯ ಸಂರಕ್ಷಣೆ ಬಗ್ಗೆ ತ್ವರಿತಗತಿಯಲ್ಲಿ ಎಚ್ಚೆತ್ತುಕೊಳ್ಳಬೇಕಾದ ಕಾಲ ಸನ್ನಿಹಿತವಾಗಿದೆ. ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ಪರಿಸರ ವ್ಯವಸ್ಥೆಯಲ್ಲಿ ಎದುರಾಗುವ ಗಂಡಾಂತರ ಸಮಸ್ಯೆಗೆ ನಾವು ಬೆಲೆ ತೆತ್ತಬೇಕಾಗುತ್ತದೆ.
‘ಅರಣ್ಯಗಳು ಮತ್ತು ನಾವೀನ್ಯತೆ
‘ಅರಣ್ಯಗಳು ಮತ್ತು ನಾವೀನ್ಯತೆ‘’ಎಂಬ ವಿಷಯದ ಮೇಲೆ’ 2024 ರ ಅಂತರಾಷ್ಟ್ರೀಯ ಅರಣ್ಯ ದಿನವನ್ನು ಆಚರಿಸಲಾಗುತ್ತಿದೆ.
ಮಾನವನ ಹಸ್ತಕ್ಷೇಪ: ಪ್ರಕೃತಿ ಮೇಲೆ ಮಾನವನ ಹಸ್ತಕ್ಷೇಪದಿಂದ ಇಂದು ನೆಲ-ಜಲ, ಅರಣ್ಯ, ಜೀವಿ ಪರಿಸರ, ಜೀವ ವೈವಿಧ್ಯ ದಿನೇ ದಿನೇ ಕ್ಷೀಣಿಸುತ್ತಿದೆ. ದಿನೇ ದಿನೇ ಬದಲಾಗುತ್ತಿರುವ ಹವಾಮಾನ ಮತ್ತು ಪದೇ ಪದೇ ಸಂಭವಿಸುತ್ತಿರುವ ಬರಗಾಲ ಹಾಗೂ ಇದರಿಂದು ಉಂಟಾಗುತ್ತಿರುವ ನೀರಿನ ಕ್ಷಾಮವನ್ನು ಪರಿಹರಿಸುವುದು ಪ್ರಸ್ತುತ ಸನ್ನಿವೇಶದಲ್ಲಿ ಬಹು ಮುಖ್ಯವಾದ ವಿಚಾರವಾಗಿದೆ. ಈ ನಿಟ್ಟಿನಲ್ಲಿ ಪಶ್ಚಿಮಘಟ್ಟ ಸಾಲಿನ ಪರ್ವತ ಶ್ರೇಣಿ ಸೇರಿದಂತೆ ಸಸ್ಯ , ಪ್ರಾಣಿ ಸಂಕುಲ, ಅರಣ್ಯ, ನೀರು, ಮತ್ತು ಪರಿಸರ ಸಂರಕ್ಷಣೆ ಹಾಗೂ ಇಡೀ ಜೀವಿ ಸಂಕುಲವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಾವು ಬದ್ಧತೆಯಿಂದ ಈಗಿನಿಂದಲೇ ಕಾರ್ಯೋನುಮಖವಾಗಬೇಕಿದೆ.
