ಮಡಿಕೇರಿ ಏ.3 NEWS DESK : ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯಿತಿ ವತಿಯಿಂದ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸಭಾಂಗಣದಲ್ಲಿ ಸ್ವೀಪ್ನ ಅಂಗವಾಗಿ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ಕಾರ್ಯಾಗಾರ ನಡೆಯಿತು.
ತಹಶೀಲ್ದಾರ್ ನವೀನ್ ಕುಮಾರ್ ಮಾತನಾಡಿ, ಮತಗಟ್ಟೆ ಅಧಿಕಾರಿಗಳು ಬೂತ್ ಮಟ್ಟದ ಸೈನಿಕರಿದ್ದಂತೆ, ಬೂತ್ ಮಟ್ಟದ ಮತಗಟ್ಟೆಯಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ಸಾರ್ವಜನಿಕರಿಗೆ ನೆರಳಿನ ವ್ಯವಸ್ಥೆ ಹಾಗೂ ವಿದ್ಯುತ್ ಸಂಪರ್ಕದ ವ್ಯವಸ್ಥೆ ಹೀಗೆ ಇನ್ನಿತರ ಮೂಲಭೂತ ಸೌಕರ್ಯಗಳ ಬಗ್ಗೆ ಹೆಚ್ಚು ಗಮನಹರಿಸಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವಂತೆ ಸೂಚಿಸಿದರು.
ಮತದಾನ ಪವಿತ್ರವಾದ ಕಾರ್ಯವಾಗಿದ್ದು, ಜನರಿಗೆ ಧ್ವನಿಯನ್ನು ನೀಡುತ್ತದೆ. ಎಲ್ಲ ಜನಸಾಮಾನ್ಯರು ಮತ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವವನ್ನು ಗಟ್ಟಿಗೊಳಿಸಬೇಕು. ಏ.26 ರಂದು ಜರುಗುವ ಚುನಾವಣೆಯಲ್ಲಿ ಕಡ್ಡಾಯವಾಗಿ ಮತಗಟ್ಟೆ ಕೇಂದ್ರಕ್ಕೆ ಹೋಗಿ ಮತ ಚಲಾಯಿಸುವುದರ ಮೂಲಕ ಸುಭದ್ರ ದೇಶವನ್ನಾಗಿ ನಿರ್ಮಿಸೋಣ. ಮತದಾನ ದಿನದಂದು ನಾವು ಸಮಯ ವ್ಯರ್ಥ ಮಾಡದೆ ಚುನಾವಣೆ ಆಯೋಗ ನಿಗದಿಪಡಿಸಿದ ದಾಖಲೆಗಳನ್ನು ತೆಗೆದುಕೊಂಡು ಹೋಗಿ ಮತ ಚಲಾಯಿಸಬೇಕು. ಈ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸಬೇಕು ಎಂದು ಹೇಳಿದರು.
ದೇಶ, ನಾಡು ಕಟ್ಟುವಲ್ಲಿ ಪ್ರತಿಯೊಬ್ಬರ ಮತ ಮುಖ್ಯವಾಗಿರುತ್ತದೆ. ಯಾರೊಬ್ಬರೂ ಮತದಾನ ಮಾಡಲು ನಿಷ್ಕಾಳಜಿ ತೋರಬಾರದು ಚುನಾವಣೆ ಎಂಬುದು ಪ್ರಜಾಪ್ರಭುತ್ವದ ಹಬ್ಬವಾಗಿದೆ. ಯಾರು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ಖುಷಿಯಿಂದ ಮತ ಚಲಾಯಿಸಬೇಕೆಂದು ತಿಳಿಸದರು.
18 ವರ್ಷ ಮೇಲ್ಪಟ್ಟ ಯುವಕರು, ವೃದ್ಧರು, ವಿಕಲಚೇತನ ಮತದಾರರು ನಿರ್ಭೀತಿಯಿಂದ ಲೋಕಸಭೆ ಚುನಾವಣೆಯಲ್ಲಿ ಮತ ಚಲಾಯಿಸಿ ಪ್ರತಿಶತ ನೂರಕ್ಕೆ ನೂರರಷ್ಟು ಮತದಾನ ಮಾಡಿ ಯೋಗ್ಯ ಹಾಗೂ ಸಮರ್ಥ ನಾಯಕರನ್ನು ಆಯ್ಕೆ ಮಾಡಬೇಕು. ಈ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ಮಾತನಾಡಿ, ಬಿಎಲ್ಒ ಗಳು ಬೂತ್ ಮಟ್ಟದಲ್ಲಿ ಜನರಿಗೆ ಚುನಾವಣೆ ಬಗ್ಗೆ ಜಾಗೃತಿ ಮೂಡಿಸಲು ವಹಿಸಬಹುದಾದ ಕಾರ್ಯವೈಖರಿ ಬಗ್ಗೆ ಮಾಹಿತಿ ನೀಡಿದರು.
ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಸೀ ವಿಸಿಲ್ ಆ್ಯಪ್ ಅನ್ನು ಹೇಗೆ ಬಳಸಬೇಕು. ಅದರ ಬಗ್ಗೆ ಜನರಿಗೆ ಯಾವ ರೀತಿ ಮಾಹಿತಿ ನೀಡಬೇಕು ಎಂಬುವುದರ ಬಗ್ಗೆ ತಿಳಿಸಿ ಮತಗಟ್ಟೆ ಅಧಿಕಾರಿಗಳು ಬೂತ್ ಮಟ್ಟದಲ್ಲಿ ವಹಿಸಬಹುದಾದ ಕರ್ತವ್ಯ ಮತ್ತು ಜವಾಬ್ದಾರಿಗಳ ಬಗ್ಗೆ ವಿವರಿಸಿದರು.
ಸಂಪನ್ಮೂಲ ವ್ಯಕ್ತಿಯಾದ ಕೆ.ಪಿ.ಜಯಕುಮಾರ್ ಮಾತನಾಡಿ, ಬೂತ್ ಮಟ್ಟದಲ್ಲಿ ಹಾಡಿನ ಮೂಲಕ ಮತದಾರರಿಗೆ ಜಾಗೃತಿ ಮೂಡಿಸುವುದು ಹೇಗೆ, ಮತದಾರರ ಪಟ್ಟಿಯನ್ನು ಪರಿಷ್ಕರಣೆ ಮಾಡಿ ಖಾತರಿ ಪಡಿಸುವುದು. ಇ.ವಿ.ಎಂ ಗಳ ಯಾವ ರೀತಿ ಬಳಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಶನಿವಾರಸಂತೆ ವಿಘ್ನೇಶ್ವರ ಮಹಿಳಾ ಕಾಲೇಜಿನ ಸಹಾಯಕ ಪ್ರಾದ್ಯಾಪಕ ಎಸ್.ಎನ್.ಪೂವಯ್ಯ, ಗೌಡಳ್ಳಿ ಪ್ರೌಡಶಾಲೆಯ ಸಹಾಯಕ ಪ್ರಾಧ್ಯಾಪಕ ಕೆ.ಎಸ್.ಕಿರಣ್ ಕುಮಾರ್ ಕೊಡ್ಲಿಪೇಟೆ ಪ.ಪೂ.ಕಾಲೇಜಿನ ಸಹ ಶಿಕ್ಷಕರು, ನೋಡಲ್ ಅಧಿಕಾರಿ ಶಿವಕುಮಾರ್, ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಲೋಕ ನಾಯಕ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕಾಳನಾಯಕ್ ಮತ್ತಿತರರು ಹಾಜರಿದ್ದರು.