ವಿರಾಜಪೇಟೆ ಮಾ.23 NEWS DESK : ಸಮಾಜದಲ್ಲಿ ಮಹಿಳೆಯರ ಮೇಲಿನ ತಾರತಮ್ಯ ನಿಲ್ಲಬೇಕು ಎಂದು ಅರಮೇರಿಯ ಎಸ್.ಎಂ.ಎಸ್. ವಿದ್ಯಾಪೀಠದ ಪ್ರಾಂಶುಪಾಲೆ ಬಲ್ಲಚಂಡ ಕುಸುಮ್ ಅಭಿಪ್ರಾಯಪಟ್ಟರು.
ವಿರಾಜಪೇಟೆ ಕಾವೇರಿ ಕಾಲೇಜಿನ ಮಹಿಳಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ಸಬಲೀಕರಣದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಮಹಿಳೆಯರು ಮತ್ತು ಪುರುಷರಲ್ಲಿ ದೈಹಿಕ ಮತ್ತು ಜೈವಿಕ ವ್ಯತ್ಯಾಸವಿದೆ. ಆದರೆ ಭೌದ್ದಿಕ ವ್ಯತ್ಯಾಸವಿಲ್ಲ. ಪುರುಷರು ಯಾವಾಗ ಬೌದ್ಧಿಕವಾಗಿ ಮುಂದುವರೆಯುತ್ತಾರೋ ಅಥವಾ ಸ್ತ್ರೀಯರಿಗೆ ಬೌದ್ಧಿಕತೆಗೆ ಸಂಭಂದಿಸಿದ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶ ಸಿಗದಿದ್ದಾಗ ಅಸಮಾನತೆ, ತಾರತಮ್ಯ ಎಂದು ಹೋರಾಟ ನಡೆಸುವುದು ಸರಿಯಲ್ಲ ಎಂದರು. ಆದುದರಿಂದ ಬೌದ್ಧಿಕ ಅಭಿವೃದ್ಧಿಯ ಕಡೆ ಮಹಿಳೆಯರು ಹೆಚ್ಚಿನ ಗಮನವನ್ನು ನೀಡಬೇಕು ಎಂದರು.
ಮಹಿಳೆಯರು ಸಮಾಜಕ್ಕೆ ಕೊಡುಗೆ ಕೊಡುವ ಉದ್ದೇಶದಿಂದ ಶಿಕ್ಷಣ, ಉದ್ಯೋಗವನ್ನು ಪಡೆಯಬೇಕೆ ಹೊರತು ಪುರುಷರಿಗೆ ಸವಾಲು ಹಾಕುವ ಉದ್ದೇಶದಿಂದ ಅಲ್ಲ ಎಂದರು.
ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ನಾಣಯ್ಯ ಮಾತನಾಡಿ ಮಹಿಳಾ ಸಬಲೀಕರಣ ಇಂದು ಪ್ರಸ್ತುತವಾಗಿದ್ದು, ಸಮಾಜಕ್ಕೆ ಮತ್ತು ರಾಷ್ಟ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ ಎಂದರು.
ಪದವಿ ಕಾಲೇಜಿನ ಅರ್ಥಶಾಸ್ತ್ರ ಪ್ರಾಧ್ಯಾಪಕ ಬೆನೆಡಿಕ್ಟ್ ಸಲ್ಡಾನ ಮಾತನಾಡಿ, ಮನೆಯಲ್ಲಿ, ಸಮಾಜದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದಾಗಿದೆ. ಮಹಿಳೆಯರು ಮಾನಸಿಕವಾಗಿ ಸದೃಢರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಪದವಿ ಕಾಲೇಜು ಪ್ರಾಂಶುಪಾಲ ಡಾ. ಆನಂದ್ ಕಾರ್ಲ, ಭಾರತವು ಮಾತೃ ಪ್ರಧಾನ ಕುಟುಂಬ ವ್ಯವಸ್ಥೆ ಹೊಂದಿದ್ದು, ತಾಯಿಗೆ ಪ್ರಾಧಾನ್ಯತೆ ನೀಡಲಾಗಿದೆ ಎಂದರು. ಸಂಸಾರವು ರಥದಂತೆ, ಗಂಡ ಮತ್ತು ಹೆಂಡತಿ ರಥದ ಚಕ್ರದಂತೆ ಇದ್ದು ಸಂಸಾರ ಸಾಗಿಸಲು ಎರಡು ಚಕ್ರಗಳು ಬೇಕು ಎಂದರು. ಸಂಸಾರದಲ್ಲಿ ಗಂಡ ಹೆಂಡತಿ ಇಬ್ಬರೂ ಪ್ರಮುಖರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಜರಿದ್ದರು.