ನೆಲ,ಜಲ, ವಾಯು ಮಾಲಿನ್ಯದಿಂದ ಭೂಮಿಯ ಮೇಲಿನ ಸಸ್ಯ ಮತ್ತು ಪ್ರಾಣಿ ವೈವಿಧ್ಯ, ಬೆಳೆ ವೈವಿಧ್ಯ, ವನ್ಯಜೀವಿಗಳು ಮತ್ತು ಜಲಚರಗಳ ವೈವಿಧ್ಯತೆ, ಔಷಧೀಯ ವೈವಿಧ್ಯತೆ ಹೀಗೆ ಅನೇಕ ಜೀವ ಸಂಪತ್ತುಗಳು ನಶಿಸಿಹೋಗುತ್ತಿವೆ. ಪ್ರಕೃತಿಯಲ್ಲಿ ನಮ್ಮೆಲ್ಲರ ಬದುಕಿಗೆ ಆಧಾರವಾಗಿರುವ ಅರಣ್ಯ, ನದಿ, ಕೆರೆ, ಸಮುದ್ರ, ಅಂತರ್ಜಲ, ಪಶ್ಚಿಮಘಟ್ಟದಂತಹ ಪರ್ವತ ಶ್ರೇಣಿ, ವಾಯುಮಂಡಲ ಎಲ್ಲವೂ ನಾನಾ ಕಾರಣಗಳಿಂದಾಗಿ ದುಃಸ್ಥಿತಿಗೆ ಬರುತ್ತಿವೆ. ಇಡೀ ಭೂಮಂಡಲದ ಜೀವಗೋಲ ಅಪಾಯಕ್ಕೆ ಸಿಲುಕುತ್ತಿದೆ. ಅನೇಕ ವಿಧದಲ್ಲಿ ಎದುರಾಗುತ್ತಿರುವ ಅಪಾಯಗಳನ್ನು ತಡೆಗಟ್ಟದಿದ್ದಲ್ಲಿ ಭವಿಷ್ಯದಲ್ಲಿ ಇಡೀ ಜೀವಿ- ಸಂಕುಲವೇ ನಾಶವಾಗುವ ಅಪಾಯ ತಪ್ಪಿದ್ದಲ್ಲ ಎಂಬ ಅಂಶವನ್ನು ನಾವು ಮನಗಾಣಬೇಕಿದೆ. ನಾವು ಈಗಾಗಲೇ ಜಾಗತಿಕ ತಾಪಮಾನ ಹಾಗೂ ಹವಾಮಾನ ವೈಪರೀತ್ಯಗಳಿಂದ ಅನೇಕ ಪರಿಸರ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇದೀಗ ಬಿರು ಬೇಸಿಗೆಯಲ್ಲಿ ಬರದ ಪರಿಸ್ಥಿತಿ ಆವರಿಸಿಕೊಂಡಿದ್ದು, ಕುಡಿಯುವ ನೀರಿನ ಸಮಸ್ಯೆಯ ಭೀಕರತೆಯನ್ನು ಕೂಡ ನಾವು ಅನುಭವಿಸುತ್ತಿದ್ದೇವೆ.
ಪ್ರಕೃತಿ ಮೇಲೆ ಮಾನವನ ಹಸ್ತಕ್ಷೇಪದಿಂದ ಇಂದು ಜೀವ ವೈವಿಧ್ಯ ದಿನೇ ದಿನೇ ಕ್ಷೀಣಿಸುತ್ತಿದೆ. ಈ ದಿಸೆಯಲ್ಲಿ ನಾವು ಉತ್ತಮ ಭವಿಷ್ಯತ್ತಿಗಾಗಿ ನೆಲ -ಜಲ, ಅರಣ್ಯ, ವನ್ಯಜೀವಿಗಳು ಹಾಗೂ ಜೀವಿ- ವೈವಿಧ್ಯ ಸಂರಕ್ಷಿಸುವ ಮೂಲಕ ಪರಿಸರ ಸಂರಕ್ಷಿಸಲು ಪಣ ತೊಡಬೇಕಿದೆ
ನೆಲ,ಜಲ, ವಾಯು ಮಾಲಿನ್ಯದಿಂದ ಭೂಮಿಯ ಮೇಲಿನ ಸಸ್ಯ ಮತ್ತು ಪ್ರಾಣಿ ವೈವಿಧ್ಯ, ಬೆಳೆ ವೈವಿಧ್ಯ, ವನ್ಯಜೀವಿಗಳು ಮತ್ತು ಜಲಚರಗಳ ವೈವಿಧ್ಯತೆ, ಔಷಧೀಯ ವೈವಿಧ್ಯತೆ ಹೀಗೆ ಅನೇಕ ಜೀವ ಸಂಪತ್ತುಗಳು ನಶಿಸಿಹೋಗುತ್ತಿವೆ.
ಪ್ರಕೃತಿಯಲ್ಲಿ ನಮ್ಮೆಲ್ಲರ ಬದುಕಿಗೆ ಆಧಾರವಾಗಿರುವ ಅರಣ್ಯ, ನದಿ, ಕೆರೆ, ಸಮುದ್ರ, ಅಂತರ್ಜಲ, ಪಶ್ಚಿಮಘಟ್ಟದಂತಹ ಪರ್ವತ ಶ್ರೇಣಿ, ವಾಯುಮಂಡಲ ಎಲ್ಲವೂ ನಾನಾ ಕಾರಣಗಳಿಂದಾಗಿ ದುಃಸ್ಥಿತಿಗೆ ಬರುತ್ತಿವೆ. ಇಡೀ ಭೂಮಂಡಲದ ಜೀವಗೋಲ ಅಪಾಯಕ್ಕೆ ಸಿಲುಕುತ್ತಿದೆ.
