ಸುಂಟಿಕೊಪ್ಪ ಮಾ.28 NEWS DESK : ಸುಂಟಿಕೊಪ್ಪದ ಸ್ವಸ್ಥ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕೇಂದ್ರ, ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಹಯೋಗದಲ್ಲಿ ಸುಂಟಿಕೊಪ್ಪದಲ್ಲಿ ವಿಶೇಷಚೇತನರು ಮತ್ತು ಅವರ ಪಾಲಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.
ಸುಂಟಿಕೊಪ್ಪದ ಮಾದಾಪುರ ರಸ್ತೆಯಲ್ಲಿರುವ ಸ್ವಸ್ಥ ಶಾಲೆಯಲ್ಲಿ ನಡೆದ ಶಿಬಿರದಲ್ಲಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ವಿಶಾಲ್ ಕುಮಾರ್ ಮಾತನಾಡಿ, ವಿಶೇಷಚೇತನರು ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯ ಕಾರ್ಡ್ ಹೊಂದಿಕೊಂಡಲ್ಲಿ ಆಸ್ಪತ್ರೆಗಳಲ್ಲಿ ರೂ.5 ಲಕ್ಷಗಳವರೆಗಿನ ಉಚಿತ ಚಿಕಿತ್ಸೆಯ ಪ್ರಯೋಜನವನ್ನು ಪಡೆದುಕೊಳ್ಳಬಹುದೆಂದರು.
ವಿಶೇಷಚೇತನರಿಗಾಗಿ ಇರುವ ವಿಶೇಷ ಗುರುತಿನ ಚೇಟಿಯ ಮಹತ್ವದದ ಬಗ್ಗೆ ತಿಳಿಸಿ, ವಿಶೇಷ ಗುರುತಿನ ಚೇಟಿಯನ್ನು ಮಾಡಿಸದೇ ಇದ್ದವರು, ಪಂಚಾಯತ್ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವಿ.ಆರ್.ಡಬ್ಲುಯುಗಳ ಮುಖಾಂತರ ನೋಂದಾಯಿಸಿ ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ತಪಾಸಣೆಗೊಳಗಾಗಿ ಪಡೆದುಕೊಳ್ಳಬೇಕೆಂದು ತಿಳಿಸಿದರು.
ವಿರಾಜಪೇಟೆಯ ಆಶೀರ್ವಾದ್ ವೈದ್ಯಕೀಯ ಸಂಸ್ಥೆಯ ಮುಖ್ಯಸ್ಥ ಶಿಶುತಜ್ಞ ಡಾ. ಗೌರವ್ ಅಯ್ಯಪ್ಪ ಮಾತನಾಡಿ, ನವಜಾತ ಶಿಶುವಿನ ಜನನದ ಮೊದಲ ನಿಮಿಷದ ಮಹತ್ವ ಮತ್ತು ಆ ಸಮಯದ ನಿರ್ಲಕ್ಷ್ಯದಿಂದ ಆಗುವ ಪರಿಣಾಮಗಳ ಬಗ್ಗೆ ಎಚ್ಚರದ ಅರಿವು ಮೂಡಿಸುವ ಅಗತ್ಯತೆಯ ಬಗ್ಗೆ ಮಾಹಿತಿ ನೀಡಿದರು.
ದಿ ಕೂರ್ಗ್ ಫೌಂಡೇಷನ್ನ ಟ್ರಸ್ಟಿ ಗಂಗಾ ಚಂಗಪ್ಪ ಸ್ವಸ್ಥ ಸಂಸ್ಥೆಯ ಸ್ಥಾಪನೆಯ ಸಂದರ್ಭ ಮತ್ತು ಅದರ ಉದ್ದೇಶದ ಬಗ್ಗೆ ಮಾತನಾಡಿದರು.
ಸ್ವಸ್ಥ ಸಂಸ್ಥೆಯ ನಿರ್ದೇಶಕರಾದ ಆರತಿ ಸೋಮಯ್ಯ ಮಾತನಾಡಿ, 2010ರಿಂದ ಸ್ವಸ್ಥದ ಸಮುದಾಯ ಆಧಾರಿತ ಪುನರ್ವಸತಿ ಕೇಂದ್ರದ ಮುಖಾಂತರ ಕೊಡಗು ಜಿಲ್ಲೆಯಲ್ಲಿರುವ ವಿಶೇಷಚೇತನರನ್ನು ಗುರುತಿಸಿ, ಅವರಿಗೆ ವ್ಯದ್ಯಕೀಯ ಸೌಲಭ್ಯಗಳ ಅರಿವು ಮತ್ತು ಅವುಗಳ ನೇರ ಬಳಕೆಗೆ ಪ್ರೇರೇಪಿಸುವ ಪ್ರಯತ್ನದ ಬಗ್ಗೆ ವಿವರಿಸಿದರು. ಖಾಸಗಿ ಮತ್ತು ಸರ್ಕಾರಿ ವ್ಯದ್ಯಕೀಯ ಕಾರ್ಯಗಳ ನಡುವೆ ಸಹಭಾಗಿತ್ವದ ಮಾದರಿ ಇದ್ದಲ್ಲಿ, ಫಲಾನುಭವಿಗಳು ಪಡೆಯುವ ವ್ಯದ್ಯಕೀಯ ಸೌಲಭ್ಯಗಳ ಪ್ರಯೋಜನ ದೀರ್ಘಕಾಲಿಕವಾಗಿರುತ್ತದೆ ಎಂದು ಹೇಳಿದರು.
ಕಿವಿ ಮೂಗು ಗಂಟಲು ವಿಭಾಗ ಮುಖ್ಯಸ್ಥರಾದ ಡಾ. ಶ್ವೇತಾ, ನೇತ್ರವಿಜ್ಞಾನ ವಿಭಾಗ ಮುಖ್ಯಸ್ಥ ಡಾ. ಕೃಪಾಲಿನಿ, ಚರ್ಮಶಾಸ್ತ್ರ ವಿಭಾಗ ಮುಖ್ಯಸ್ಥರಾದ ಡಾ. ಹರ್ಷವರ್ಧನ್, ಮೂಳೆ ಮತ್ತು ಕೀಲು ಶಸ್ತ್ರಚಿಕಿತ್ಸಕ ಡಾ. ವಿನಯ್, ಮಕ್ಕಳ ತಜ್ಞೆ ಡಾ. ಸಲ್ಮಾ, ನೇತ್ರ ತಜ್ಞೆ ಕಾವ್ಯ, ಮನಶಾಸ್ತ್ರಜ್ಞರಾದ ರಮೇಶ್, ಶ್ರವಣಶಾಸ್ತ್ರಜ್ಞ ಮೋಹನ್ಲಾಲ್ ಸಲಹೆ ಮತ್ತು ಸಮಾಲೋಚನೆಯ ಅವಕಾಶವನ್ನು 96 ಫಲಾನುಭವಿಗಳು ಶಿಬಿರದಲ್ಲಿ ಪಡೆದರು.
ವನಿತಾ ಚೆಂಗಪ್ಪ ಸ್ವಾಗತಿಸಿದರು, ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಮಂಜುಳಾ ವಂದಿಸಿದರು.