ಮಡಿಕೇರಿ ಮಾ.23 NEWS DESK : ಕಾಡಾನೆ ದಾಳಿಗೆ ಸಿಲುಕಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ನಾಪೋಕ್ಲು ಬಳಿಯ ಕಕ್ಕಬ್ಬೆ ನಾಲಡಿ ಗ್ರಾಮದಲ್ಲಿ ನಡೆದಿದೆ.
ಆಟೋ ಚಾಲಕರಾಗಿದ್ದ ನಾಲಡಿ ಗ್ರಾಮದ ನಿವಾಸಿ ಕಂಬೆಯಂಡ ರಾಜ ದೇವಯ್ಯ (59)ಮೃತ ದುರ್ದೈವಿ. ತೋಟದ ಕೆಲಸಕ್ಕೆಂದು ನಾಲಡಿ ಗ್ರಾಮದ ತೋಡುಕೆರೆ ಬಳಿ ತೆರಳುತ್ತಿದ್ದಾಗ ದಿಢೀರ್ ಆಗಿ ಕಾಡಾನೆ ದಾಳಿ ಮಾಡಿದೆ. ಸ್ವಲ್ಪ ದೂರದ ವರೆಗೆ ರಾಜ ದೇವಯ್ಯ ಅವರನ್ನು ಅಟ್ಟಾಡಿಸಿದ ಆನೆ ಏಕಾಏಕಿ ದಾಳಿ ಮಾಡಿತು. ಈ ಸಂದರ್ಭ ಅವರು ಸ್ಥಳದಲ್ಲೇ ಮೃತಪಟ್ಟರು. ರಾಜ ದೇವಯ್ಯ ಅವರೊಂದಿಗೆ ತೆರಳಿದ್ದ ನಾಯಿ ಮಾತ್ರ ಮನೆಗೆ ಮರಳಿದಾಗ ಸಂಶಯಗೊಂಡ ಪತ್ನಿ ನಳಿನಿ ಪತಿಗೆ ಕರೆ ಮಾಡಿದ್ದಾರೆ. ಆದರೆ ಉತ್ತರ ಬಾರದೆ ಇದ್ದಾಗ ತೋಟದ ಕಡೆ ತೆರಳಿ ಪರಿಶೀಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ ತಮ್ಮ ಕಣ್ಣಿಗೆ ಕಾಡಾನೆ ಗೋಚರವಾದ ಕಾರಣ ಅಲ್ಲಿಂದ ಓಡಿ ಹೋದೆ ಎಂದು ನಳಿನಿ ಹೇಳಿಕೊಂಡಿದ್ದಾರೆ.
ನಂತರ ಪುತ್ರ ಬಂದು ಪರಿಶೀಲಿಸಿದಾಗ ಕಾಫಿ ಗಿಡಗಳ ಮಧ್ಯದಲ್ಲಿ ರಾಜ ದೇವಯ್ಯ ಅವರ ಮೃತದೇಹ ಪತ್ತೆಯಾಗಿದೆ. ಮೃತರು ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಸ್ಥಳಕ್ಕೆ ನಾಪೋಕ್ಲು ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಗ್ರಾಮಸ್ಥರು ಅರಣ್ಯ ಇಲಾಖೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಗಿರಿಜನ ಮುಖಂಡ ಕುಡಿಯರ ಮುತ್ತಪ್ಪ ಮಾತನಾಡಿ ಸ್ಥಳದಲ್ಲೇ ಪರಿಹಾರ ನೀಡದಿದ್ದಲ್ಲಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ಯಲು ಬಿಡುವುದಿಲ್ಲ ಎಂದರು.
ನೆರೆದಿದ್ದ ಗ್ರಾಮಸ್ಥರು ಕೂಡ ಪರಿಹಾರಕ್ಕಾಗಿ ಪಟ್ಟು ಹಿಡಿದರು. ಅಲ್ಲದೆ ರಾಜ ದೇವಯ್ಯ ಅವರ ಮಕ್ಕಳಿಗೆ ಸರಕಾರಿ ಉದ್ಯೋಗ ನೀಡುವಂತೆ ಒತ್ತಾಯಿಸಿದರು. ಗ್ರಾಮಸ್ಥರ ಒತ್ತಡಕ್ಕೆ ಮಣಿದ ಅರಣ್ಯ ಅಧಿಕಾರಿಗಳು ಸ್ಥಳದಲ್ಲೇ ರೂ.5 ಲಕ್ಷದ ಚೆಕ್ ನೀಡಲು ಒಪ್ಪಿದರು. ಉಳಿದ 10 ಲಕ್ಷ ರೂ.ಗಳನ್ನು ನಂತರ ನೀಡುವುದಾಗಿ ಭರವಸೆ ನೀಡಿದರು.
ಮಕ್ಕಳಿಗೆ ಉದ್ಯೋಗ ನೀಡಬೇಕೆನ್ನುವ ಬೇಡಿಕೆ ಕುರಿತು ಮೇಲಧಿಕಾರಿಗಳಿಗೆ ಪತ್ರ ಬರೆಯುವುದಾಗಿ ತಿಳಿಸಿದರು. ನಂತರ ಗ್ರಾಮಸ್ಥರು ಪ್ರತಿಭಟನೆಯಿಂದ ಹಿಂದೆ ಸರಿದರು. ಅಧಿಕಾರಿಗಳು ಮುಂದಿನ ಕ್ರಮ ಕೈಗೊಂಡರು.