ಅರಣ್ಯಗಳು : ಭೂಮಿಯ ಮೇಲೆ ಎಲ್ಲಾ ಜೀವಿಗಳು ಸುಸ್ಥಿರ ಜೀವನ ನಡೆಸಲು ಅರಣ್ಯದ ಅವಶ್ಯಕತೆ ಇದೆ. ಅರಣ್ಯಗಳು ನಮಗೆ ಮಳೆ ತರಿಸುವುದರೊಂದಿಗೆ ಶುದ್ಧ ಗಾಳಿ, ನೆರಳು ಮತ್ತು ಆಶ್ರಯ ನೀಡುತ್ತವೆ. ಶುದ್ಧ ಹವೆ, ನೀರು ಮತ್ತು ಆಹಾರ ಪೂರೈಕೆ ಮಾಡುವ ಅರಣ್ಯಗಳು ಇಂದು ಹೆಚ್ಚುತ್ತಿರುವ ಜನಸಂಖ್ಯೆ ಹಾಗೂ ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಒತ್ತುವರಿ ಮತ್ತಿತರ ಕಾರಣಗಳಿಂದಾಗಿ ವಿಶ್ವದ ಅರಣ್ಯಗಳು ವಿನಾಶ ಮತ್ತು ಅವನತಿಯತ್ತ ಸಾಗುತ್ತಿವೆ. ಒಂದು ಕಾಲದಲ್ಲಿ ಭೇದಿಸಲಾಗದ ದಟ್ಟ ಮರಗಳಿಂದ ಕೂಡಿದ ಅರಣ್ಯ ಇಂದು ಜನವಸತಿ ಪ್ರದೇಶಗಳಾಗಿ ಮಾರ್ಪಟ್ಟಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಅರಣ್ಯದ ನೆರಳಿನಲ್ಲಿ ಒಂದನ್ನೊಂದು ಅವಲಂಬಿತ ವೈವಿಧ್ಯಮಯ ಸಸ್ಯ ಮತ್ತು ಪ್ರಾಣಿ ಸಂಕುಲಗಳು ವಾಸಿಸುತ್ತವೆ. ಕಾಡಿನಲ್ಲಿ ಕೊಳೆತ ಎಲೆಗಳಿಂದೊಳಗೂಡಿದ ಮಣ್ಣಿನಲ್ಲಿ ಅಪಾರ ಪ್ರಮಾಣದ ಅಕಶೇರುಕ ಸೂಕ್ಷ್ಮ ಬ್ಯಾಕ್ಟೀರಿಯಾ ಮತ್ತು ಶಿಲೀಂದ್ರಗಳು ವಾಸವಾಗಿದ್ದು, ಇವು ಮಣ್ಣು ಮತ್ತು ಅರಣ್ಯ ಸಸ್ಯಗಳ ನಡುವೆ ಪೋಷಕಾಂಶಗಳ ಹಸ್ತಾಂತರ ಮಾಡುವಲ್ಲಿ ಮಹತ್ವದ ಪಾತ್ರವಹಿಸುತ್ತವೆ.
ನದಿಗಳು : ನದಿಗಳು ಪ್ರಕೃತಿ ನಿಯಮಾನುಸಾರ ಹರಿಯುತ್ತಾ ಜೀವ-ಜಂತುಗಳನ್ನು ಪೋಷಿಸುವುದರ ಜೊತೆಗೆ ಝರಿ-ತೊರೆಗಳನ್ನು ಬೆಸೆಯುವ ಮೂಲಕ ಸಂಕೀರ್ಣವಾದ ಜಲ ಜಾಲವನ್ನು ಸೃಷ್ಠಿಸುತ್ತಿದೆ. ನದಿಗಳ ಸಹಸ್ರಾರು ವರ್ಷಗಳ ನಿರಂತರ ಹರಿಯುವಿಕೆಯಿಂದಾಗಿ ಜೀವ ವಿಕಾಸದ ತೊಟ್ಟಿಲು ಎಂದು ಎನಿಸಿಕೊಂಡಿರುವುದರ ಜೊತೆಗೆ ಕೋಟ್ಯಾಂತರ ಜೀವಿಗಳಿಗೆ ಆಶ್ರಯ ನೀಡುತ್ತಿವೆ.
