ಸೋಮವಾರಪೇಟೆ ಏ.3 NEWS DESK : ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರಕ್ಕೆ ಸಿದ್ದಗಂಗಾ ಮಠದ ಕೊಡುಗೆ ಅನನ್ಯ ಎಂದು ಸೋಮವಾರಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ತಿಲೊತ್ತಮೆ ಬಣ್ಣಿಸಿದರು.
ಪಟ್ಟಣದ ಬಸವೇಶ್ವರ ದೇವಾಲಯದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ಹಾಗೂ ವೀರಶೈವ ಸಮಾಜದ ಆಶ್ರಯದಲ್ಲಿ ಏರ್ಪಡಿಸಿದ್ದ ಶಿವಕುಮಾರ ಸ್ವಾಮೀಜಿ ಜಯಂತ್ಯೋತ್ಸವದ ಗುರುವಂದನಾ ಸಮಾರಂಭ ವನ್ನುದ್ದೇಶಿಸಿ ಮಾತನಾಡಿದರು.
ಇಡೀ ದೇಶದಲ್ಲಿಯೇ ಗಮನ ಸೆಳೆದಿರುವ ಸಿದ್ದಗಂಗಾ ಕ್ಷೇತ್ರ ಇಂದು ಜನಸಾಮಾನ್ಯರ ಬಾಳಿನ ಆಶಾಕಿರಣವಾಗಿದೆ. ಜಾತಿ, ಮತ, ಬೇಧವಿಲ್ಲದೆ ಬಡವ, ಬಲ್ಲಿದನೆಂಬ ತಾರತಮ್ಯವಿಲ್ಲದೆ ಪ್ರತಿವರ್ಷ ಹತ್ತು, ಹದಿನೈದು ಸಾವಿರ ವಿಧ್ಯಾರ್ಥಿ ಗಳಿಗೆ ವಿದ್ಯೆ, ವಸತಿ, ಆಹಾರಗಳೆಂಬ ತ್ರಿವಿಧ ದಾಸೋಹ ನೀಡುತ್ತಿದೆ ಎಂದರು. ಅಂದು ಪೂಜ್ಯ ಶಿವಕುಮಾರ ಸ್ವಾಮೀಜಿ ಹಳ್ಳಿ, ಹಳ್ಳಿ ತಿರುಗಿ ಬಿಕ್ಷೇ ಎತ್ತಿ ಕಷ್ಟಪಟ್ಟು ಕಟ್ಟಿದ ಮಠ ಇಂದು ಹೆಮ್ಮರವಾಗಿ ಬೆಳೆದು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಸಮಾಜಕ್ಕೆ ಆಶ್ರಯ ನೀಡುತ್ತಿರುವುದು ಇಂದಿನ ಜನಾಂಗ ಕೃತಘ್ನತೆಯಿಂದ ಸ್ಮರಿಸಿ ಕೊಳ್ಳಬೇಕಾಗಿದೆ ಹಾಗೂ ತಮ್ಮ ಕೈಯಾಲಾದ ಸಹಾಯ ಮಾಡಬೇಕಾಗಿದೆ ಎಂದರು.
ಮಕ್ಕಳಲ್ಲಿಯೇ ದೇವರನ್ನು ಕಾಣುತಿದ್ದ ಶಿವಕುಮಾರ ಸ್ವಾಮೀಜಿಗಳು ಮಕ್ಕಳ ಮಧ್ಯಾಹ್ನದ ಊಟದ ನಂತರವೇ ತನ್ನ ಸಾವಿನ ಸುದ್ದಿ ತಿಳಿಸಬೇಕು ಎಂದು ಹೇಳಿದ್ದು, ಅವರಿಗೆ ಮಕ್ಕಳ ಮೇಲಿದ್ದ ಮಮತೆಯನ್ನು ತೋರಿಸುತ್ತದೆ ಎಂದು ಕಂಬನಿ ಮಿಡಿದರು.
ಶಿವಕುಮಾರ ಸ್ವಾಮೀಜಿ ಗಳಂತೆಯೆ 12ನೇ ಶತಮಾನದಲ್ಲಿ ಅನೇಕ ಶಿವಶರಣರು ಈ ನಾಡಿನ ಸಂಸ್ಕೃತಿ, ನಾಡು, ನುಡಿ ಹಾಗೂ ಜನಜೀವನ ಸುಧಾರಣೆಗೆ ತಮ್ಮ ಜೀವನವನ್ನೇ ಮುಡಿಪಾಗಟ್ಟಿದ್ದರು. ಅವರುಗಳನ್ನು ನಾವುಗಳು ಸ್ಮರಿಸಿಕೊಳ್ಳಬೇಕಾಗಿದೆ ಎಂದರು.
ಈ ಸಂದರ್ಭ ವೀರಶೈವ ಸಮಾಜದ ಯಜಮಾನ ಶಿವಕುಮಾರ್ ಹಾಗೂ ಹಿರಿಯರಾದ ಕಲಾ ಸದಾನಂದ್ ತಿಲೋತ್ತಮೆಯವರಿಗೆ ಗೌರವ ಸಮರ್ಪಿಸಿದರು.
ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಎಸ್.ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನಾ ವೇದಿಕೆಯ ಜಿಲ್ಲಾಧ್ಯಕ್ಷ ಉಷಾರಾಣಿ ಸ್ವಾಗತಿಸಿ, ವಂದಿಸಿದರು.
ವೀರಶೈವ ಸಮಾಜದ ಶೆಟ್ರು ಜಯಣ್ಣ, ಕಾರ್ಯದರ್ಶಿ ನಾಗರಾಜ್, ಅಕ್ಕನ ಬಳಗದ ಅಧ್ಯಕ್ಷೆ ಚಂದ್ರಕಲಾ ಸೇರಿದಂತೆ ವೀರಶೈವ ಸಮಾಜ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಪ್ರಮುಖರು ಹಾಜರಿದ್ದರು.
ದೇವಾಲಯದ ಅರ್ಚಕರಾದ ಮೋಹನ ಮೂರ್ತಿ ಪುರೋಹಿತ್ವದಲ್ಲಿ ಅಶ್ಟೋತ್ತರ, ಅರ್ಚನೆ ಹಾಗೂ ವಿಶೇಷ ಪೂಜೆ, ಮಹಾಮಂಗಳಾರತಿ ನಂತರ ದಾಸೋಹ ನಡೆಯಿತು.