ಹೀಗಾಗಿಯೇ ಜಲ ಸಂಬಂಧಿ ಪರಿಸರ ವ್ಯವಸ್ಥೆಗಳು ಯಾವಾಗಲೂ ಅತ್ಯಂತ ಸೂಕ್ಷ್ಮವಾಗಿರುತ್ತವೆ. ಪಶ್ಚಿಮಘಟ್ಟದ ಜೀವ ವೈವಿಧ್ಯದ ಹಿನ್ನೆಲೆಯಲ್ಲಿ ಇಂತಹ ಜಲ ಜಾಲಗಳ ಪಾತ್ರ ಪ್ರಮುಖವಾದುದು.
ನಾವು ಪಶ್ಚಿಮಘಟ್ಟದ ಅತ್ಯಮೂಲ್ಯ ಸಸ್ಯ ಹಾಗೂ ಜೀವಿ ಸಂಪತ್ತು ಸೇರಿದಂತೆ ಇಡೀ ಜೀವಿ ವೈವಿಧ್ಯವನ್ನು ಸಂರಕ್ಷಣೆ ಮಾಡಬೇಕು.
ನಾಳಿನ ಉತ್ತಮ ಭವಿಷ್ಯತ್ತಿಗಾಗಿ ನಾವು ನೆಲ -ಜಲ, ಅರಣ್ಯ, ವನ್ಯಜೀವಿಗಳು ಹಾಗೂ ಜೀವಿ- ವೈವಿಧ್ಯ ಸಂರಕ್ಷಿಸುವ ಮೂಲಕ ಪರಿಸರ ಸಂರಕ್ಷಿಸಲು ಪಣ ತೊಡಬೇಕಿದೆ .
ಅರಣ್ಯ ದಿನದ ಆಚರಣೆ ಹೇಗೆ ?
ವಿಶ್ವ ಅರಣ್ಯ ದಿನಾಚರಣೆಯಂದು ಅರಣ್ಯ ಇಲಾಖೆಯ ಸಹಕಾರದೊಂದಿಗೆ ಶಾಲಾ-ಕಾಲೇಜಿನ ಇಕೋ ಕ್ಲಬ್ (ಪರಿಸರ ಸಂಘ) ದ ವತಿಯಿಂದ ನಮ್ಮ ಸ್ಥಳೀಯ ಅರಣ್ಯಕ್ಕೆ ಭೇಟಿ ನೀಡಿ ಅರಣ್ಯಗಳು ಯಾವ ರೀತಿಯಲ್ಲಿ ನಮ್ಮ ಆರೋಗ್ಯಕರ ಇರುವಿಕೆಯಲ್ಲಿ ಸಹಕರಿಸುತ್ತವೆ ಎಂಬುದನ್ನು ಅರಿಯಬಹುದು. ಈ ದಿನದಂದು ಆಚರಣೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ವಿವಿಧ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದು. ಅರಣ್ಯ ಸಂರಕ್ಷಣೆಗೆ ಸಂಬಂಧಿಸಿದಂತೆ ಇಕೋ ಕ್ಲಬ್ ಮೂಲಕ ಜಾಥಾ / ವಿಚಾರ ಗೋಷ್ಠಿ, ಪರಿಸರ ನಡಿಗೆ ಮುಂತಾದ ಪರಿಸರ ಜಾಗೃತಿ ಆಂದೋಲನಗಳನ್ನು ಸಂಘಟಿಸುವ ಮೂಲಕ ನಾಗರಿಕರು ಮತ್ತು ವಿದ್ಯಾರ್ಥಿ ಸಮುದಾಯಕ್ಕೆಅರಣ್ಯ ಸಂರಕ್ಷಣೆಯ ಮಹತ್ವವನ್ನು ತಿಳಿಸುವುದು. ಅರಣ್ಯ ಸಂರಕ್ಷಣೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ, ಚಿತ್ರಕಲೆ, ಚರ್ಚಾಸ್ಪರ್ಧೆ, ಪರಿಸರ ನಾಟಕಗಳು, ರ‍್ಯಾಲಿ ಸಂಘಟಿಸುವ ಮೂಲಕ ವಿದ್ಯಾರ್ಥಿಗಳು ತಮ್ಮನ್ನು ಭವಿಷ್ಯದಲ್ಲಿ ಅರಣ್ಯ ಮತ್ತು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಪ್ರೇರೇಪಿಸಬೇಕು.
ಗಿಡ ನೆಟ್ಟು ಬೆಳೆಸುವುದು : ವಿದ್ಯಾರ್ಥಿಗಳು ತಮ್ಮ ಮನೆ, ವಠಾರ, ಶಾಲಾವರಣ ಮತ್ತು ಖಾಲಿ ಜಾಗ, ರಸ್ತೆ ಬದಿಗೆ ಅರಣ್ಯದ ಸಸಿಗಳನ್ನು ನೆಟ್ಟು ಬೆಳೆಸುವಂತೆ ಪ್ರೇರೇಪಿಸುವುದು. ನಂತರ ವಿದ್ಯಾರ್ಥಿಗಳು ತಾವು ನೆಟ್ಟ ಗಿಡಗಳನ್ನು ಪೋಷಿಸುವ ಮೂಲಕ ಗಿಡ ಬೆಳೆಸಲು ಪ್ರೀತಿ ಮತ್ತು ಕಾಳಜಿ ಮೂಡಿಸುವ ಮೂಲಕ ಅವರು ತಮ್ಮನ್ನು ಪರಿಸರ ರಾಯಭಾರಿಗಲಾಗಿ ರೂಪುಗೊಂಡು ಭವಿಷ್ಯದಲ್ಲಿ ಅರಣ್ಯ ಮತ್ತು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಲು ಪ್ರೇರೇಪಿಸುವುದು.
ಉಪ ಸಂಹಾರ : ಪ್ರತಿಯೊಬ್ಬರೂ ಅರಣ್ಯ, ವನ್ಯಜೀವಿಗಳು, ಜೀವಿ ವೈವಿಧ್ಯ ಮತ್ತು ಪರಿಸರ ಸಂರಕ್ಷಣೆಗೆ ತೊಡಗಿದಾಗ ಮಾತ್ರ ಪ್ರಕೃತಿ ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ. ಇಲ್ಲದಿದ್ದಲ್ಲಿ ಮನಷ್ಯ ಜೀವಿಯೂ ಸೇರಿದಂತೆ ಇಡೀ ಜೀವಿ ಸಂಕುಲವೇ ನಾಶವಾಗುವ ಅಪಾಯ ತಪ್ಪಿದ್ದಲ್ಲ ಎಂಬ ಎಚ್ಚರಿಕೆಯನ್ನು ನಮ್ಮ ಪರಿಸರ ತಜ್ಞರು ನಮಗೆ ಈಗಾಗಲೇ ನೀಡಿದ್ದಾರೆ.
ಆದುದರಿಂದ ನಾವು ನಮ್ಮ ಪರಿಸರದಲ್ಲಿ ಹೆಚ್ಚೆಚ್ಚು ಗಿಡ ನೆಟ್ಟು ಬೆಳೆಸುವ ಮೂಲಕ ಬರವನ್ನು ಅಳಿಸುವ ಮೂಲಕ ಪರಿಸರ ಸಮತೋಲನವನ್ನು ಕಾಪಾಡಿಕೊಂಡು ಜಾಗತಿಕ ತಾಪಮಾನವನ್ನು ತಗ್ಗಿಸಲು ಸಂಘಟಿತ ಪ್ರಯತ್ನ ನಡೆಸಬೇಕಿದೆ.
ಪ್ರಕೃತಿ ಸಂರಕ್ಷಣೆ ನಮ್ಮೆಲ್ಲರ ಹೊಣೆ ಎಂಬ ಘೋಷಣೆಯೊಂದಿಗೆ ನಾವು ಇಂದೇ ಅರಣ್ಯ, ನೀರು ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಜಾಗ್ರತೆ ವಹಿಸುವ ಮೂಲಕ ಇರುವುದೊಂದೇ ಭೂಮಿ: ಇದೇ ನಮ್ಮ ಮನೆ – ಎಂಬ ಧ್ಯೇಯದೊಂದಿಗೆ ಪರಿಸರ ಉಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗೋಣ.
ಲೇಖನ : ಟಿ.ಜಿ.ಪ್ರೇಮಕುಮಾರ್,
ಮುಖ್ಯ ಶಿಕ್ಷಕರು,
ಸರ್ಕಾರಿ ಪ್ರೌಢಶಾಲೆ, ಕೂಡುಮಂಗಳೂರು, ಕೊಡಗು ಜಿಲ್ಲೆ:
(ಮೊ.ನಂ 9448588352)